Advertisement

ಪಾರ್ಕ್‌ನಲ್ಲೇ ತಯಾರಾದ ಜಯಮಹಲ್‌!

10:07 AM Dec 29, 2017 | |

ಸಾಮಾನ್ಯವಾಗಿ ಸಿನಿಮಾದ ಹಾಡುಗಳು ಹುಟ್ಟಿದ ಸಮಯದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ರೋಡಲ್ಲೋ, ಬಾತ್‌ರೂಮಲ್ಲೋ ಅಥವಾ ಇನ್ನಾವುದೋ ಸ್ಥಳದಲ್ಲೋ ಹಾಡು ಹುಟ್ಟಿದ ಬಗ್ಗೆ ಸ್ವತಃ ಗೀತರಚನೆಕಾರರೇ ಹೇಳಿಕೊಂಡಿರುವುದುಂಟು. ಇನ್ನು, ಕಥೆ, ಚಿತ್ರಕಥೆ ರೆಡಿ ಮಾಡೋಕೆ, ಒಂದು ಕಚೇರಿಯೋ, ಹೋಟೆಲ್‌ನ ಕೊಠಡಿಯೋ ಬಳಸುವುದುಂಟು. ಆದರೆ, ಒಂದು ಸಿನಿಮಾದ ಚಿತ್ರಕಥೆ, ಸಂಭಾಷಣೆ ಹುಟ್ಟಿದ್ದು ಎರಡು ಪಾರ್ಕ್‌ನಲ್ಲಿ ಅಂದರೆ ನಂಬಲೇಬೇಕು. ಹೌದು, ಅದು “ಜಯಮಹಲ್‌’ ಚಿತ್ರ. ಈ ಚಿತ್ರದ ಮೂಲಕ ಹೃದಯ ಶಿವ ನಿರ್ದೇಶಕರಾಗುತ್ತಿದ್ದಾರೆ. ಅವರು ತಮ್ಮ ಮೊದಲ ಚಿತ್ರ “ಜಯಮಹಲ್‌’ ಚಿತ್ರದ ಸಂಭಾಷಣೆ ಬರೆದಿದ್ದು ಕಬ್ಬನ್‌ಪಾರ್ಕ್‌ ನಲ್ಲಿ. ಅಷ್ಟೇ ಅಲ್ಲ, ಚಿತ್ರಕತೆ ಬರೆದಿದ್ದು ಲಾಲ್‌ಬಾಗ್‌ನಲ್ಲಿ. ಸಿನಿಮಾ ಕುರಿತಂತೆ ಸಾಕಷ್ಟು ಚರ್ಚೆಗಳನ್ನೆಲ್ಲ ನಡೆಸಿದ್ದು ಸಹ ಪಾರ್ಕ್‌ಗಳಲ್ಲಿ ಅನ್ನುವುದು ವಿಶೇಷ.

Advertisement

ನಿರ್ದೇಶಕ ಹೃದಯಶಿವ ಸುಮಾರು 100ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರೂ ಅವರಿಗೆ ಎಲ್ಲೋ ಒಂದು ಕಡೆ ನಿರ್ದೇಶನ ಮಾಡುವ ಆಸೆ ಇತ್ತು. ಆದರೆ, ಬರಹಗಾರರಿಗೆ ನಿರ್ದೇಶನ ಪಟ್ಟ ಕೊಟ್ಟರೆ ಹೇಗೋ, ಏನೋ ಅಂತ ಹಲವು ನಿರ್ಮಾಪಕರು ಕಥೆ ಕೇಳಿ ಸುಮ್ಮನಾಗಿದ್ದರಿಂದ ಅವರಿಗೆ ಬೇಸರವಾಗಿದ್ದೂ ನಿಜವಂತೆ. ಕೊನೆಗೆ  ಎರಡು ವರ್ಷಗಳ ಕಾಲ ಮುಂಬೈಗೆ ತೆರಳಿ ಅಲ್ಲಿನ ಗ್ರಂಥಾಲಯದಲ್ಲಿ ತಂತ್ರಜ್ಞಾನ ಕುರಿತಾದ ಒಂದು ಪುಸ್ತಕ ಓದಿ, ಅದರಿಂದ ಸಾಕಷ್ಟು ವಿಷಯ ತಿಳಿದಿದ್ದಾರೆ. ಕೊನೆಗೆ ಸಿನಿಮಾ ಮಾಡೋಕೆ ಸಾಕಷ್ಟು ಸೈಕಲ್‌ ತುಳಿದ ಬಳಿಕ ತನ್ನೂರಿಗೆ ಹಿಂದಿರುಗಿದ್ದಾರೆ. ಆಗ ಸಿಕ್ಕಿದ್ದು ಅವರ ಗೆಳೆಯ ಎಂ.ರೇಣುಕ ಸ್ವರೂಪ್‌. ಹೃದಯ ಶಿವ ಅವರ ಸಂಕಟ ನೋಡಿ, ತಾವೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆಗ ಶುರುವಾದ ಜರ್ನಿ ಈಗ “ಜಯಮಹಲ್‌’ ಮುಗಿದು ರಿಲೀಸ್‌ಗೆ ಅಣಿಯಾಗಿದೆ. ಹೃದಯಶಿವ ಅವರೇ ಚಿತ್ರಕ್ಕೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆ ಜವಬ್ದಾರಿ ಹೊತ್ತು ನಿರ್ದೇಶನ ಮಾಡಿದ್ದಾರೆ.

ಇನ್ನು, ಚಿತ್ರದಲ್ಲಿ ನೀನಾಸಂ ಅಶ್ವತ್ಥ್ ಅವರು ಪ್ರಾಂಶುಪಾಲ ಪಾತ್ರದಲ್ಲಿ ನಟಿಸಿದ್ದು, ವಾಸ್ತವತೆಯನ್ನು ನಂಬುವ, ವಾದಿಸುವ ಮತ್ತು ಸಂಪ್ರದಾಯಸ್ಥ ನಾಗಿರುವ ಮೂರು ಶೇಡ್‌ಗಳಲ್ಲಿ ನಟಿಸಿದ್ದಾರೆ. ಅದೊಂಥರಾ ನಾಯಕನ ಪಾತ್ರ ಎನ್ನಬಹುದು. ಅದನ್ನೆಲ್ಲಾ ಹೇಳಿಕೊಂಡು ಖುಷಿಗೊಂಡರು ನೀನಾಸಂ ಅಶ್ವತ್ಥ್. ಶುಭಾ ಪೂಂಜಾ ಇಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರದು ವಿದೇಶದಿಂದ ಭಾರತಕ್ಕೆ ಮರಳುವ ಪಾತ್ರವಂತೆ. ಇದೊಂದು ಹಾರರ್‌  ಥ್ರಿಲ್ಲರ್‌ ಅಂಶಗಳನ್ನು ಹೊಂದಿರುವ ಈ ಚಿತ್ರ ಹೊಸ ತರಹದ್ದು ಎನುತ್ತಾರೆ ಅವರು.

ಕರಿಸುಬ್ಬು ಗ್ರಂಥಪಾಲಕರಾಗಿ ನಟಿಸಿದ್ದಾರಂತೆ. ಸಂಕಲನಕಾರ ಎನ್‌.ಎಂ.ವಿಶ್ವ ಅವರು ಛಾಯಾಗ್ರಾಹಕ ನಾಗಾರ್ಜುನ್‌ ಅವರ ಕ್ಯಾಮೆರಾ ಕೆಲಸವನ್ನು ಹೊಗಳಿದರು. ವಕೀಲರಾಗಿರುವ ಮೋಟಕಾನಹಳ್ಳಿ ಎಂ.ರೇಣುಕ ಸ್ವರೂಪ್‌ ಇಲ್ಲಿಯವರೆವಿಗೂ 1.75 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡರು. ಜ್ಯೂಡ ಸ್ಯಾಂಡಿ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಇದು ಕನ್ನಡ ಮತ್ತು ತಮಿಳಿನಲ್ಲಿ ತಯಾರಾಗಿರುವ ಚಿತ್ರ. ತಮಿಳಿನಲ್ಲಿ “ಮಾತಂಗಿ’ ಹೆಸರಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇಷ್ಟೆಲ್ಲಾ ಹೇಳಿಕೊಂಡಿದ್ದು ಚಿತ್ರದ ಆಡಿಯೋ ಸಿಡಿ ಬಿಡುಗಡೆಯಲ್ಲಿ.

Advertisement

Udayavani is now on Telegram. Click here to join our channel and stay updated with the latest news.

Next