ಬೆಂಗಳೂರು: ರಾಜ್ಯ ಹೆದ್ದಾರಿ ಪ್ರಾಧಿಕಾರದ ಮಾಜಿ ಮುಖ್ಯ ಯೋಜನಾಧಿಕಾರಿ ಎಸ್.ಸಿ. ಜಯಚಂದ್ರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಕಪ್ಪು -ಬಿಳಿ ದಂಧೆ ಪ್ರಕರಣದ ವಿಚಾರಣೆಯನ್ನು ಒಂದೇ ನ್ಯಾಯಾಲಯ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣ ಸಂಬಂಧ ಇ.ಡಿ ವಿಶೇಷ ನ್ಯಾಯಾಲಯ ಹಾಗೂ ಸಿಟಿ ಸಿವಿಲ್ ಕೋರ್ಟ್ (ಸಿಸಿಎಚ್ 1)ನಲ್ಲಿನ ವಿಚಾರಣೆಯನ್ನು ಒಂದೇ ನ್ಯಾಯಾಲಯದಲ್ಲಿ ನಡೆಸಬೇಕು ಹಾಗೂ ಮಧ್ಯಂತರ ಜಾಮೀನು ಮಂಜೂರಿಗೆ ಷರತ್ತುಗಳನ್ನು ಪೂರೈಸಿದ್ದರೂ ಬಿಡುಗಡೆ ಗೊಳಿಸದ ಇ.ಡಿ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಎಸ್.ಸಿ. ಜಯಚಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೋಮವಾರ ನಡೆಯಿತು.
ಅರ್ಜಿದಾರರ ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿ, ಯಾವುದೇ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ ಜಾರಿಯಾಗಲೇಬೇಕು ಎಂಬ ನಿಯಮವಿದ್ದರೂ ತಮ್ಮ ಕಕ್ಷಿದಾರರ ಜಾಮೀನು ಆದೇಶ ತಡೆಹಿಡಿಯಲಾಗಿದೆ. ಮತ್ತೂಂದೆಡೆ ಇ.ಡಿ ದಾಖಲಿಸಿರುವ ಒಂದೇ ಪ್ರಕರಣದಲ್ಲಿ ಒಂದು ನ್ಯಾಯಾಲಯಲ್ಲಿ ಇಸಿಆರ್ ದಾಖಲಿಸಿದ್ದಾರೆ. ಮತ್ತೂಂದು ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದರಿಂದ ತಮ್ಮ ಕಕ್ಷಿದಾರನಿಗೆ ಎರಡು ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸುವಂತಾಗಿದೆ. ಹೀಗಾಗಿ ಇ.ಡಿ ನ್ಯಾಯಾಲಯ ತನ್ನ ಆದೇಶದಂತೆ ಭದ್ರತಾ ಖಾತ್ರಿ ಪಡೆದು ಬಿಡುಗಡೆಗೊಳಿಸುವಂತೆ ಆದೇಶಿಸಬೇಕು. ಅಲ್ಲದೆ ಒಂದೇ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸುವಂತೆ ನಿರ್ದೇಶಿಸುವಂತೆ ಕೋರಿದರು.
ಈ ವಾದ ಪುರಸ್ಕರಿಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ಜಾಮೀನು ಅರ್ಜಿಯನ್ನು ಅಧೀನ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಅರ್ಜಿದಾರರಿಗೆ ಸೂಚಿಸಿತು. ಜತೆಗೆ ಎರಡು ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಸಿಸಿಎಚ್ 1ರಲ್ಲಿ ನಡೆಸುವಂತೆ ನಿರ್ದೇಶಿಸಿತು.