ಚಂಡೀಗಢ : ಹರಿಯಾಣದಲ್ಲಿ ಕಳೆದ 28 ದಿನಗಳಿಂದ ಮೀಸಲಾತಿಯನ್ನು ಆಗ್ರಹಿಸಿ ಆಂದೋಲನ ನಡೆಸುತ್ತಿರುವ ಜಾಟರು ನಾಳೆ ಫೆ.26ರ ಭಾನುವಾರ ರಾಜ್ಯದಲ್ಲಿ ಕಪ್ಪು ದಿನವನ್ನು ಆಚರಿಸಲಿದ್ದಾರೆ.
ಸರಕಾರದ ನೀತಿಯನ್ನು ವಿರೋಧಿಸಲು ನಾಳೆ ಫೆ.26ರ ಭಾನುವಾರ ರಾಜ್ಯಾದ್ಯಂತ ಜಾಟ್ ಸಮುದಾಯದ ಸದಸ್ಯರು ಕಪ್ಪು ಮುಂಡಾಸು, ಕಪ್ಪು ಟೋಪಿ, ಕಪ್ಪು ರಿಬ್ಬನ್ ಹಾಗೂ ಕೈಗೆ ಕಪ್ಪು ಪಟ್ಟಿಯನ್ನು ಧರಿಸಬೇಕು ಎಂದು ಆಂದೋಲನದ ನೇತೃತ್ವ ವಹಿಸಿರುವ ಅಖೀಲ ಭಾರತ ಜಾಟ್ ಆರಕ್ಷಣ ಸಂಘರ್ಷ ಸಮಿತಿಯ ಅಧ್ಯಕ್ಷ ಯಶ್‌ಪಾಲ್ ಮಲಿಕ್ ಹೇಳಿದ್ದಾರೆ.
ಮಾರ್ಚ್ 1ರಿಂದ ಪ್ರತಿಭಟನಕಾರರು ಸರಕಾರದೊಂದಿಗೆ ಸಹಕರಿಸುವುದಿಲ್ಲ. ಯಾರೊಬ್ಬರು ನೀರು, ವಿದ್ಯುತ್ ಬಿಲ್ ಪಾವತಿಸುವುದಿಲ್ಲ; ಸರಕಾರಕ್ಕೆ ಬಾಕಿ ಇರುವ ಸಾಲದ ಕಂತು ಕಟ್ಟುವುದಿಲ್ಲ ಎಂದು ಮಲಿಕ್ ಹೇಳಿದರು.
ಸಂಸತ್ತಿಗೂ ಮುತ್ತಿಗೆ ಹಾಕುವ ಯೋಜನೆ ಇದ್ದು ಅದರ ದಿನಾಂಕವನ್ನು ಮಾರ್ಚ್ 2ರಂದು ಪ್ರಕಟಿಸಲಾಗುವುದು. ಅಂದು ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿನ ಜಾಟರು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ಮೀಸಲು ವಿಷಯದಲ್ಲಿ ಮನವಿಯನ್ನು ಸಲ್ಲಿಸುವರು ಎಂದು ಮಲಿಕ್ ಹೇಳಿದರು.
ಈ ನಡುವೆ ಹರಿಯಾಣದಲ್ಲಿನ ಪ್ರಧಾನ ವಿರೋಧ ಪಕ್ಷವಾಗಿರುವ ಐಎನ್‌ಎಲ್‌ಡಿ ಈ ಬಾರಿ ಜಾಟ್ ಆಂದೋಲನಕ್ಕೆ ತನ್ನ ಬೆಂಬಲವನ್ನು ಪ್ರಕಟಿಸಿದ್ದು ಸರಕಾರ ಜಾಟರ ಬೇಡಿಕೆಗಳನ್ನು ಪೂರೈಸಬೇಕೆಂದು ಕೇಳಿಕೊಂಡಿದೆ.
ಜಾಟರ ಈ ಹೊಸ ಚಳವಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಸೂಕ್ಷ್ಮ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ಅರೆಸೈನಿಕ ಪಡೆಯನ್ನು ನಿಯೋಜಿಸಲಾಗಿದೆ; ರಾಜ್ಯ ಪೊಲೀಸರನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.