ನವದೆಹಲಿ: ಜಗತ್ತಿನ ಅತ್ಯಂತ ಟ್ರಾವೆಲ್ ಫ್ರೆಂಡ್ಲಿ ಹಾಗೂ ಕಳಪೆ ಪಾಸ್ ಪೋರ್ಟ್ ಪಟ್ಟಿಯನ್ನು ಹೆನ್ಲೆ ಪಾಸ್ ಪೋರ್ಟ್ ಇಂಡೆಕ್ಸ್ ಬುಧವಾರ ಬಿಡುಗಡೆ ಮಾಡಿದ್ದು, ಈ ಪ್ರಕಾರ ಜಪಾನ್ ವಿಶ್ವದ ಅತ್ಯಂತ ಪವರ್ ಫುಲ್ ಪಾಸ್ ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸಿಂಗಾಪುರ್ ಎರಡನೇ ಸ್ಥಾನ ಪಡೆದಿದೆ.
2020ರಲ್ಲಿ ಭಾರತ 84ನೇ ಸ್ಥಾನ ಗಳಿಸುವ ಮೂಲಕ ಕಳೆದ ಬಾರಿಗಿಂತ ಈ ಸಲ 2 ಸ್ಥಾನ ಕುಸಿತ ಕಂಡಿದೆ. ಹೆನ್ಲೆ ಪಾಸ್ ಪೋರ್ಟ್ ಸೂಚಿ ಪ್ರಕಾರ, ಭಾರತೀಯರು 58 ದೇಶಗಳಿಗೆ ವೀಸಾ ಫ್ರೀ ಪ್ರವೇಶ ಅವಕಾಶ ಪಡೆಯಲಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಯಾನ ಪ್ರಾಧಿಕಾರ(ಐಎಟಿಎ) ಸುಮಾರು 227 ತಾಣಗಳಿಂದ ಮಾಹಿತಿ ಸಂಗ್ರಹಿಸಿ 199 ಪಾಸ್ ಪೋರ್ಟ್ ಗಳನ್ನು ಹೋಲಿಸಿ, ಈ ಅಂಕಿ ಅಂಶ ನೀಡಿದೆ.
ಜಪಾನಿಗರು ಟ್ರಾವೆಲ್ ಫ್ರೆಂಡ್ಲಿ ಪಾಸ್ ಪೋರ್ಟ್ ಹೊಂದಿದ್ದು, ಅವರು ವೀಸಾ ಇಲ್ಲದೆಯೇ ಜಗತ್ತಿನ 191 ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಪಾಕಿಸ್ತಾನ ಪಾಸ್ ಪೋರ್ಟ್ ಇಂಡೆಕ್ಸ್ ನಲ್ಲಿ 104ನೇ ಸ್ಥಾನ ಪಡೆದಿದ್ದು, ಪಾಕಿಸ್ತಾನಿ ಪಾಸ್ ಪೋರ್ಟ್ ನಲ್ಲಿ ವೀಸಾ ರಹಿತವಾಗಿ 32 ದೇಶಗಳಿಗೆ ಭೇಟಿ ನೀಡಬಹುದಾಗಿದೆ.
ಕಳೆದ ವರ್ಷ ಪಾಕಿಸ್ತಾನಿ ಪಾಸ್ ಪೋರ್ಟ್ 5ನೇ ಅತೀ ಕೆಟ್ಟ ಪಾಸ್ ಪೋರ್ಟ್ ಸ್ಥಾನ ಪಡೆದಿತ್ತು. ಈ ಬಾರಿ 4ನೇ ಕಳಪೆ ಪಾಸ್ ಪೋರ್ಟ್ ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನಕ್ಕಿಂತ ಪಾಕಿಸ್ತಾನ ಪಾಸ್ ಪೋರ್ಟ್ ರಾಂಕಿಂಗ್ ನಲ್ಲಿ ಮೇಲಕ್ಕೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಸಿಂಗಾಪುರ್ ಹಾಗೂ ದಕ್ಷಿಣ ಕೊರಿಯಾ ಪಾಸ್ ಪೋರ್ಟ್ 189 ದೇಶಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸಿದ್ದು 2ನೇ ಸ್ಥಾನದಲ್ಲಿದೆ. ಅಮೆರಿಕ ಈ ಬಾರಿ 8ನೇ ಸ್ಥಾನಕ್ಕೆ ಕುಸಿದಿದೆ. ಬ್ರಿಟನ್, ನಾರ್ವೆ, ಗ್ರೀಸ್, ಬೆಲ್ಜಿಯಂ 8ನೇ ಸ್ಥಾನದಲ್ಲಿದ್ದು, ಕೆನಡಾ 9ನೇ ಸ್ಥಾನ ಪಡೆದಿದೆ. ಹತ್ತು ವರ್ಷಗಳ ಹಿಂದೆ ಯುನೈಟೆಡ್ ಕಿಂಗ್ ಡಮ್ ಒಂದನೇ ಸ್ಥಾನದಲ್ಲಿತ್ತು. ಯುನೈಟೆಡ್ ಕಿಂಗ್ ಡಮ್ ಪಾಸ್ ಪೋರ್ಟ್ ವೀಸಾ ರಹಿತವಾಗಿ 166 ದೇಶಗಳಿಗೆ ಭೇಟಿ ನೀಡಬಹುದಾಗಿತ್ತು ಎಂದು ಇಂಡೆಕ್ಸ್ ಅಂಕಿಅಂಶ ವಿವರಿಸಿದೆ.