Advertisement

ದಯವಿಟ್ಟು ಬರಬೇಡಿ; ನಿಮಗಿಲ್ಲ ಸ್ವಾಗತ! : ಜಪಾನ್

09:50 AM Jul 05, 2020 | sudhir |

ಹೊಸದಿಲ್ಲಿ/ಟೋಕಿಯೋ: ಲಡಾಖ್‌ ಮೇಲೆ ಕಣ್ಣು ಹಾಕಿ ಯುದ್ದೋನ್ಮಾದ ಪ್ರದರ್ಶಿಸಿದ್ದ ಚೀನಗೆ ಈಗ ಎಲ್ಲ ದಿಕ್ಕುಗಳಿಂದಲೂ ಪೆಟ್ಟು ಬೀಳತೊಡಗಿದೆ. ಅಮೆರಿಕ, ಮ್ಯಾನ್ಮಾರ್‌ನಿಂದ ತರಾಟೆಗೆ ಗುರಿಯಾದ ಚೀನಗೆ ಈಗ ಜಪಾನ್‌ ಕೂಡ ಪಾಠ ಕಲಿಸಲು ಮುಂದಾಗಿದೆ. 2008ರ ಬಳಿಕ ಇದೇ ಮೊದಲ ಬಾರಿಗೆ ಜಪಾನ್‌ ಭೇಟಿ ನೀಡಲು ನಿರ್ಧರಿಸಿದ್ದ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಸ್ವಾಗತವಿಲ್ಲ ಎಂಬ ಫ‌ಲಕ ತೋರಿಸಲು ಜಪಾನ್‌ ಸಿದ್ಧತೆ ನಡೆಸಿದೆ.

Advertisement

ಜಿನ್‌ಪಿಂಗ್‌ ಅವರ ಪ್ರವಾಸ ರದ್ದು ಮಾಡಿ, ನಮ್ಮ ದೇಶಕ್ಕೆ ಕಾಲಿಡಬೇಡಿ ಎಂಬ ಸಂದೇಶ ರವಾನಿಸಲು ಜಪಾನ್‌ ಸರಕಾರ ಮುಂದಾಗಿದೆ. ಹಾಂಕಾಂಗ್‌ ಮೇಲೆ ರಾಷ್ಟ್ರೀಯ ಭದ್ರತಾ ಕಾನೂನನ್ನು ಅನ್ವಯಗೊಳಿಸಿದ್ದು, ಭಾರತ ದೊಂದಿಗೆ ಕಾಲು ಕೆರೆದುಕೊಂಡು ಬಂದಿದ್ದು, ಜಪಾನ್‌ನ ಜಲಗಡಿಯಲ್ಲಿ ಚೀನ ಕ್ಯಾತೆ ತೆಗೆಯುತ್ತಿರು­ವುದು ಮುಂತಾದ ಕಾರಣಗಳಿಂದಾಗಿ ಜಪಾನ್‌ ಪ್ರಧಾನಿ ಶಿಂಜೋ ಅಭೆ ಅವರ ಲಿಬರಲ್‌ ಡೆಮಾಕ್ರಾಟಿಕ್‌ ಪಕ್ಷದೊಳಗೆಯೇ ಜಿನ್‌ಪಿಂಗ್‌ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಕಷ್ಟ ಕಾಲವನ್ನೇ ಲಾಭಕ್ಕೆ ಬಳಸಿಕೊಂಡು, ಆಕ್ರಮಣಕಾರಿ ನೀತಿ ಪ್ರದರ್ಶಿಸುತ್ತಿರುವ ಚೀನವನ್ನು ದೂರವಿಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಅಬೆ ಬಂದಿದ್ದಾರೆ. ಹೀಗಾಗಿ, ಜಿನ್‌ಪಿಂಗ್‌ ಭೇಟಿ ರದ್ದಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಯ್ಕಟ್‌ ಚೀನ ಪ್ರತಿಭಟನೆ: ಅಮೆರಿಕದ ನ್ಯೂಯಾ­­ರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಶನಿವಾರ ಭಾರತೀಯ-­ಅಮೆರಿಕನ್ನರು “ಚೀನ ಬಹಿಷ್ಕರಿಸಿ’ ಪ್ರತಿಭಟನೆಯನ್ನು ನಡೆಸಿದ್ದಾರೆ. ಭಾರತದೊಂದಿಗೆ ಕಾಲು ಕೆರೆದುಕೊಂಡು ಬರುತ್ತಿರುವ ಚೀನಗೆ ಆರ್ಥಿಕ ಬಹಿಷ್ಕಾರ ಹೇರಬೇಕು ಮತ್ತು ಆ ದೇಶವನ್ನು ರಾಜತಾಂತ್ರಿ­ಕವಾಗಿ ಏಕಾಂಗಿಯಾಗಿ­ಸಬೇಕು ಎಂದು ಪ್ರತಿಭಟನಾ­ಕಾರರು ಆಗ್ರಹಿಸಿದ್ದಾರೆ.

ಫೋಟೋ ವೈರಲ್‌: ಶುಕ್ರವಾರ ಲಡಾಖ್‌ಗೆ ಭೇಟಿ ನೀಡಿ ಚೀನಗೆ ಖಡಕ್‌ ಸಂದೇಶ ರವಾನಿಸಿದ್ದ ಪ್ರಧಾನಿ ಮೋದಿ ಅವರು, ಲಡಾಖ್‌ನಲ್ಲಿ ಸಿಂಧೂ ನದಿಗೆ ಪೂಜೆ ಸಲ್ಲಿಸಿರುವ ಫೋಟೋಗಳು ಶನಿವಾರ ವೈರಲ್‌ ಆಗಿವೆ. ಮೋದಿ ಫೋಟೋಗಳನ್ನು ಟ್ವಿಟರ್‌ಗೆ ಅಪ್‌ಲೋಡ್‌ ಮಾಡಿ, “ನಿನ್ನೆ ನಿಮ್ಮುವಿನಲ್ಲಿ ಸಿಂಧೂ ಪೂಜೆ ಸಲ್ಲಿಸಿದೆ. ದೇಶದ ಶಾಂತಿ, ಪ್ರಗತಿ, ಸಮೃದ್ಧಿಗಾಗಿ ಪ್ರಾರ್ಥಿಸಿದೆ’ ಎಂದು ಬರೆದಿದ್ದಾರೆ.

ದುರುದ್ದೇಶಪೂರಿತ ಟೀಕೆ ಎಂದ ಸೇನೆ
ಲೇಹ್‌ನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಭೇಟಿ ನೀಡಿದ ಸೇನಾ ಆಸ್ಪತ್ರೆಯ ವೈದ್ಯಕೀಯ ವ್ಯವಸ್ಥೆಗಳ ಕುರಿತು ಸಾಮಾಜಿಕ ಜಾಲ­ತಾಣ­ಗಳಲ್ಲಿ ಕೇಳಿಬಂದಿರುವ ಟೀಕೆಯು ದುರುದ್ದೇಶಪೂರಿತ ಹಾಗೂ ಆಧಾರರಹಿತ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ. ಯೋಧರಿದ್ದ ಕೊಠಡಿಯು ಆಸ್ಪತ್ರೆಯಂತೆ ಕಾಣುತ್ತಿಲ್ಲ, ಅಲ್ಲಿ ಮೆಡಿಸಿನ್‌ ಕ್ಯಾಬಿನೆಟ್‌ ಹಾಗೂ ಇತರೆ ಯಾವುದೇ ವೈದ್ಯಕೀಯ ಉಪಕರಣಗಳೇ ಇಲ್ಲ ಎಂದು ಹಲವರು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಸೇನೆ, ಕೆಲವರು ದುರುದ್ದೇಶಪೂರಿತ ಆರೋಪ ಮಾಡುತ್ತಿದ್ದಾರೆ. ನಾವು ನಮ್ಮ ಸಶಸ್ತ್ರ ಪಡೆಯ ಯೋಧರಿಗೆ ಅತ್ಯುತ್ತಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿದ್ದೇವೆ. ಯೋಧರಿದ್ದ ಕೊಠಡಿಯು ಜನರಲ್‌ ಹಾಸ್ಪಿಟಲ್‌ ಸಂಕೀರ್ಣದ ಭಾಗವೇ ಆಗಿದೆ. ಕೊರೊನಾ ಇರುವ ಕಾರಣ ಆಸ್ಪತ್ರೆಯ ಕೆಲ ವಾರ್ಡ್‌ಗಳನ್ನು ಐಸೋಲೇಷನ್‌ ಕೇಂದ್ರವಾಗಿ ಮಾರ್ಪ­ಡಿಸಿದ್ದೇವೆ. ಆಡಿಯೋ ವಿಡಿಯೋ ತರ­ಬೇತಿಗೆ ಬಳಸಲಾಗುತ್ತಿದ್ದ ಹಾಲ್‌ ಅನ್ನು ಆಸ್ಪತ್ರೆ ವಾರ್ಡ್‌ ಆಗಿ ಬದಲಿ­ಸಿ­ದ್ದೇವೆ. ಅಲ್ಲೇ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next