Advertisement

ಜ. 4-6: ರಜತ ಆಳ್ವಾಸ್‌ ವಿರಾಸತ್‌

04:54 AM Jan 02, 2019 | Team Udayavani |

ಮಂಗಳೂರು: ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 25ನೇ ವರ್ಷದ ‘ಆಳ್ವಾಸ್‌ ವಿರಾಸತ್‌’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ಜ. 4ರಿಂದ 6ರ ತನಕ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Advertisement

ವಿರಾಸತ್‌ಗೆ ಈ ವರ್ಷ ಬೆಳ್ಳಿಹಬ್ಬದ ಸಂಭ್ರಮ. ಪುತ್ತಿಗೆಯ ವಿವೇಕಾನಂದ ನಗರದ ಆಳ್ವಾಸ್‌ ಆವರಣದಲ್ಲಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ವೈವಿಧ್ಯಪೂರ್ಣ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರಗಲಿವೆ ಎಂದರು.

ಜ. 4ರಂದು ಸಂಜೆ 5.15ಕ್ಕೆ ಸಾಂಸ್ಕೃತಿಕ ಮೆರವಣಿಗೆ, 5.30ಕ್ಕೆ ಉದ್ಘಾಟನೆ ನಡೆಯಲಿದೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಉದ್ಘಾಟಿಸುವರು. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಎ. ಉಮಾನಾಥ ಕೋಟ್ಯಾನ್‌, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್‌, ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಭಾಗವಹಿಸಲಿದ್ದಾರೆ. ರಜತ ಮಹೋತ್ಸವದ ಗೌರವಾರ್ಥ ಭಾರತೀಯ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಗುವುದು. ಹಿನ್ನೆಲೆ ಗಾಯಕ ಪದ್ಮಶ್ರೀ ಹರಿಹರನ್‌ ಅವರಿಗೆ ಆಳ್ವಾಸ್‌ ವಿರಾಸತ್‌-2019 ಪ್ರಶಸ್ತಿಯನ್ನು ಈ ವೇಳೆ ಪ್ರದಾನ ಮಾಡಲಾಗುವುದು ಎಂದರು. ಕನ್ನಡ ವಿಭಾಗ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು. 

ಸಾಂಸ್ಕೃತಿಕ ಕಾರ್ಯಕ್ರಮ
ಜ. 4ರಂದು ಸಂಜೆ 7ರಿಂದ ‘ಕಲೋನಿಯಲ್‌ ಕಸಿನ್ಸ್‌’ ಖ್ಯಾತಿಯ ಹರಿಹರನ್‌ ಮತ್ತು ಲೆಸ್ಲೆ ಲಿವಿಸ್‌ ಕಲಾವಿದರಿಂದ ರಸ ಸಂಯೋಗ, ರಾತ್ರಿ 9.15ರಿಂದ ಆಳ್ವಾಸ್‌ ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ. ಜ. 5ರಂದು ಸಂಜೆ 6ರಿಂದ ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕ ಸುಖೀÌಂದರ್‌ ಸಿಂಗ್‌ ಮತ್ತು ಬಳಗದಿಂದ ಗಾನತರಂಗ, 8.10ರಿಂದ ಬೆಂಗಳೂರಿನ ನೃತ್ಯಾಂತರ್‌ ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್ನಿಂದ ಒಡಿಸ್ಸಿ ನೃತ್ಯ ನಡೆಯಲಿದೆ. 8.45ರಿಂದ ಚೆನ್ನೈಯ ಶೈಲಸುಧಾ ಅಕಾಡೆಮಿಯಿಂದ ಕೂಚುಪುಡಿ ನೃತ್ಯ, 9.35ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. 6ರಂದು ಸಂಜೆ 6ರಿಂದ ಶಂಕರ್‌ ಮಹಾದೇವನ್‌, ಸಿದ್ಧಾರ್ಥ್ ಮಹಾದೇವನ್‌ ಮತ್ತು ಶಿವಂ ಮಹಾದೇವನ್‌ ತಂಡದಿಂದ ಚಿತ್ರ ರಸಸಂಜೆ, ರಾತ್ರಿ 8.10ರಿಂದ ಕೋಲ್ಕತಾದ ಪರಂಪರಾದವರಿಂದ ರಂಗಭಾರತಿ- ಕಲರ್ ಆಫ್‌ ಭರತನಾಟ್ಯಂ, ರಾತ್ರಿ 9.35ರಿಂದ ಆಳ್ವಾಸ್‌ ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ .

ಉಚಿತ ಬಸ್‌ ವ್ಯವಸ್ಥೆ
50 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ತಿಂಡಿ-ತಿನಿಸುಗಳ ಮಳಿಗೆಗಳು ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಇರಲಿವೆ. ವಿಶಾಲ ಪಾರ್ಕಿಂಗ್‌ ಅವಕಾಶವನ್ನೂ ರೂಪಿಸಲಾಗಿದೆ. ಪೇಟೆಯಿಂದ ಪುತ್ತಿಗೆಗೆ ಮತ್ತು ಪುತ್ತಿಗೆಯಿಂದ ಪೇಟೆಯ ವರೆಗೆ ಉಚಿತ ಬಸ್‌ ವ್ಯವಸ್ಥೆಯನ್ನೂ ಮೂರು ದಿನ ಕಲ್ಪಿಸಲಾಗುತ್ತದೆ. ಪುತ್ತಿಗೆಗೆ ಹೋಗುವ ಉಚಿತ ಸೇವೆಯ ಬಸ್‌ ಗಳ ನಿಲ್ದಾಣವು ಮೂಡುಬಿದಿರೆಯ ನಿಶ್ಮಿತಾ ಟವರ್ ಬಳಿ ಇರುತ್ತವೆ ಎಂದು ಡಾ| ಮೋಹನ ಆಳ್ವ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next