Advertisement

ಜಾನಿ ಹಾಡು ಬಂತಪ್ಪಾ…!

08:15 AM Mar 16, 2018 | |

ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಇಬ್ಬರೂ “ಜಾನಿ ಜಾನಿ ಎಸ್‌ ಪಪ್ಪಾ’ ಚಿತ್ರದ ಕೆಲಸ ಶುರು ಮಾಡಿದಾಗ, ಒಬ್ಬರನ್ನೊಬ್ಬರು ಸಾರ್‌ ಎಂದು ಸಂಬೋಧಿಸುತ್ತಿದ್ದರಂತೆ . ಆದರೆ, ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬರುತ್ತಿದ್ದಂತೆಯೇ, ಇಬ್ಬರೂ ಮಚ್ಚಾ ಅಂತ ಕರೆದುಕೊಳ್ಳೋಕೆ ಶುರು ಮಾಡಿದ್ದಾರೆ. ಇದನ್ನು ಹೇಳಿದ್ದು ಯಾರೋ ಅಲ್ಲ, 
ಖುದ್ದು ನಿರ್ದೇಶಕ ಪ್ರೀತಂ ಗುಬ್ಬಿ. ಹಾಗೆ ಹೇಳುವ ಮೂಲಕ ಚಿತ್ರ ಮುಗಿಯುವ ಹೊತ್ತಿಗೆ ತಾವೆಷ್ಟು ಹತ್ತಿರವಾಗಿದ್ದೇವೆ ಮತ್ತು ಹಾಗೆ ಹತ್ತಿರವಾಗುವ ಮೂಲಕ ಎಷ್ಟು ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂಬುದು ಅವರ ಮಾತಿನ ತಾತ್ಪರ್ಯ.

Advertisement

ಅಂದಹಾಗೆ, ಪ್ರೀತಂ ಈ ಮಾತು ಹೇಳಿದ್ದು “ಜಾನಿ ಜಾನಿ ಎಸ್‌ ಪಪ್ಪಾ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಹಾಡುಗಳು
ಬಿಡುಗಡೆಯಾಗಿದ್ದು ಗಾಲ್ಫ್ ಕೋರ್ಸ್‌ನಲ್ಲಿ. ಬಿಡುಗಡೆ ಮಾಡಿದ್ದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌. ಸಚಿವರು ಬಂದು ಹಾಡುಗಳು
ಬಿಡುಗಡೆ ಮಾಡುವ ಹೊತ್ತಿಗೆ ಚಿತ್ರತಂಡದವರು ಮಾತನಾಡಿ ಮುಗಿಸಿದ್ದರು. ಮೊದಲಿಗೆ ಮಾತನಾಡಿದ್ದು ಪ್ರೀತಂ. ಒಂದು ಫೋನ್‌
ಮತ್ತು ಒಂದು ಮೀಟಿಂಗ್‌ನಲ್ಲಿ ಈ ಚಿತ್ರ ಮಾಡುವ ಮಾತಾಯಿತಂತೆ. “ನನಗೆ ವಿಜಿ ಜೊತೆಗೆ ಇದು ಎರಡನೆಯ ಚಿತ್ರ. ದುನಿಯಾ ಟಾಕೀಸ್‌ ಬ್ಯಾನರ್‌ನಲ್ಲೇ ಚಿತ್ರ ಮಾಡೋಕೆ ಅವಕಾಶ ಸಿಕ್ಕಿತು. ಒಂದು ಫೋನ್‌ ಮತ್ತು ಒಂದು ಮೀಟಿಂಗ್‌ನಲ್ಲಿ ಈ ಚಿತ್ರ
ಮಾಡುವ ಮಾತಾಯಿತು. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಈ ಚಿತ್ರಕ್ಕೆ ಮೊದಲ ಬಾರಿಗೆ ರಚಿತಾ ರಾಮ್‌ ಡಬ್‌ ಮಾಡಿದ್ದಾರೆ. ಎಲ್ಲಾ ಹಾಡುಗಳಿಗೆ ಧನಂಜಯ್‌ ರಂಜನ್‌ ಸಾಹಿತ್ಯ ಬರೆದರೆ, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳ ಸೌಂಡಿಂಗ್‌ ಬೇರೆ ತರಹವೇ ಇದೆ’ ಎಂದರು.

ಅಜನೀಶ್‌ ಮತ್ತು ಧನಂಜಯ್‌ಗೆ ಥ್ಯಾಂಕ್ಸ್‌ ಹೇಳುತ್ತಲೇ ಮಾತು ಪ್ರಾರಂಭಿಸಿದರು “ದುನಿಯಾ’ ವಿಜಯ್‌. “ಧನಂಜಯ್‌ಗೆ ಇವತ್ತಿನ ಯುವಕರ ಪಲ್ಸ್‌ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸರಿಯಾಗಿ ಅಜನೀಶ್‌ ಸಹ ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ನಾನು ಮತ್ತು ಪ್ರೀತು ಹಳೆಯ ಸ್ನೇಹಿತರು. ಜಯಣ್ಣ ಫಿಲಂಸ್‌ ಮೂಲಕ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಹೇಳಿದರು.

ವಿಜಯ್‌ ಮೈಕಿಟ್ಟು ಮೂರೂವರೆ ನಿಮಿಷದೊಳಗೆ ಇನ್ನಿಬ್ಬರು ಮಾತಾಡಿ ಮುಗಿಸಿದ್ದರು. ಮೊದಲು ಮಾತನಾಡಿದ್ದು ಅಜನೀಶ್‌. ಈ
ಚಿತ್ರಕ್ಕೆ ಅವರು ಪುನೀತ್‌ರಿಂದ ಒಂದು ಹಾಡನ್ನು ಹಾಡಿಸಿದ್ದಾರಂತೆ. “ವಿಜಯ್‌ ಅವರ ಮ್ಯಾನರಸಿಂಗೆ ತಕ್ಕ ಹಾಗೆ ಹಾಡುಗಳನ್ನು ಮಾಡಲಾಗಿದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳುತ್ತಲೇ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿ ಮುಗಿಸಿದರು ಅಜನೀಶ್‌. ಇನ್ನು “ಕಿರಿಕ್‌ ಪಾರ್ಟಿ’ ಚಿತ್ರಕ್ಕೆ ಅಜನೀಶ್‌ ಜೊತೆಗೆ ಕೆಲಸ ಮಾಡಿರುವ ಧನಂಜಯ್‌, ಅದನ್ನು ಮೆಲಕು ಹಾಕುತ್ತಲೇ, ಈ
ಅವಕಾಶವನ್ನು ಕೊಟ್ಟ ವಿಜಯ್‌ಗೆ ಥ್ಯಾಂಕ್ಸ್‌ ಹೇಳಿದರು. ಅಷ್ಟೇ ಅಲ್ಲ, “ಅಂಜೋದಿಲ್ಲ ಗಿಂಜೋದಿಲ್ಲ …’ ಎಂಬ ಹಾಡು ತಮ್ಮ
ಇಷ್ಟವಾದ ಹಾಡು ಎಂದು ಹೇಳಿಕೊಂಡರು. ಅಷ್ಟರಲ್ಲಿ ಸಚಿವರು ಬಂದು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ
ಶುಭ ಕೋರಿದರು. ಅವರ ಹಿಂದೆ ಬಂದ ರಚಿತಾ ರಾಮ್‌ ಸಹ ತಮ್ಮ ಅನುಭವ ಗಳನ್ನು ಹಂಚಿ ಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next