Advertisement

ಜಂಗಮರಿಗೆ ಮೀಸಲಾತಿ ಬೇಕು, ಭಕ್ತ ವರ್ಗಕ್ಕೆ ಬೇಡವೆಂದ್ರೆ ಹೇಗೆ?

12:31 PM Nov 06, 2017 | Team Udayavani |

ಹುಬ್ಬಳ್ಳಿ: ಜಂಗಮರಿಗೆ ಮೀಸಲಾತಿ ಸೌಲಭ್ಯ ಬೇಕು. ಭಕ್ತರಾದ ಲಿಂಗಾಯತ ಸಮಾಜಕ್ಕೆ ಸೌಲಭ್ಯ ಬೇಡ ಎಂದರೆ ಹೇಗೆ ಎಂಬುದನ್ನು ಪಂಚ ಪೀಠಾಧೀಶ್ವರರು ಸ್ಪಷ್ಟಪಡಿಸಬೇಕು ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಾವೇಶದಲ್ಲಿ ಮಾತನಾಡಿದರು. ಜಂಗಮರಿಗೆ ಮೀಸಲಾತಿಗೆ ಒತ್ತಾಯಿಸಿ 2002ರಲ್ಲಿ ಪಂಚ ಪೀಠಾಧೀಶ್ವರರು ಅಂದಿನ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು ಎಂದು ಹೇಳಿದರು. 

ಸತ್ಯ ಹೇಳಲು ತೊಂದರೆ ಏನು?: ನಿವೃತ್ತ ಐಎಎಸ್‌ ಅಧಿಕಾರಿ ಡಾ| ಎಸ್‌.ಎಂ. ಜಾಮದಾರ ಮಾತನಾಡಿ, ವೀರಶೈವ ಮಹಾಸಭಾದವರು ಬಸವಣ್ಣ ಲಿಂಗಾಯತ ಧರ್ಮ ಸಂಸ್ಥಾಪಕ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಅವಶ್ಯವೆಂದು ಈ ಹಿಂದೆ ಸುಪ್ರೀಂಕೋಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ ಇದೀಗ ಹೋರಾಟಕ್ಕೆ ವಿರೋಧ ತೋರುತ್ತಿದ್ದಾರೆ.

ಕೆಲ ವಿರಕ್ತ ಮಠಾಧೀಶರ ಮೂಲಕ ಲಿಂಗಾಯತ ಹೋರಾಟ ವಿರುದ್ಧ ಹೇಳಿಕೆ ಕೊಡಿಸಲಾಗುತ್ತಿದೆ. ಬಸವತತ್ವದಡಿ ಪ್ರವಚನ ಮಾಡುವ ಮಠಾಧೀಶರೇ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇದಕ್ಕೆ ರಾಷ್ಟ್ರೀಯ ಬಸವಸೇನೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಲಿದೆ ಎಂದರು.  

ಲಿಂಗಾಯತರಿಗೇಕೆ ಸಚಿವ ಸ್ಥಾನವಿಲ್ಲ: ವಿಧಾನಸಭೆ ಸದಸ್ಯ ಬಿ.ಆರ್‌.ಪಾಟೀಲ ಮಾತನಾಡಿ, ಬಸವಧರ್ಮ ವೈಚಾರಿಕ, ಸಿದ್ಧಾಂತದ ಧರ್ಮವಾಗಿದೆ. ಕೇಂದ್ರ ಸರಕಾರದಲ್ಲಿ 72 ಸಚಿವರಲ್ಲಿ ಸುಮಾರು 42 ಸಚಿವರು ಬ್ರಾಹ್ಮಣರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಬಲ ಸಮುದಾಯ ಲಿಂಗಾಯತರಿಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಪ್ರಶ್ನಿಸಿದರು.  

Advertisement

ಕರ್ನಾಟಕ ದೊಡ್ಡಣ್ಣ: ಮಹಾರಾಷ್ಟ್ರದ ಲಿಂಗಾಯತ ಸಮಾಜದ ಮುಖಂಡ ಅವಿನಾಶ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಕರ್ನಾಟಕ ನಮಗೆಲ್ಲ ಹಿರಿಯ ಸಹೋದರ. ನೀವು ಧ್ವನಿ ಎತ್ತಿರುವುದು ನಮಗೆಲ್ಲ ಆನೆ ಬಲ ತರಿಸಿದೆ. 

ಮಹಾರಾಷ್ಟ್ರದಲ್ಲಿ 1ಕೋಟಿ ಲಿಂಗಾಯತರಿದ್ದಾರೆ. ಸಾಂಗ್ಲಿ, ನಾಗ್ಪುರ ಇನ್ನಿತರ ಕಡೆ ಸಮಾವೇಶ ಮಾಡುತ್ತೇವೆ. ಕರ್ನಾಟಕ ಸ್ವತಂತ್ರ ಧರ್ಮದ ಶಿಫಾರಸ್ಸು ಶೀಘ್ರ ಮಾಡಲಿ. ಮಹಾರಾಷ್ಟ್ರದಿಂದ ಈಗಾಗಲೇ ನೀಡಿದ ಶಿಫಾರಸ್ಸು ಬಾಕಿ ಉಳಿದಿದ್ದು, ಮುಂಬೈನಲ್ಲಿ 10ಲಕ್ಷ ಜನರು ಸೇರಿ ಮತ್ತೆ ಒತ್ತಡ ತರುತ್ತೇವೆ.

ದಿಲ್ಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಗೆ ಲಿಂಗಾಯತ ಶಕ್ತಿ ಪ್ರದರ್ಶನ ಮಾಡೋಣ ಎಂದರು. ತಮಿಳುನಾಡಿನ ಗಣೇಶ ಇನ್ನಿತರರು ಮಾತನಾಡಿದರು. ಧಾರವಾಡದ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಾಗತಿಸಿದರು. 

ಮುಂಡರಗಿಯ ನಿಜಗುಣ ಪ್ರಭು ಸ್ವಾಮೀಜಿ, ಅಥಣಿಯ ಚನ್ನಬಸವ ಸ್ವಾಮೀಜಿ ನಿರೂಪಿಸಿದರು. ಭಾಲ್ಕಿಯ ಬಸಲಿಂಗ ಪಟ್ಟದದೇವರು, ನವಲಗುಂದದ ಬಸವಲಿಂಗ ಸ್ವಾಮೀಜಿ, ಹುಬ್ಬಳ್ಳಿ ರುದ್ರಾಕ್ಷಿಮಠದ ಬಸಲಿಂಗ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಭಾಗಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next