Advertisement

ಜನಸೇವೆಯೇ ಜನಾರ್ದನ ಸೇವೆ: ಪ್ರಮೋದ್‌

03:50 AM Jul 03, 2017 | Karthik A |

ಉಡುಪಿ: ಜನಸೇವೆಗೆಂದು ಜನರಿಂದ ಮತ ಹಾಕಿಸಿಕೊಂಡು ಗೆದ್ದು ;ಜನಪ್ರತಿನಿಧಿ’ ಎಂದೆನಿಸಿಕೊಂಡ ಮೇಲೆ ಆ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕಾದುದು ಆತನ ಕರ್ತವ್ಯ. ಕಳೆದ ನಾಲ್ಕು ವರ್ಷಗಳಿಂದ ವಿಶ್ರಾಂತಿ ಪಡೆಯದೇ ನಿರಂತರ ಜನಸೇವೆಗಾಗಿಯೇ ನನ್ನನ್ನು ನಾನು ಮುಡಿಪಾಗಿಟ್ಟಿದ್ದೇನೆ ಎನ್ನುವ ಪೂರ್ಣ ವಿಶ್ವಾಸ ನನಗಿದೆ. ‘ಜನಸೇವೆಯೇ ಜನಾರ್ದನ ಸೇವೆ’ ಎನ್ನುವಂತೆ ನಿರಂತರ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಮಣಿಪಾಲ ಈಶ್ವರನಗರದ ವೈಷ್ಣವಿ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ ‘ಈಶ್ವರನಗರ ವಾರ್ಡ್‌ ಮಟ್ಟದ ಜನ ಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಮಾದರಿ ಕಾರ್ಯಕ್ರಮ
ಜನರ ಸಮಸ್ಯೆ, ಬೇಡಿಕೆಗಳನ್ನು ಜನರಿಂದಲೇ ಖುದ್ದಾಗಿ ಆಲಿಸಬೇಕೆನ್ನುವ ಉದ್ದೇಶದಿಂದ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿ ಮೂಡಿಬರುತ್ತಿರುವ ಜನ ಸಂಪರ್ಕ ಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಈಗಾಗಲೇ ಪರಿಹಾರ ದೊರಕಿಸಿಕೊಡಲಾಗಿದೆ ಎಂದರು. ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಕಾಣಿಸಿಕೊಂಡಿದೆ. ಆದರೆ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಜೂ. 10ನೇ ತಾರೀಕಿನವರೆಗೆ ನಿರಂತರ ನೀರು ಪೂರೈಸುವಲ್ಲಿ ಉಡುಪಿ ನಗರಸಭೆ ಶ್ರಮಿಸಿದೆ ಎಂದರು.

ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಾಗಿ 370 ಕೋ. ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರುಗೊಳಿಸಿದ್ದಾರೆ. ಸಚಿವನಾದ ಆರಂಭದಲ್ಲಿಯೇ ಗೊಂದಲಕ್ಕೀಡಾದಾಗ ಪಡಿತರ ವ್ಯವಸ್ಥೆಯ ಸಮಸ್ಯೆ ಪರಿಹಾರಕ್ಕಾಗಿ 16,000 ಮಂದಿ ಅರ್ಹ ಫ‌ಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಲಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತನಾದರೂ ಇನ್ನಷ್ಟು ಅಭಿವೃದ್ಧಿ ಕೆಲಸಗಳಿಗೆ ಸರಕಾರದಿಂದ ವಿಶೇಷ ಅನುದಾನವನ್ನೂ ತರಲಾಗಿದೆ. ಇಷ್ಟೆಲ್ಲ ಕಾಮಗಾರಿ ನಡೆದರೂ ಇನ್ನೂ ಉಳಿದುಕೊಂಡಿರುವ ಅಭಿವೃದ್ಧಿ ಕಾಮಗಾರಿಯನ್ನು ಜನರ ಬೇಡಿಕೆ ಮತ್ತು ಹಣ ಮಂಜೂರಾತಿ ಆಧಾರದಲ್ಲಿ ಹಂತಹಂತವಾಗಿ ಮಾಡಿಸಿಕೊಡುತ್ತೇನೆ ಎಂದು ಪ್ರಮೋದ್‌ ತಿಳಿಸಿದರು.

ಫ‌ಲಾನುಭವಿಗಳಿಗೆ ಸವಲತ್ತು ವಿತರಣೆ
ಇದೇ ಸಂದರ್ಭ ಸಚಿವರು ಅರ್ಹ ಫ‌ಲಾನುಭವಿಗಳಿಗೆ ವಿವಿಧ ಪಿಂಚಣಿ, ಸವಲತ್ತುಗಳನ್ನು ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ವಿವಿಧ ಇಲಾಖಾಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ನಗರಸಭೆ ಸದಸ್ಯರಾದ ಜನಾರ್ದನ ಭಂಡಾರ್ಕರ್‌, ಗಣೇಶ್‌ ನೇರ್ಗಿ, ಮಣಿಪಾಲ ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಧಾಕರ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ ವಂದಿಸಿದರು.

Advertisement

‘ಜನಸೇವೆಗೆ ಅಪಾರ ಶಕ್ತಿ ಕೊಡು’ 
ಜನಸೇವೆ ಮಾಡುವುದು ಸುಲಭದ ಕೆಲಸವಲ್ಲ! ಇದಕ್ಕೆ ಶಕ್ತಿ, ಸಾಮರ್ಥ್ಯವಿದ್ದರೆ ಸಾಕಾಗದು. ದೇವರು ಮತ್ತು ಜನರ ಆಶೀರ್ವಾದವೂ ಬೇಕು. ಈ ನೆಲೆಯಲ್ಲಿ “ಜನಸೇವೆಗೆ ಅಪಾರ ಶಕ್ತಿ ಕೊಡು’ ಎನ್ನುವುದಾಗಿ ದೇವರಲ್ಲಿ ಬೇಡುತ್ತೇನೆ ಎಂದು ಸಚಿವರು ತಿಳಿಸಿದರು.

ಸರಕಾರದ ಯೋಜನೆ ಸದುಪಯೋಗಪಡಿಸಿಕೊಳ್ಳಿ
94ಸಿಸಿ ಅಡಿ ಅರ್ಜಿ ಸಲ್ಲಿಸಿದ ಫ‌ಲಾನುಭವಿಗಳಿಗೆ ಕೇವಲ 3 ತಿಂಗಳ ಅವಧಿಯೊಳಗೆ “ಡಿ’ ನೋಟಿಸ್‌ ವಿತರಿಸಲಾಗುವುದು. ನಗರಸಭೆಯಿಂದ ನೂತನ ಮನೆ ನಿರ್ಮಾಣಕ್ಕಾಗಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ 3.20 ಲ.ರೂ. ಮತ್ತಿತರರಿಗೆ 2.70 ಲ.ರೂ. ಸಹಾಯಧನ ನೀಡಲಾಗುವುದು. ‘ಬಡವರ ಬಂಧು’ ಎನಿಸಿದ ಬಿಪಿಎಲ್‌ ಕಾರ್ಡನ್ನು ಮಾಡಿಸಿಕೊಳ್ಳದೇ ಇದ್ದವರು ಶೀಘ್ರವಾಗಿ ಮಾಡಿಸಿಕೊಳ್ಳಬೇಕು. ಸರಕಾರದ ಈ ಎಲ್ಲ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next