ಬಳ್ಳಾರಿ: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ಈಗಾಗಲೇ ಎಲ್ಲ ಸಿದ್ಧತೆ ಮಾಡಲಾಗಿದ್ದು, ಭಾನುವಾರದ ಬೆಳವಣಿಗೆ ನೋಡಿಕೊಂಡು ಮಾತನಾಡುವೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ಧನರೆಡ್ಡಿ ಈ ಭಾಗದ ಹಿರಿಯ ನಾಯಕರು. ಮೊದಲಿನಿಂದಲೂ ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರ ಬಗ್ಗೆ ಪಕ್ಷದ ಎಲ್ಲ ಹಿರಿಯ ರಾಷ್ಟ್ರೀಯ, ರಾಜ್ಯ ನಾಯಕರ ಗಮನಕ್ಕೂ ತರಲಾಗಿದೆ. ಅವರು ಹೇಳಿರುವ ವಿಚಾರಗಳನ್ನೂ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಜನಾರ್ಧನರೆಡ್ಡಿಯವರು ಹೊಸ ಪಕ್ಷ ಕಟ್ಟುವೆ, ಚುನಾವಣೆಯಲ್ಲಿ ಸ್ಪಧಿ ìಸುವೆ ಎಂದು ಎಲ್ಲೂ ಹೇಳಿಲ್ಲ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ರೆಡ್ಡಿಯವರು ಈಗಾಗಲೇ ಹೇಳಿರುವಂತೆ ಭಾನುವಾರದ ಬೆಳವಣಿಗೆ ನೋಡಿಕೊಂಡು ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.
4ರಂದು ಸಿಎಂ ಭೇಟಿ: ನಗರದ ಸರ್ಕಾರಿ ಅತಿಥಿಗೃಹ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಜ.4ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವುದರ ಜತೆಗೆ ಹಲವಾರು ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಮ್ಸ್ ಆವರಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಜತೆಗೆ ಜಿಲ್ಲಾ ಕ್ರೀಡಾಂಗಣದಲ್ಲಿನ ಸಿಂಥೆಟಿಕ್ ಟ್ರಾಕ್ ಉದ್ಘಾಟನೆ ಸೇರಿದಂತೆ ಬಡವರಿಗೆ ಪಟ್ಟಾ ನೀಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿಗಳು ಈ ಭಾಗಕ್ಕೆ ಬಂದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಇನ್ನಷ್ಟು ಕಾಮಗಾರಿಗಳನ್ನು ಸಹ ಪಟ್ಟಿ ಮಾಡಲಾಗುತ್ತಿದ್ದು, ಕೆಲವೊಂದು ಕಾಮಗಾರಿಗಳಿಗೆ ಅಂದು ಭೂಮಿಪೂಜೆ ಮಾಡಲಾಗುತ್ತದೆ ಎಂದು ವಿವರಿಸಿದರು.