ಬೆಂಗಳೂರು: ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನರೆಡ್ಡಿ, ಪ್ರಕರಣದ ಆರೋಪಿ ಫರೀದ್ ಮನೆ ಮತ್ತು ಅಲಿಖಾನ್‌ಗೆ ಸೇರಿದ ಆಸ್ತಿಗಳ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆ್ಯಂಬಿಡೆಂಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ ನೂರಾರು ಮಂದಿ ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್ ಆರೋಪಿತ ವ್ಯಕ್ತಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ಬಂದ ಹಣದಲ್ಲಿ ಗ್ರಾಹಕರಿಗೆ ಹಿಂದಿರುಗಿಸುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಜನಾರ್ದನ ರೆಡ್ಡಿ ಅವರಿಗೆ ಸೇರಿದ ಬೆಂಗಳೂರಿನ ಪಾರಿಜಾತ ನಿವಾಸ, ಡಿ.ಜಿ.ಹಳ್ಳಿಯಲ್ಲಿರುವ ಫರೀದ್ ನಿವಾಸ, ಆಸ್ತಿ, ಹಾಗೂ ಅಲಿಖಾನ್‌ಗೆ ಸೇರಿದ ಆಸ್ತಿ ಸೇರಿದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಿದ್ದಾರೆ.
ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನೂರಾರು ಮಂದಿ ಗ್ರಾಹಕರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸುತ್ತಿತ್ತು. ಆದರೆ, ನಿಗದಿತ ಸಮಯಕ್ಕೆ ಹಿಂದಿರುಗಿಸದೆ ವಂಚಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಫರೀದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಅಲ್ಲದೆ, ಈ ತನಿಖೆ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಉದ್ಯಮಿ ಅಲಿಖಾನ್, ಬಳ್ಳಾರಿ ಆಭರಣ ಮಳಿಗೆ ಮಾಲೀಕ ರಮೇಶ್, ಫರೀದ್ ಹಾಗೂ ಇತರರ ಹೆಸರುಗಳೂ ಪತ್ತೆಯಾದವು. ಇ.ಡಿ ತನಿಖೆಯಲ್ಲಿ ನಿನಗೆ ಸಹಾಯ ಮಾಡಿಸುತ್ತೇನೆ ಎಂದು ಜನಾರ್ದನರೆಡ್ಡಿ ಹೇಳಿದ್ದರು ಎನ್ನಲಾಗಿತ್ತು. ಅದಕ್ಕಾಗಿ ಹಣ ಕೊಟ್ಟಿ¨ªೆ ಎಂದು ಫರೀದ್ ಹೇಳಿಕೆ ಕೊಟ್ಟಿದ್ದರು ಎಂದು ಹೇಳಲಾಗಿತ್ತು.