ಶ್ರೀನಗರ : ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರ ಭಾನುವಾರ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ಕವೀಂದರ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ.
ಮೂಲಗಳ ಪ್ರಕಾರ ಇಂದು ಸೋಮವಾರ ಒಟ್ಟು 8 ಮಂದಿ ಸಚಿವರನ್ನು ಜಮ್ಮು ಕಾಶ್ಮೀರ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.
ಎಎನ್‌ಐ ಜತೆಗೆ ಮಾತನಾಡುತ್ತಾ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು “ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿನ ಪಿಡಿಪಿ-ಬಿಜೆಪಿ ಸರಕಾರ ಉತ್ತಮ ಕೆಲಸ ಮಾಡಿದೆ. ಸರಕಾರದಲ್ಲಿ ಸಚಿವ ಪದಗಳನ್ನು ಬದಲಾಯಿಸುವುದು ಪಕ್ಷದ ನಿರ್ಧಾರವಾಗಿದೆ. ಅಂತೆಯೇ ನಾನು ಉಪ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದರು.
ಪುನಾರಚನೆಗೊಳ್ಳುವ ರಾಜ್ಯ ಸಚಿವ ಸಂಪುಟದಲ್ಲಿ ಪಿಡಿಪಿಯ ಪುಲ್ವಾಮಾ ಶಾಸಕ ಮೊಹಮ್ಮದ್ ಖಲೀಲ್ ಬಂದ್ ಮತ್ತು ಸೋನಾವರ್ ಶಾಸಕ ಮೊಹಮ್ಮದ್ ಅಶ್ರಫ್ ಸ್ಥಾನಪಡೆಯಲಿದ್ದಾರೆ. ಹಾಲಿ ಸಾರಿಗೆ ಸಹಾಯಕ ಸಚಿವ ಬಿಜೆಪಿಯ ಸುನೀಲ್ ಶರ್ಮಾ ಕ್ಯಾಬಿನೆಟ್ ಸಚಿವರಾಗಲಿದ್ದಾರೆ. ಡೋಡಾ ಕ್ಷೇತ್ರದ ಬಿಜೆಪಿ ಶಾಸಕ ಶಕ್ತಿ ರಾಜ ಅವರು ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ನಾಯಕರಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ಮತ್ತು ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಭಾಗವಹಿಸಲಿದ್ದಾರೆ.
ಜಮ್ಮು ಕಾಶ್ಮೀರ ಸದನ ಬಲದ ಪ್ರಕಾರ ಸರಕಾರ ಮುಖ್ಯಮಂತ್ರಿ ಸಹಿತ 24 ಸಚಿವರನ್ನು ಹೊಂದಬಹುದಾಗಿದೆ. ಈ ಪೈಕಿ 14 ಸಚಿವ ಪದಗಳು ಪಿಡಿಪಿ ಬಳಿ ಇವೆ ಉಳಿದವು ಬಿಜೆಪಿ ಕೈಯಲ್ಲಿವೆ.