Advertisement

ಜಲ್ಲಿಕಟ್ಟುಗೆ ಸುಗ್ರೀವಾಜ್ಞೆ ಕಾವೇರಿ ನೀರಿಗೆ ಇಲ್ವಾ?: ಕಾಂಗ್ರೆಸ್‌

12:04 PM Jan 23, 2017 | |

ಮೈಸೂರು: ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸುಗ್ರೀವಾಜ್ಞೆ ಹೊರಡಿಸುವ ಕೇಂದ್ರ ಸರ್ಕಾರ ಕಾವೇರಿ ನೀರಿಗೆ ಸುಗ್ರೀವಾಜ್ಞೆ ಹೊರಡಿಸದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ಕಾವೇರಿ ನೀರುಹಂಚಿಕೆ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಕೊಡಿಸುವುಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫ‌ಲರಾಗಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯರ್ತರು ಭಾನುವಾರ ವಿನೂತನ ಪ್ರತಿಭಟನೆ ನಡೆಸಿದರು.

Advertisement

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಾಸಕ ಎಂ.ಕೆ.ಸೋಮಶೇಖರ್‌ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮಿಳುನಾಡು ಜನರ ಸಾಂಸ್ಕೃತಿಕ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಆದರೆ ಕರ್ನಾಟಕದ ವಿಷಯದಲ್ಲಿ ಕಿಂಚಿತ್ತು ಆಸಕ್ತಿ ತೋರದೆ, ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಂಸದರಿಗೆ ಸನ್ಮಾನ!: ರಾಜ್ಯದಿಂದ ಆಯ್ಕೆಗೊಂಡಿರುವ ಬಿಜೆಪಿ ಸಂಸದರು ಕರ್ನಾಟಕದಲ್ಲಿನ ಸಮಸ್ಯೆಗಳಿಗೆ ಪ್ರಧಾನಿ ಅವರಿಂದ ಪರಿಹಾರ ಕೊಡಿಸುವಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿ, ರಾಜ್ಯದಿಂದ ಆಯ್ಕೆಗೊಂಡಿರುವ 17 ಮಂದಿ ಬಿಜೆಪಿ ಸಂಸದರ ಭಾವಚಿತ್ರಗಳಿಗೆ ಗಂಧದಹಾರ ಹಾಕಿ, ಸಾಂಕೇತಿಕವಾಗಿ ಸನ್ಮಾನಿಸುವ ಮೂಲಕ ಕಿಡಿಕಾರಿದರು.

ಕರ್ನಾಟಕದಲ್ಲಿ ಉತ್ತಮ ಮಳೆಯಾಗದೆ ಎಲ್ಲೆಡೆ ಬರಗಾಲ ಆವರಿಸಿದ್ದು, ಇದರಿಂದ ಜನರು ಕಂಗಾಲಾಗಿದ್ದಾರೆ. ಆದರೂ ಕಾವೇರಿ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಜತೆಗೆ ಬರಪರಿಸ್ಥಿತಿ ನಿವಾರಿಸಲು ಸಹಕರಿಸಿಲ್ಲ. ಅಲ್ಲದೆ ಕಾವೇರಿ ನೀರು ಹಂಚಿಕೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಸಮಯಾವಕಾಶ ನೀಡಲು ಪ್ರಧಾನಿ ಮೋದಿ ಅವರು ನಿರಾಕರಿಸಿದ್ದರು.

ಆದರೆ ಇದೀಗ ತಮಿಳುನಾಡಿಗೆ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸು ತ್ತಿರುವುದನ್ನು ಗಮನಿಸಿದರೆ ಸಾಕಷ್ಟು ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಅವಕಾಶ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕದ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಆಚರಣೆಗೂ ಸುಗ್ರೀವಾಜ್ಞೆ ಹೊರಡಿಸಿ ಅವಕಾಶ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. 

Advertisement

ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಮಾಜಿ ಮೇಯರ್‌ಗಳು, ನಗರಪಾಲಿಕೆ ಸದಸ್ಯರು ಹಾಗೂ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next