Advertisement

ಜಲಜೀವನ್‌ ಮಿಷನ್‌: ಗುರಿ ಮೀರಿದ ಸಾಧನೆಗೆ ಸಂತಸ

10:19 PM Aug 09, 2022 | Team Udayavani |

ಬೆಂಗಳೂರು: ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ನಳ್ಳಿ ಸಂಪರ್ಕಿಸುವ ಯೋಜನೆಯಡಿ ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಲ್ತಿಯಲ್ಲಿರುವ ಬ್ಯಾಚ್‌ 1 ಕಾಮಗಾರಿಗಳನ್ನು ಸೆಪ್ಟೆಂಬರ್‌ 15ರೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

Advertisement

ವೀಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲ ಜಿಪಂ ಸಿಇಒ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಗತಿ ಪರೀಶಿಲನೆ ನಡೆಸಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಈ ಗಡುವು ನೀಡಿದರು.

ಪ್ರಗತಿ ಪರಿಶೀಲಿಸಿ
ಆ. 8ರ ವರೆಗೆ ರಾಜ್ಯದಲ್ಲಿ ಒಟ್ಟು 21,63,817 ಮನೆಗಳಿಗೆ ನಳ ಸಂಪರ್ಕದ ಗುರಿ ನಿಗದಿಯಾಗಿತ್ತು. ಆದರೆ 21,81,557 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಇದು ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆಯಾಗಿದೆ. ಅದರ ಜತೆ ಬ್ಯಾಚ್‌ 1 ಕಾಮಗಾರಿಗಳನ್ನು ಸೆಪ್ಟೆಂಬರ್‌ 15ರೊಳಗೆ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಾರದಲ್ಲಿ 3 ದಿನ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಸಿಎಂ ಸೂಚಿಸಿದರು.
ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮಸ್ಯೆ ಬಗ್ಗೆ ಚರ್ಚಿಸದೇ, ಸ್ಥಳಕ್ಕೆ ತೆರಳಿ ಸಮಸ್ಯೆಯ ಬಗ್ಗೆ ತಿಳಿಯಬೇಕು. ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ವಾರದಲ್ಲಿ ಕನಿಷ್ಠ 3 ದಿನ ಸ್ಥಳಕ್ಕೆ ತೆರಳಿ ಕಾಮಗಾರಿಗಳ ಪರಿಶೀಲನೆ ಮಾಡಬೇಕೆಂದು ಸೂಚಿಸಿದರು.

ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿ
ಹಲವು ಜಿಲ್ಲೆ ಗಳಿಗೆ ಓವರ್‌ ಹೆಡ್‌ ಟ್ಯಾಂಕ್‌ಗಳ ಆವಶ್ಯಕತೆ ಇದೆ. ಅಲ್ಲಿ ಕೂಡಲೇ ಟ್ಯಾಂಕ್‌ ಸ್ಥಾಪನೆ ಮಾಡಿ. ಈ ಬಗ್ಗೆ ಎಲ್ಲ ಜಿಲ್ಲೆಗಳ ಪ್ರಗತಿ ಪರಿಶೀಲಿಸಲು ಎಂಜಿನಿಯರ್‌ ಒಬ್ಬರನ್ನು ನಿಯೋಜಿಸಬೇಕು. ಗುತ್ತಿಗೆದಾರರ ಅದಕ್ಷತೆಯನ್ನು ಕಾರಣವಾಗಿಸದೇ, ಜಿಲ್ಲೆಯ ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಸ್ವಚ್ಛ ಭಾರತ ಅಭಿಯಾನ
ಗ್ರಾಮಗಳ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಡಿ ಹಿಂದಿರುವ ಜಿಲ್ಲೆಗಳು ಆದ್ಯತೆ ಮೇರೆಗೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು. ಇನ್ನೊಂದು ವಾರದಲ್ಲಿ ಡಿಪಿಆರ್‌ ಸಿದ್ಧಪಡಿಸಿ ನವೆಂಬರ್‌ನಲ್ಲಿ ಮುಖ್ಯ ಚರಂಡಿ ಕಾಮಗಾರಿ ಪೂರ್ಣಗೊಳ್ಳಬೇಕು. ಜನವರಿ ತಿಂಗಳೊಳಗೆ ಗ್ರಾಮದೆಲ್ಲೆಡೆ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.

Advertisement

ನರೇಗಾ ಯೋಜನೆ
ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 16 ಕೋಟಿ ಮಾನವ ದಿನಗಳ ಸೃಜನೆ ಪೈಕಿ 16.38 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಿ ಶೇ. 100ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಶೇ. 100 ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ ಜಿಲ್ಲೆಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಮಳೆ ಪರಿಹಾರ ಕಾಮಗಾರಿಗೆ ಒತ್ತು ಕೊಡಿ
ಮಳೆಯಿಂದಾಗಿ ಹಾನಿಯಾಗಿರುವ ಮೂಲ ಸೌಕರ್ಯಗಳ ಮರುಸ್ಥಾಪನೆ ಕೆಲಸವನ್ನು ಆದ್ಯತೆಯ ಮೇರೆಗೆ ನಿರ್ವಹಿಸಿ. ರಸ್ತೆಗಳನ್ನು ಜನರ ಸಂಚಾರಕ್ಕೆ ಯೋಗ್ಯವಾಗುವಂತೆ ನಿರ್ಮಿಸಲು ಒತ್ತು ನೀಡಬೇಕು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು. ಅಮೃತ ಗ್ರಾಮ ಪಂಚಾಯತ್‌ ಯೋಜನೆಯಡಿ ಸೆ. 15ರ ಒಳಗೆ ಮೊದಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. 2ನೇ ಹಂತದ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮಗಳ ಆಯ್ಕೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಿಎಂ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next