Advertisement

ಜಾಲಾರಿ  ಬೇಸಿಗೆಯ ಬೆಳದಿಂಗಳು

12:30 AM Feb 23, 2019 | |

ಶಿವರಾತ್ರಿ ಹಬ್ಬದ ಸಮಯಕ್ಕೆ ಅರಳಿ ನಿಲ್ಲುವ ಹೂ ಜಾಲಾರಿ. ಈ ಹೂವಿನ ಪರಿಮಳಕ್ಕೆ ಮಾರು ಹೋಗದವರೇ ಇಲ್ಲ. ಅಚ್ಚ ಬಿಳುಪಿನ ಈ ಹೂವು, ಕೆಲವೊಮ್ಮೆ ಪಿಂಕ್‌ ಬಣ್ಣದಲ್ಲಿಯೂ ಕಾಣ ಸಿಗುತ್ತದೆ. 

Advertisement

ನಾವಿನ್ನೂ ಹುಡುಗರು. ಬೇಸಿಗೆಯ ದಿನಗಳವು. ಮಧ್ಯಾಹ್ನದ ನೀರವ ಮೌನ ಸೀಳಿ ಬರುತ್ತಿದ್ದ, “ಹೂವಾ, ಜಾಲಾರದ ಹೂವಾ, ಹೂವಾ, ಬನವ್ವಾ, ಜಾಲಾರದ ಹೂವಾ…’ ಕೂಗು. ಕನ್ನಡಿ ಚೂರಿನ ಕೆಂಪು ಲಂಗ ತೊಟ್ಟ ಲಂಬಾಣಿ ಮಹಿಳೆಯರು ದೊಡ್ಡ ಬಟ್ಟೆಯ ಗಂಟುಗಳನ್ನು ಇಳಿಸಿ, ಬಿಚ್ಚುತ್ತಿದ್ದರು. ಒಳಗೆ ಬೆಳ್ಳಗಿನ ಗೊಂಚಲು ಗೊಂಚಲು ಹೂಗಳು. ಅವುಗಳ ಘಮ್ಮೆನ್ನುವ ಗಾಢ ಸುವಾಸನೆ ಮತ್ತೇರಿಸಿ, ಮೆದುಳಿನಲ್ಲಿ ನೆಲೆಯಾಗಿಬಿಡುತ್ತಿತ್ತು. ಜಾಲಾರಿಯ ಸ್ಪೆಷಾಲಿಟಿಯದು.
ದೇವರಾಯನದುರ್ಗದಿಂದ ಬರುತ್ತಿದ್ದ ಲಾರಿ, ಟ್ರ್ಯಾಕ್ಟರ್‌ಗಳ ಬಾನೆಟ್‌ಗೆ ಅಚ್ಚ ಬಿಳಿಯ ಗೊಂಚಲುಗಳಿದ್ದ ಜಾಲಾರಿ ರೆಂಬೆಗಳನ್ನೇ ಕಟ್ಟಿರುತ್ತಿದ್ದರು.

ಹೆಚ್ಚಾ ಕಡಿಮೆ ಶಿವರಾತ್ರಿ ಮತ್ತು ಸಿದ್ಧಗಂಗೆಯ ತೇರೆಳೆಯುವ ದಿನದ ಹೊತ್ತಿಗೆ ಜಾಲಾರಿ ಹೂ ಬಿಡುತ್ತದೆ. ಈ ಸಲ ಹೂ ಕಡಿಮೆ. ಒಮ್ಮೆ ನೋಡಿದರೆ ಜೀವನ ಪೂರ್ತಿ ನೆನಪಿನಲ್ಲಿ ಉಳಿದುಕೊಳ್ಳುವ ಅತಿ ವಿಶಿಷ್ಟ ಹೂ ಜಾಲಾರಿ. 

ಜಾಲಾರಿ-ಹಿಮಾಲಯದ ತಪ್ಪಲಲ್ಲಿರುವ “ಸಾಲ’ ವೃಕ್ಷಗಳ ಸೋದರ. ಭೂಮಿಯ ಸೃಷ್ಟಿಯ ಇತಿಹಾಸದಲ್ಲೇ ತೀರಾ ಪ್ರಾಚೀನ ಮರ. ಏಷ್ಯಾ ಖಂಡದ ಕಾಂಬೋಡಿಯಾ, ಲಾವೋಸ್‌,ಮಲೇಶಿಯಾ, ಮಯನ್ಮಾರ್‌ (ಬರ್ಮಾ) ಥಾಯ್‌ಲ್ಯಾಂಡ್‌, ವಿಯಟ್ನಾಮ್‌ಗಳ ಮೂಲನಿವಾಸಿ, ಸಮುದ್ರದ ಅಲೆಗಳು ಇಂಡಿಯಾದ ಕಡಲ ತಡಿಗೆ ತಂದು ಕಡ ನೀಡಿರಬೇಕು ಅಂತ ಕಾಣುತ್ತೆ, ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ ಈ ಮರ ನೆಲೆ ಕಂಡಿತು. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಅರೆ ಎಲೆಯುದುರುವ ಕಾಡುಗಳಲ್ಲಿ ಹರಡಿಕೊಂಡಿದೆ. ಶೋರಿಯಾ ರಾಕ್ಸ್‌ಬರ್ಗಿ ಎಂಬುದು ಜಾಲಾರಿಯ ಶಾಸ್ತ್ರೀಯ ಹೆಸರು. ಜನವರಿ-ಫೆಬ್ರವರಿಯಲ್ಲಿ ವರ್ಷಕ್ಕೊಮ್ಮೆ ಮಾತ್ರವೇ ಹೂ ಬಿಡುವ, ಸುಮಾರು ನೂರು ವರ್ಷ ಬದುಕಬಲ್ಲ ಮರ ಜಾಲಾರಿ. 

ಹಸಿರು ತೊಟ್ಟುಗಳುಳ್ಳ ಅಚ್ಚ ಬಿಳಿ ಹೂಗಳು ಕೆಲವೊಮ್ಮೆ ಪಿಂಕ್‌ ಬಣ್ಣದಲ್ಲೂ ಕಾಣುತ್ತವೆ. ಬೀಜ ಪ್ರಸಾರಕ್ಕಾಗಿ ಪ್ಯಾರಾಚೂಟ್‌ನಂಥ ಮೂರು ರೆಕ್ಕೆಗಳನ್ನು ಹೊಂದಿವೆ. ಬೀಜವಷ್ಟೇ ಅಲ್ಲದೆ, ಬಲಿತ ಕೊಂಬೆಗಳನ್ನು ಕತ್ತರಿಸಿ ನೆಟ್ಟರೂ ಚಿಗುರುತ್ತವೆ. ಗಿಡಗಳು ಚಳಿಗೆ ನಲುಗುತ್ತವೆ, ಬಿಸಿಲಿಗೆ ನಗುತ್ತವೆ.

Advertisement

ಮರಮುಟ್ಟು ಸುಮಾರು, ಜಾಲಾರಿ ಮರದಲ್ಲೇ ಅರಗಿನ ಕೀಟಗಳನ್ನು ಬಿಟ್ಟು ಎಲೆ ತಿನಿಸಿ, ಅರಗನ್ನು ಉತ್ಪಾದಿಸಲಾಗುತ್ತಿತ್ತು.  ಸ್ವತಂತ್ರ ಪೂರ್ವದಲ್ಲೇ ಮೈಸೂರು ರಾಜ್ಯದಲ್ಲಿ ಅರಗು ಮತ್ತು ಬಣ್ಣದ ಕಾರ್ಖಾನೆಯನ್ನು ಅರಸರು ಸ್ಥಾಪಿಸಿದ್ದನ್ನು ನೆನಪಿಸಿಕೊಳ್ಳಿ.

ಮೇಲುಕೋಟೆ, ದೇವರಾಯನದುರ್ಗ, ಸಿದ್ಧರಬೆಟ್ಟ, ಸಾವನದುರ್ಗ, ನಂದಿ ಸುತ್ತಲಿನ ಬೆಟ್ಟಗಳು, ನರಸಿಂಹದೇವರಬೆಟ್ಟಗಳಲ್ಲಿ ಸಾಕಷ್ಟು ಜಾಲಾರಿ ಮರಗಳು ಕಾಣ ಸಿಗುತ್ತವೆ. ಕೋಲಾರ ತಾಲೂಕಿನ ವಕ್ಕಲೇರಿಯ ಬಿಳಿ ಬೆಟ್ಟದ ದೇವಾಲಯದ ಹತ್ತಿರ ದೊಡ್ಡದೊಂದು ಜಾಲಾರಿ ಮರವಿದೆ. ಈ ಮರದ ಕೆಳಗೆ ಸುತ್ತಲೂ ನಾಗ ವಿಗ್ರಹಗಳಿದ್ದು, ಮೈ ತುಂಬ ಹೂ ಅರಳಿದರೆ ಆ ವರ್ಷದ ಮಳೆ, ಬೆಳೆ ಸಮೃದ್ಧಿ ಅಂತೆ, ಹೀಗೆ ಕಣಿ ಹೇಳುವ ಮರವೂ ಆಗಿದೆ. 

ಉಪಯೋಗಗಳು ಹಲವಾರು
ಜಾಲ, ಜಾಲಾದ, ಜಾಲಾರದ, ಅರಗಿನ ಮರ, ಬಿಳಿ ಬೋವು, ಜಾಲಾರಿ ಚೆಟ್ಟು ಎಂದೆಲ್ಲ ಕರೆಯುವ ಈ ಮರದ ತೊಗಟೆ ಮತ್ತು ಚಪ್ಪಟೆ ಬೇರುಗಳನ್ನು ಕೆತ್ತಿದರೆ ಕಂದು ಬಣ್ಣದ ಅಂಟು ಸ್ರವಿಸುತ್ತದೆ, “ಕಾಚು’ ಎಂದು ಕರೆಯುವ ಇದನ್ನು ಹಾಸನದ ಮಾರುಕಟ್ಟೆಯಲ್ಲಿ ಎಲೆ, ಅಡಕೆಯೊಂದಿಗೆ ಮಾರುತ್ತಾರೆ. ಈ ಕಾಚು ತಾಂಬೂಲಕ್ಕೆ ಬಣ್ಣ ತರುತ್ತದೆ. ಈ ಅಂಟು ಊದುಬತ್ತಿ ತಯಾರಿಕೆಗೂ ಬೇಕು. ಬಣ್ಣವಾಗಿಯೂ ಬಳಕೆಯಾಗುತ್ತದೆ. ತೊಗಟೆ “ಆ್ಯಂಟಿ ಆಕ್ಸಿಡೆಂಟ್‌’ಗಳನ್ನು ಹೊಂದಿದ್ದು, ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ. ಹೂಗಳಿಂದ ಫ‌ರ್‌ಫ್ಯೂಮ್‌ ತೆಗೆಯುತ್ತಾರೆ.

ಸರ್‌ನೇಮ್‌ ಕೂಡ ಹೌದು!
ಚಿಕ್ಕಬಳ್ಳಾಪುರದಲ್ಲಿ ಜಾಲಾರಿ ಗಂಗಮಾಂಬ, ಗುಡಿಬಂಡೆಯ ಸೊಪ್ಪಿನಪೇಟೆಯಲ್ಲಿ ಜಾಲಾರಿ ಸಪ್ಪುಲಮ್ಮ ಗುಡಿಗಳಿವೆ. ಈ ಜಿಲ್ಲೆ ಹಾಗೂ ಆಂಧ್ರದಲ್ಲಿ “ಜಾಲಾರಿ’ ಎಂಬುದು ಹಲವಾರು ಕುಟುಂಬಗಳ ವಂಶಾವಳಿಯ ಸರ್‌ನೆàಮ್‌ ಆಗಿಯೂ ಸೇರಿಬಿಟ್ಟಿದೆ. ಅದೆಲ್ಲ ಹೋಗಲಿ ಅಂದರೆ, 80ನೇ ಇಳಿ ವಯಸ್ಸಿನಲ್ಲಿ ಎರಡು ಕವನಸಂಕಲನಗಳನ್ನು ಪ್ರಕಟಿಸಿದ ಸಂಶೋಧಕ ದಿವಂಗತ ಎಲ್‌.ಬಸವರಾಜು ಅವರ ಒಂದು ಸಂಕಲನದ ಹೆಸರು “ಜಾಲಾರಿ’. 

ಜಾಲಾರಿ ಕೆಲ ದೇವರಿಗೆ ಅತ್ಯಂತ ಪ್ರಿಯವಾದ ಹೂ, ಆಗ್ನೇಯ ಏಶ್ಯಾ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬೌದ್ಧರಿಗೂ ಜಾಲಾರಿ ತುಂಬ ಇಷ್ಟವಂತೆ. ನಿಮ್ಮ ಸುತ್ತಮುತ್ತ ಎಲ್ಲೇ ಇದ್ದರೂ ಹುಡುಕಿ, ಜಾಲಾರಿ ಸುಗಂಧವನ್ನು ಸವಿಯಲು ಸಕಾಲವಿದು. 

ಕುಚ್ಚಂಗಿ ಪ್ರಸನ್ನ 

Advertisement

Udayavani is now on Telegram. Click here to join our channel and stay updated with the latest news.

Next