Advertisement
ಅಲೂಗಡ್ಡೆ ಮಾರಾಟ ಭರಾಟೆ: ಕಳೆದ ವರ್ಷ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಸ್ಥಳೀಯ ಬಿತ್ತನೆ ಆಲೂಗಡ್ಡೆ ವ್ಯಾಪಾರಸ್ಥರು ಲಕ್ಷಾಂತರ ರೂ. ಬಂಡವಾಳ ಹಾಕಿ ಜಲಂಧರ್‌ನಿಂದ ಮಾರಾಟಕ್ಕೆಂದು ತರಿಸಿದ್ದ ಬಿತ್ತನೆ ಆಲೂಗಡ್ಡೆ ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗದೇ ಕೈ ಸುಟ್ಟಿಕೊಂಡಿದ್ದರು. ಆದರೆ ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಕೈ ಕೊಟ್ಟರೂ ಹಿಂಗಾರು ರೈತರು ಕೈ ಹಿಡಿದಿರುವುದಿರಂದ ನಿರೀಕ್ಷೆಗೂ ಮೀರಿ ಆಲೂಗಡ್ಡೆ ಬಿತ್ತನೆಗೆ ರೈತರು ಮುಂದಾಗಿದ್ದು ಬಿತ್ತನೆ ಆಲೂಗಡ್ಡೆ ಮಾರಾಟದ ಭರಾಟೆ ಜೋರಾಗಿದೆ.
Related Articles
Advertisement
ತುಮಕೂರು, ಕೋಲಾರ, ನೆರೆಯ ಆಂಧ್ರಪ್ರದೇಶದ ಆನಂತಪುರ, ಲೇಪಾಕ್ಷಿ, ಪುಟ್ಟಪರ್ತಿ, ಹಿಂದೂಪುರ, ಪೆನಗೊಂಡ ಭಾಗದ ರೈತರು ಕೂಡ ಇಲ್ಲಿಗೆ ಬಂದು ಅಲೂಗಡ್ಡೆ ಬೀತ್ತನೆ ಬೀಜ ಖರೀದಿ ಮಾಡುತ್ತಾರೆ. ಜತೆಗೆ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ರೈತರು ಸಹ ಇಲ್ಲಿಗೆ ಬಂದು ಬಿತ್ತನೆ ಆಲೂಗಗಡ್ಡೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಆಲೂಗಡ್ಡೆ ಸೀಸನ್ ಬಂದರೆ ವರ್ತಕರಿಗೆ ಕೈ ತುಂಬ ಕಾಸದರೆ, ಕೂಲಿ ಕಾರ್ಮಿಕರಿಗೂ ಹೊಟ್ಟೆ ತುಂಬುತ್ತದೆ.
ಡಿಸೆಂಬರ್‌ಗೆ ಬಿತ್ತನೆ ಸೀಸನ್ ಕೊನೆ: ಜಿಲ್ಲೆಯ ಮಾತ್ರವಲ್ಲದೇ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ ಮುಗಿಯುವುದರೊಳಗೆ ಆಲೂಗಡ್ಡೆ ಬಿತ್ತ ನೆ ಆಗಬೇಕಿದ್ದು, ಈಗಾಗಲೇ ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯ ಜಿಲ್ಲಾದ್ಯಂತ ಚುರುಕುಗೊಂಡಿದೆ. ಕಡಿಮೆ ನೀರಿನ ಜೊತೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳಲ್ಲಿ ಆಲೂಗಡ್ಡೆ ಸಹ ಒಂದಾಗಿದ್ದು ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಹೇರಳ ಪ್ರಮಾಣದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತಿದೆ. ತೋಟಗಾರಿಕಾ ಇಲಾಖೆ ಪ್ರಕಾರ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ಆಲೂಗಡ್ಡೆ ಬಿತ್ತನೆಗೆ ಸಕಾಲವಾದರೂ ಜಿಲ್ಲೆಯ ರೈತರು ಸೆಪ್ಪಂಬರ್ ಅಂತ್ಯದಲ್ಲಿಯೆ ಆಲೂಗಡ್ಡೆ ಬಿತ್ತನೆ ಕಾರ್ಯವನ್ನು ಶುರು ಮಾಡುತ್ತಾರೆ.
ಆದರೆ ಜಿಲ್ಲೆಯಲ್ಲಿ ಈ ವರ್ಷ ತೀವ್ರ ಮಳೆ ಕೊರತೆ ಪರಿಣಾಮ ಖುಷ್ಕಿ ಬೇಸಾಯದಲ್ಲಿ ಆಗಿರುವ ಬಿತ್ತನೆ ಮಳೆಯಾಗದೇ ಸಂಪೂರ್ಣ ಬೆಳೆ ನಾಶವಾಗಿದೆ. ಆದರೆ ಸೆಪ್ಪೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಿಂಗಾರು ಮಳೆ ಬಿದ್ದಿರುವುದರಿಂದ ಜಿಲ್ಲೆಯ ರೈತರು ಆಲೂಗಡ್ಡೆ ಬಿತ್ತನೆಗೆ ಉತ್ಸಾಹ ತೋರಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೆ ಉತ್ತಮ ದರ ಇದ್ದು, 50 ಕೆಜಿ ಮೂಟೆ 1200, ರಿಂದ 1300 ವರೆಗೂ ಮಾರಾಟಗೊಳ್ಳುತ್ತಿರುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬಿತ್ತ ನೆಗೆ ಮುಂದಾಗಿದ್ದಾರೆ.
50 ಕೆಜಿ ಬಿತ್ತನೆ ಆಲೂಗಡ್ಡೆ 1200, 1300 ರೂ.: ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 50 ಕೆಜಿ ತೂಕದ ಬಿತ್ತನೆ ಆಲೂಗಡ್ಡೆ ಸದ್ಯ 1,200 ರಿಂದ 1,300 ರೂ. ವರೆಗೂ ಮಾರಾಟಗೊಳ್ಳುತ್ತಿದ್ದು, ದಿನಕ್ಕೆ 4ರಿಂದ 5 ಲೋಡ್‌ನಷ್ಟು ಆಲೂಗಡ್ಡೆ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ 25ಕ್ಕೂ ಹೆಚ್ಚು ಆಲೂಗಡ್ಡೆ ವ್ಯಾಪಾರಸ್ಥರು ಇದ್ದು ಈ ವರ್ಷ ಮಾರುಕಟ್ಟೆಗೆ ಜಲಂಧರ್‌ನಿಂದ ಸುಮಾರು 150 ಲಾರಿ ಲೋಡ್‌ನಷ್ಟು ಬಿತ್ತನೆ ಆಲೂಗಡ್ಡೆ ತರಿಸಿದ್ದಾರೆ. ಇನ್ನೂ 50 ಲೋಡ್ ಬರಲಿದೆ. ಕಳೆದ ವರ್ಷ ಬರಗಾಲದ ಪರಿಣಾಮ ಆಲೂಗಡ್ಡೆ ಮಾರಾಟ ಗೊಳ್ಳದೇ ವರ್ತಕರು ಕಂಗಾಲಾಗಿದ್ದರು. ಆದರೆ ಈ ವರ್ಷ ಉತ್ತಮ ಮಾರಾಟದಿಂದ ಸಂಸತಗೊಂಡಿದ್ದಾರೆ. ಆರಂಭದಲ್ಲಿ ವರ್ತಕರು 50 ಕೆಜಿ ಮೂಟೆಯನ್ನು 1500, 1700 ರೂ. ವರೆಗೂ ಮಾರಾಟ ಮಾಡಿದರೆಂಬ ಆರೋಪ ರೈತರಿಂದ ಕೇಳಿ ಬಂತು.
ನಾವು ಪ್ರತಿ ವರ್ಷ ಇಲ್ಲಿಂದಲೇ ಬಿತ್ತನೆ ಆಲೂಗಡ್ಡೆ ತೆಗೆದುಕೊಂಡು ಹೋಗುತ್ತೇವೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದಕ್ಕೆ ಹಾಕಿರಲಿಲ್ಲ. ಈ ವರ್ಷ ಮಳೆ ಪರವಾಗಿಲ್ಲ. ಒಂದು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಎಕರೆ 10 ರಿಂದ 12 ಮೂಟೆ ಬಿತ್ತನೆ ಆಲೂಗಡ್ಡೆ ಬೇಕು.-ನಾಗರಾಜಪ್ಪ, ವಿಜಯಪುರ ರೈತ ಕಳೆದ ವರ್ಷ ಮಳೆ ಇಲ್ಲದೇ ಸಾಕಷ್ಟು ಬಿತ್ತನೆ ಆಲೂಗಡ್ಡೆ ಮಾರಾಟಗೊಳ್ಳದೇ ನಾವು ಸಾಕಷ್ಟು ನಷ್ಠ ಮಾಡಿಕೊಂಡವು. ಆದರೆ ಈ ವರ್ಷ ಬಿತ್ತನೆ ಆಲೂಗಡ್ಡೆ ಮಾರಾಟ ಪರವಾಗಿಲ್ಲ. 50 ಕೆಜಿ ಮೂಟೆ 1200, 1300 ಮಾರಾಟಗೊಳ್ಳುತ್ತಿದೆ. ಕಳೆದ ವರ್ಷ ಹಾಕಿದ ಬಂಡವಾಳ ಬರಲಿಲ್ಲ. ಬರೀ 300, 400ಕ್ಕೆ ಮಾರಾಟ ಮಾಡಿದವು. ಜಲಂಧರ್‌ನಿಂದ ಆಲೂಗಡ್ಡೆ ತರಸಬೇಕಾದರೆ ಮೂಟೆಗೆ ನಾವು 280 ರೂ, ಬಾಡಿಗೆ ಕೊಡಬೇಕು. ಇದುವರೆಗೂ ನಾಲ್ಕು ಲೋಡ್ ಮಾರಾಟ ಮಾಡಿದ್ದೇನೆ.
-ಅವಲಗುರ್ಕಿ ರಾಜಣ್ಣ, ಎಪಿಎಂಸಿ ವರ್ತಕರು ಜಿಲ್ಲೆಯಲ್ಲಿ 1,900 ರಿಂದ 2000 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯುತ್ತಾರೆ. ಇದುವರೆಗೂ ಶೇ.50 ರಷ್ಟು ಬಿತ್ತನೆ ಕಾರ್ಯ ಮುಗಿದಿದ್ದು, ಡಿಸೆಂಬರ್ ಅಂತ್ಯದೊಳಗೆ ಬಿತ್ತನೆ ಕಾರ್ಯ ಮುಗಿಯಲಿದೆ. ಆಲೂಗಡ್ಡೆ ಬಿತ್ತನೆ ಬಗ್ಗೆ ರೈತರಿಗೆ ಸಾಕಷ್ಟು ಅರಿವು ಮೂಡಿಸಲಾಗಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ರೈತರಿಗೆ ಸಿಗಲಿದೆ.
-ಕುಮಾರಸ್ವಾಮಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ * ಕಾಗತಿ ನಾಗರಾಜಪ್ಪ