Advertisement

ಜಾಲಹಳ್ಳಿ ಮೇಲ್ಸೇತುವೆ ಸಂಚಾರ ಮುಕ್ತ

11:41 AM Jan 07, 2017 | Team Udayavani |

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ವಾಹನ ಸವಾರರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಜಾಲಹಳ್ಳಿ ರೈಲ್ವೇ ಕ್ರಾಸಿಂಗ್‌ ಬಳಿಯ ಸಂಚಾರದಟ್ಟಣೆ ನಿವಾರಣೆಗೆ ಬಿಡಿಎ ನಿರ್ಮಿಸಿರುವ ರೈಲ್ವೇ ಮೇಲ್ಸೇತುವೆಗೆ ಕೊನೆಗೂ ಮುಕ್ತಿ ದೊರೆತಿದೆ.

Advertisement

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲ್ವೇ ಮೇಲ್ಸೇತುವೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಒಂದೂವರೆ ದಶಕದಿಂದ 62 ಕಿ.ಮೀ. ಹೊರವರ್ತುಲ ರಸ್ತೆಯಲ್ಲೇ ಅತಿ ಹೆಚ್ಚು ಸಂಚಾರದಟ್ಟಣೆಗೆ ಗುರಿಯಾಗುತ್ತಿದ್ದ ಕುಖ್ಯಾತಿಗೆ ಪಾತ್ರವಾಗಿರುವ ಗೊರಗುಂಟೆಪಾಳ್ಯ ಜಂಕ್ಷನ್‌ ಹಾಗೂ ಬಿಇಎಲ್‌ ರಸ್ತೆ ನಡುವಿನ ರಸ್ತೆಗೆ ಶಾಪ ವಿಮೋಚನೆಯದಂತಾಗಿದೆ.

1996ರಿಂದ 2002ರವರೆಗೆ ಬಿಡಿಎ ಅಭಿವೃದ್ಧಿಪಡಿಸಿದ 62 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆಯಲ್ಲಿ ಗೊರಗುಂಟೆಪಾಳ್ಯ ಜಂಕ್ಷನ್‌ ಹಾಗೂ ಬಿಇಎಲ್‌ ನಡುವಿನ ಜಾಲಹಳ್ಳಿ ರೈಲ್ವೇ ಕ್ರಾಸಿಂಗ್‌ ಕೂಡ ಸೇರಿತ್ತು. ಆದರೆ, ರಕ್ಷಣಾ ಇಲಾಖೆಯು ದ್ವಿಮುಖ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಜಮೀನು ನೀಡಿರಲಿಲ್ಲ. ಹೀಗಾಗಿ ಕಳೆದ ಒಂದೂವರೆ ದಶಕದಿಂದ ಪೂರ್ವ ಭಾಗದ ಪ್ರದೇಶಗಳಿಂದ ತುಮಕೂರು ರಸ್ತೆ, ಮೈಸೂರು ರಸ್ತೆ ಪ್ರದೇಶಗಳಿಗೆ ಹಾಗೂ ಆ ಭಾಗದಿಂದ ಬಿಇಎಲ್‌ ವೃತ್ತ, ಹೆಬ್ಟಾಳ ಕಡೆಗೆ ಸಂಪರ್ಕ ಸಾಧಿಸಲು ಜನರು ಪರದಾಡುವಂತಾಗಿತ್ತು.

ಕಳೆದ ಹತ್ತು ದಿನಗಳ ಹಿಂದೆಯೇ ರೈಲ್ವೇ ಮೇಲ್ಸೇತುವೆಯು ಸಂಚಾರಕ್ಕೆ ಮುಕ್ತಗೊಂಡಿದ್ದರೂ ಶುಕ್ರವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಪ್ರದಕ್ಷಿಣೆ ವೇಳೆ ಸಾರ್ವಜನಿಕರು ಈ ಭಾಗದ ಜನರು ಸಂಚಾರದಟ್ಟಣೆ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೆ. ಅದರಂತೆ ಮೇಲ್ಸೇತುವೆಯು ಸಂಚಾರಕ್ಕೆ ಮುಕ್ತವಾಗಿದ್ದು ಹೆಬ್ಟಾಳ, ಯಲಹಂಕ ಭಾಗಗಳಿಂದ ತುಮಕೂರು ರಸ್ತೆಗೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. 

ಮೇಲ್ಸೇತುವೆ ನಿರ್ಮಾಣಕ್ಕಾಗಿ ರಕ್ಷಣಾ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಇನ್ನು ರೈಲ್ವೇ ಇಲಾಖೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಂಟಿ ಸಹಯೋಗದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದೇವೆ. ರೈಲೇ ಮೇಲ್ಸೇತುವೆಯಿಂದ ಯಶವಂತಪುರ, ಕೆಂಗೇರಿ, ರಾಜಾಜಿನಗರ ಹಾಗೂ ಯಲಹಂಕ -ಹೆಬ್ಟಾಳ ಭಾಗಗಳಿಗೆ ತೆರಳುವವರು ಸಂಚಾರ ದಟ್ಟಣೆ ಸಮಸ್ಯೆ ಇಲ್ಲದಂತೆ ಸಂಚರಿಸಬಹುದು ಎಂದು ಅಭಿಪ್ರಾಯಪಟ್ಟರು.

Advertisement

ಈ ವೇಳೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಲೋಕಸಭಾ ಸದಸ್ಯ ಡಿ.ಕೆ. ಸುರೇಶ್‌, ಶಾಸಕ ಮುನಿರತ್ನ, ಸ್ಥಳೀಯ ಪಾಲಿಕೆ ಸದಸ್ಯರು, ಬಿಡಿಎ ಅಧಿಕಾರಿಗಳು ಹಾಜರಿದ್ದರು.

ಸಮಸ್ಯೆ ಗೊರಗುಂಟೆ ಪಾಳ್ಯ ಜಂಕ್ಷನ್‌ಗೆ ಶಿಫ್ಟ್?
ಜಾಲಹಳ್ಳಿ ಬಳಿ ಎರಡು ರೈಲ್ವೇ ಕ್ರಾಸಿಂಗ್‌ಗಳಿದ್ದು ಎರಡೂ ಕ್ರಾಸಿಂಗ್‌ಗಳನ್ನು ದಾಟಿಸು ವಂತೆ ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 4 ಪಥದ ಮೇಲು ರಸ್ತೆ ಮೂಲಕ ವಾಹನಗಳು ಸರಾಗವಾಗಿ ಸಂಚರಿಸಬಹುದು ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ವಾಹನಗಳು ಒಮ್ಮೆಲೆ ಗೊರಗುಂಟೆಪಾಳ್ಯ ಜಂಕ್ಷನ್‌ ಬಳಿ ಬರುವುದರಿಂದ ಆ ಭಾಗದಲ್ಲಿ ಸಂಚಾರದಟ್ಟಣೆ ಉಂಟಾಗ ಬಹುದು ಎಂದು ಸಂಚಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next