ಕನ್ನಡದಲ್ಲಿ ಈಗಾಗಲೇ ಹಲವು ನಾಟಕಗಳು ಸಿನಿಮಾಗಳಾದ ಉದಾಹರಣೆಗಳು ಕಣ್ಣ ಮುಂದಿವೆ. ಅವುಗಳ ಸಾಲಿಗೆ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕ ಕೂಡ ಸೇರಿದೆ. ಹೌದು, ಈಗಾಗಲೇ ರಾಜ್ಯದೆಲ್ಲೆಡೆ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ ಹನುಮಂತ ಹಾಲಿಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಇದೀಗ ‘ಜೈ ಕೇಸರಿನಂದನ’ ಹೆಸರಿನ ಚಿತ್ರವಾಗಿದೆ.
ಅಷ್ಟೇ ಅಲ್ಲ, ಚಿತ್ರದ ಚಿತ್ರೀಕರಣ ಕೂಡ ಸದ್ದಿಲ್ಲದೆಯೇ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ಹನುಮಂತ ಹಾಲಿಗೇರಿ ಅವರ ‘ಕೆಂಗುಲಾಬಿ’ ಕಾದಂಬರಿ ಕೂಡ ಅದೇ ಹೆಸರಿನ ಚಿತ್ರವಾಗಿತ್ತು. ಆ ಚಿತ್ರ ನಿರ್ದೇಶಿಸಿದ್ದ ಶ್ರೀಧರ ಜಾವೂರ ಅವರೇ ಈ ಚಿತ್ರನ್ನೂ ನಿರ್ದೇಶಿಸಿದ್ದಾರೆ.
‘ಜೈ ಕೇಸರಿನಂದನ’ ಚಿತ್ರದಲ್ಲಿ ಎರಡು ಗ್ರಾಮಗಳ ನಡುವೆ ನಡೆಯುವ ಕಿತ್ತಾಟದ ಕಥೆ ಇದೆ. ಚಿತ್ರಕ್ಕೆ ಶಶಿಧಾನಿ, ಪ್ರವೀಣ ಪತ್ರಿ, ಶಿವರಾಜ್ ಪಾಟೀಲ್ ಹೂವಿನ ಹಡಗಲಿ, ನಾರಾಯಣ ಸಾ ಬಾಂಢಗೆ ಮತ್ತು ಲಕ್ಷ್ಮಣ ಸಿಂಗ್ರಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕಲಾತ್ಮಕ ಮತ್ತು ಕಮ ರ್ಷಿಯಲ್ ಅಂಶಗಳೂ ಇರಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಚರ್ಚೆಗೆ ಕಾರಣ ಆಗುವ ಕಥಾವಸ್ತು ಚಿತ್ರದಲ್ಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಗುರುರಾಜ ಹೊಸಕೋಟೆ, ರಾಜು ತಾಳಿಕೋಟೆ ಸೇರಿದಂತೆ ಹೊಸ ಪ್ರತಿಭೆಗಳಾದ ಶಶಿ ದಾನಿ, ಕಲ್ಲೇಶ ವರ್ಧನ, ಪ್ರವೀಣ ಪತ್ರಿ, ಅನಿಲ್ ಜಾವೂರ, ಭರತ ತಾಳಿಕೋಟೆ, ಅಮೃತ ಆರ್ ಗಡ್ಡದವರ, ಅಶ್ವಿನಿ, ಅಮೃತ ಕಾಳೆ ಮತ್ತು ಅಂಜಶ್ರೀ ನಟಿಸಿದ್ದಾರೆ. ನಾಗೇಶ ವಿ. ಆಚಾರ್ಯ ಛಾಯಾಗ್ರಹಣವಿದೆ. ರಾಜಕಿಶೋರ್ ರಾವ್ ಸಂಗೀತವಿದೆ. ಈಶ್ವರ ಸಂಕಲನ, ಥ್ರಿಲ್ಲರ್ ಮಂಜು ಸಾಹಸವಿದೆ.