Advertisement

ದೇಶ ಕಾಯುವ ಸೈನಿಕರಿಗಿಂತ ಶ್ರೇಷ್ಠ  ಸಂತರಿಲ್ಲ 

05:12 PM Aug 22, 2018 | Team Udayavani |

ಬೀಳಗಿ: ಯಾವುದೇ ಆಸೆ-ಆಮಿಷವಿಲ್ಲದೆ ಕೇವಲ ತನ್ನ ಆತ್ಮ ಸಂತೋಷಕ್ಕಾಗಿ ಮಾತ್ರ ದೇಶದ ರಕ್ಷಣೆ ಮಾಡುವ ಯೋಧ ನಮ್ಮ ಹೆಮ್ಮೆ. ಹಣಕ್ಕಾಗಿ, ಅಧಿಕಾರಕ್ಕಾಗಿ ತ್ಯಾಗ ಮಾಡುವವರಿದ್ದಾರೆ. ಆದರೆ, ದೇಶಕ್ಕಾಗಿಯೇ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಸೈನಿಕರಿಗಿಂತ ಮತ್ಯಾವ ಶ್ರೇಷ್ಠ ಸಂತರಿಲ್ಲ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀ ಹೇಳಿದರು.

Advertisement

ತಾಲೂಕಿನ ಬಾಡಗಂಡಿ ಗ್ರಾಮದ ಹತ್ತಿರ ಇಂಡಿಯನ್‌ ಪೆಟ್ರೋಲ್‌ ಪಂಪ್‌ ಎದುರಿನ ಬಯಲು ಜಾಗದಲ್ಲಿ ಕೊಂತಿಕಲ್‌ ಹಾಗೂ ಬ್ಯಾಳೆಪ್ಪಗೋಳ ಪರಿವಾರದವರು ಮಂಗಳವಾರ ಆಯೋಜಿಸಿದ್ದ ಜೈ ಜವಾನ್‌, ಜೈ ಕಿಸಾನ್‌ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ದೇಶದ ಜನ ದೈಹಿಕ, ಮಾನಸಿಕವಾಗಿ ಸಶಕ್ತರಾಗಿರಲು ಯೋಧ, ರೈತ ಮತ್ತು ಶಿಕ್ಷಕರ ಪರಿಶ್ರಮದ ಫಲವಿದೆ. ದೇಶಕ್ಕಾಗಿ ಜೀವ ತ್ಯಾಗ ಮಾಡುವ ಅದ್ಭುತ ವ್ಯಕ್ತಿ ಸೈನಿಕ, ರಜೆಯಿಲ್ಲದೆ ದೇಶದ ಜನರ ಪೋಷಣೆಗೆ ಅನ್ನ ನೀಡುವ ಮಹಾನ್‌ ವ್ಯಕ್ತಿ ಭೂ ತಪಸ್ವಿ ರೈತ. ದೇಶಕ್ಕೆ ಸತ್ಪ್ರಜೆಗಳನ್ನು ನೀಡುವ ಜ್ಞಾನ ತಪಸ್ವಿ ಶಿಕ್ಷಕ. ಈ ಮೂವರು ಭವಿಷ್ಯದ ಭಾರತದ ಅದ್ಭುತ ಶಕ್ತಿಗಳು. ಯೋಧ, ರೈತ ಮತ್ತು ವಿದ್ಯೆ ನೀಡುವ ಶಿಕ್ಷಕರನ್ನು ಯಾವ ದೇಶ ಗೌರವಿಸುತ್ತದೆಯೋ ಆ ದೇಶ ಸದಾಕಾಲ ಸುರಕ್ಷಿತವಾಗಿರುತ್ತದೆ. ಮನೆ, ಮಾರು, ಸಂಪತ್ತು ಮನದಲ್ಲಿ ತುಂಬಿಕೊಂಡವರು ಕೋಟ್ಯಂತರ ಜನರಿದ್ದಾರೆ. ಆದರೆ ಭಾರತವನ್ನು ಮನದಲ್ಲಿ ತುಂಬಿಕೊಂಡವರು ಅದ್ಭುತ ವ್ಯಕ್ತಿಗಳು. ಈ ದೇಶದ ರೈತ ಶ್ರೀಮಂತನಾಗಬೇಕು. ಸೈನಿಕ ಸಶಕ್ತನಾಗುತ್ತಿರಬೇಕು. ಶಿಕ್ಷಕ ಪರಿಪೂರ್ಣನಾಗಬೇಕು ಅಂದಾಗ ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.

ಯುದ್ಧದಲ್ಲಿ ಜಯಶಾಲಿಯಾದ, ಯುದ್ಧದಲ್ಲಿ ಅಂಗವೈಕಲ್ಯತೆ ಹೊಂದಿದ ಯೋಧರನ್ನು ಹಾಗೂ ಹುತಾತ್ಮ ಯೋಧ ಕುಟುಂಬದವರನ್ನು ಹಾಗೂ ಶಿಕ್ಷಕರನ್ನು ಮತ್ತು ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳಾ ರೈತರು ಸೇರಿದಂತೆ ರೈತರನ್ನು ಈ ವೇಳೆ ಸನ್ಮಾನಿಸಲಾಯಿತು. ನಂತರ ರಕ್ತದಾನ ಶಿಬಿರ ಜರುಗಿತು.

ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೀಳಗಿಯ ಗುರುಪಾದ ದೇವರು, ಫಕೀರಯ್ಯ ಸ್ವಾಮೀಜಿ, ಬಾಡಗಂಡಿಯ ಬಸಮ್ಮ ತಾಯಿ, ರೈತ ಮಹಿಳೆ ಮಂಜುಶಾ ಪಾಟೀಲ, ಸಿದ್ದವ್ವ ಕೊಂತಿಕಲ್‌ ಇತರರು ಇದ್ದರು. ಶಾಸಕ ಮುರುಗೇಶ ನಿರಾಣಿ, ವಿ.ಪ.ಸದಸ್ಯ ಎಸ್‌.ಆರ್‌.ಪಾಟೀಲ, ಹನುಮಂತ ನಿರಾಣಿ ಇತರ ಗಣ್ಯರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವೇದಿಕೆ ಮುಂಭಾಗದಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ಶಿವುಕುಮಾರ ಕೊಂತಿಕಲ್‌ ಸ್ವಾಗತಿಸಿದರು. ಗುರುರಾಜ ಲೂತಿ ನಿರೂಪಿಸಿದರು. ಸಂತೋಷ ಜಂಬಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next