Advertisement

ಪದ್ಮಿನಿಯೊಂದಿಗೆ ಬರುತ್ತಾರೆ ಜಗ್ಗೇಶ್‌!

09:20 AM Apr 16, 2019 | Team Udayavani |

“ಪದ್ಮಿನಿ’ ಅಂದರೆ ಬಹಳಷ್ಟು ಜನರಿಗೆ ಪ್ರೀತಿ. ಇನ್ನು ಕೆಲವರಿಗಂತೂ ಸಿಕ್ಕಾಪಟ್ಟೆ ಜೋಶು… ಅರೆ, ಯಾರಪ್ಪ ಈ ಪದ್ಮಿನಿ ಎಂಬ ಗೊಂದಲ ಬೇಡ. ಇಲ್ಲಿ ಹೇಳುತ್ತಿರುವುದು “ಪ್ರೀಮಿಯರ್‌ ಪದ್ಮಿನಿ’ ಎಂಬ ಕಾರಿನ ಕುರಿತು. ಹೌದು, ಈಗಾಗಲೇ ಈ ಚಿತ್ರ ಬಿಡುಗಡೆ ಮುನ್ನವೇ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇದೆ.

Advertisement

ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ಗಂತೂ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿರುವುದಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗಳೂ ತೂರಿಬರುತ್ತಿವೆ. ಚಿತ್ರತಂಡ ಏ.26 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ಈ ಚಿತ್ರದ ಮುಖ್ಯ ಆಕರ್ಷಣೆ ಜಗ್ಗೇಶ್‌. ಅವರೊಂದಿಗೆ ಮಧುಬಾಲ, ಸುಧಾರಾಣಿ, ದತ್ತಣ್ಣ, ಪ್ರಮೋದ್‌, ವಿವೇಕ್‌ ಸೇರಿದಂತೆ ಅನೇಕು ನಟಿಸಿದ್ದಾರೆ. ಜಗ್ಗೇಶ್‌ ಚಿತ್ರ ಅಂದಮೇಲೆ, ಅಲ್ಲಿ ಹಾಸ್ಯಕ್ಕೇನೂ ಕೊರತೆ ಇರಲ್ಲ. ಟ್ರೇಲರ್‌ ನೋಡಿದವರಿಗೆ ಹಾಸ್ಯದ ಜೊತೆಗೊಂದು ಭಾವುಕತೆ ಹೆಚ್ಚಿಸುವ ಸನ್ನಿವೇಶಗಳೂ ಕಾಣಸಿಗುತ್ತವೆ.

ಹಾಗಾಗಿ ಇದು, ಕ್ಲಾಸ್‌ ಮತ್ತು ಮಾಸ್‌ ಪ್ರಿಯರಿಗೆ ಇಷ್ಟವಾಗುವಂತಹ ಅಂಶಗಳನ್ನೇ ನೀಡಲಿದೆ ಎಂಬುದು ನಿರ್ದೇಶಕ ರಮೇಶ್‌ ಇಂದಿರಾ ಅವರ ಅಭಿಪ್ರಾಯ. ರಮೇಶ್‌ ಇಂದಿರಾ ಅವರಿಗೆ ಇದು ಮೊದಲ ಚಿತ್ರ. ಹಾಗಂತ ಅವರಿಗೆ ಈ ಕ್ಷೇತ್ರ ಹೊಸದಲ್ಲ. ಹಲವು ವರ್ಷಗಳಿಂದ ಕಿರುತೆರೆಯಲ್ಲಿ ನಿರ್ದೇಶಕರಾಗಿದ್ದ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ.

ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಚಿತ್ರ ಕೊಡಬೇಕು ಎಂಬ ಕಾರಣಕ್ಕೆ, ಕೌಟುಂಬಿಕ ಸಿನಿಮಾ ಮಾಡಿ, ಬಿಡುಗಡೆಗೆ ರೆಡಿಯಾಗಿರುವ ನಿರ್ದೇಶಕರ ಪ್ರಯತ್ನವನ್ನು ಕನ್ನಡದ ಹಲವು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ ವೀಕ್ಷಿಸಿದ ನಿರ್ದೇಶಕರಾದ ತರುಣ್‌ ಸುಧೀರ್‌, ಚೇತನ್‌ಕುಮಾರ್‌, ರಿಷಭ್‌ಶೆಟ್ಟಿ, ಚೈತನ್ಯ, ನಂದಕಿಶೋರ್‌, ಎ.ಪಿ.ಅರ್ಜುನ್‌,

Advertisement

ಎ.ಹರ್ಷ, ರಾಜ್‌.ಬಿ.ಶೆಟ್ಟಿ ಮತ್ತು ಅನೂಪ್‌ ಭಂಡಾರಿ ಸೇರಿದಂತೆ ಇತರೆ ನಿರ್ದೇಶಕರು ಟ್ರೇಲರ್‌ ಒಳಗಿರುವ “ಸಾರ’ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಶ್ರುತಿನಾಯ್ಡು ನಿರ್ಮಾಪಕರು. ಸಿನಿಮಾಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಪೂರೈಸುವ ಮೂಲಕ ಏ.26 ರಂದು ಬಿಡುಗಡೆ ಮಾಡಲು ಅಣಿಯಾಗಿದ್ದಾರೆ. ಒಂದು ಪರಿಪೂರ್ಣ ಕೌಟುಂಬಿಕ ಸಿನಿಮಾದಲ್ಲಿ ಏನೇನು ಇರಬೇಕೋ ಅದೆಲ್ಲವೂ ಇಲ್ಲಿದೆ.

ಈಗಿನ ಯುವಕರಿಗೂ ಇಷ್ಟವಾಗುವಂತಹ ಅಂಶಗಳು ಇಲ್ಲಿ ಹೈಲೈಟ್‌ ಆಗಿದ್ದು, ಪ್ರತಿಯೊಬ್ಬರೂ, ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂಬ ಅಭಿಪ್ರಾಯ ಪಡುತ್ತಾರೆ ಶ್ರುತಿನಾಯ್ಡು. ಜಗ್ಗೇಶ್‌ ಪ್ರಕಾರ, “ಪ್ರೀಮಿಯರ್‌ ಪದ್ಮಿನಿ’ ಖಂಡಿತವಾಗಿಯೂ ನೋಡುಗರಿಗೆ ಕಣ್ಣುಗಳನ್ನು ಒದ್ದೆ ಮಾಡುತ್ತದೆ ಎಂಬ ಗ್ಯಾರಂಟಿ ಕೊಡುತ್ತಾರೆ. ವಿನಾಕಾರಣ ಇಲ್ಲಿ ಅಸಹ್ಯ ಹುಟ್ಟಿಸುವ ದೃಶ್ಯಗಳಾಗಲಿ, ಅಪಾರ್ಥ ಎನಿಸುವ ಸಂಭಾಷಣೆಯಾಗಲಿ, ಬಿಲ್ಡಪ್‌ಗ್ಳಾಗಲಿ ಇಲ್ಲ.

ಪ್ರತಿಯೊಬ್ಬರ ಮನದಲ್ಲೂ ಉಳಿಯುವಂತಹ ಚಿತ್ರ ಇದಾಗಲಿದೆ. ಕನ್ನಡದ ಸದಭಿರುಚಿಯ ಚಿತ್ರಗಳ ಸಾಲಿಗೆ ಇದೂ ಹೊಸ ಸೇರ್ಪಡೆ ಎನ್ನುತ್ತಾರೆ ಜಗ್ಗೇಶ್‌. ಅಂದಹಾಗೆ, ಇದೊಂದು ಕಾರು ಮಾಲೀಕ ಹಾಗೂ ಅವನ ಚಾಲಕನ ನಡುವಿನ ಕಥೆ. ತಪ್ಪು-ಸರಿಗಳ ನಡುವೆ ಚಿತ್ರ ಸಾಗುತ್ತದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next