Advertisement

ಜಗ್ಗೇಶ್‌ ಹುಟ್ಟುಹಬ್ಬ: ರೋಗಿಗಳಿಗೆ ಮಾಸ್ಕ್ ವಿತರಣೆ

09:20 PM Mar 17, 2020 | Lakshmi GovindaRaj |

ಕೊರಟಗೆರೆ: ದೇಶಾದ್ಯಂತ ಮಹಾಮಾರಿಯಾಗಿ ಕಂಡು ಬರುತ್ತಿರುವ ಕೊರೊನಾ ವೈರಸ್‌ ಸಾರ್ವಜನಿಕ ವಲಯದಲ್ಲಿ ನಿದ್ದೆಗೆಡಿಸಿದ್ದು ಕೊರೊನಾ ವೈರಸ್‌ಗೆ ಹೆದರುವ ಬದಲು ಸ್ವಚ್ಛತೆ ಕಾಪಾಡಲು ಗಮನ ಹರಿಸಬೇಕು ಹಾಗೂ ಎಚ್ಚರಿಕೆ ಕ್ರಮವಾಗಿ ಮಾಸ್ಕ್ ಉಪಯೋಗಿಸಬೇಕು ಎಂದು ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ ಅಧ್ಯಕ್ಷ ಕೆ.ಎನ್‌.ರವಿಕುಮಾರ್‌ ಹೇಳಿದರು.

Advertisement

ನವರಸ ನಾಯಕ ಜಗ್ಗೇಶ್‌ ಅವರ 57ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ಫ್ರೆಂಡ್ಸ್‌ ಗ್ರೂಪ್‌ ಮತ್ತು ಜಗ್ಗೇಶ್‌ ಅಭಿಮಾನಿ ಬಳಗದ ವತಿಯಿಂದ ಕೊರೊನಾ ವೈರಸ್‌ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಿ ಮಾತನಾಡಿದರು.

ಸ್ವಚ್ಛತೆ ಕಾಪಾಡಿ: ಸ್ವಚ್ಛ ಪರಿಸರ ಕಾಪಾಡಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಕೊರೊನಾ ವೈರಸ್‌ನ್ನು ಹತೋಟಿಗೆ ತರಲು ಸಜ್ಜಾಗಿದ್ದಾರೆ, ಜನರಲ್ಲಿ ಯಾವುದೆರೀತಿಯ ಭಯ ಬೇಡ, ಕೊರೊನಾ ವೈರಸ್‌ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ಜಿಲ್ಲಾ ಜಗ್ಗೇಶ್‌ ಅಭಿಮಾನಿ ಬಳಗದ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ಸಾರ್ವಜನಿಕರು ಸ್ವಯಂ ಜಾಗೃತರಾಗಿ ಕಾಯಿಲೆ ಇರುವವರ ಬಳಿ ತೆರಳದೆ ಅಂತರ ಕಾಯ್ದುಕೊಳ್ಳಬೇಕು. ಜನರು ಗುಂಪು ಗುಂಪಾಗಿ ಸೇರುವುದನ್ನು ನಿಯಂತ್ರಣ ಮಾಡಬೇಕು, ಹಲವಾರು ಬಾರಿ ಕೈಗಳನ್ನು ತೊಳೆದುಕೊಂಡು ಶುಚಿಯಾಗಿಟ್ಟುಕೊಳ್ಳಬೇಕು.

ಪದೇ ಪದೆ ಕಣ್ಣು, ಮೂಗು, ಬಾಯಿಯನ್ನು ಕೈಗಳಿಂದ ಮುಟ್ಟಿಕೊಳ್ಳಬಾರದು ಹಾಗೂ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು. ಆದರೆ ಪ್ರಸ್ತುತ ಮಾಸ್ಕ್ ಖರೀದಿಸಲು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದ್ದು ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದು ಸರ್ಕಾರವೇ ಮಾಸ್ಕ್ಗಳನ್ನು ಆಸ್ಪತ್ರೆಗಳ ಮೂಲಕ ಸಾರ್ವಜನಿಕರಿಗೆ ನಿಗದಿತ ಬೆಲೆಯಲ್ಲಿ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

ನಂತರ ಪಟ್ಟಣದ ರಸ್ತೆಗಳ ಮಧ್ಯಭಾಗದಲ್ಲಿ ಫ್ರೆಂಡ್ಸ್‌ ಗ್ರೂಪ್‌ ವತಿಯಿಂದ ಬೆಳೆಸಿರುವ ಗಿಡಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೇಸಿಗೆಯ ಬಲಿಗೆ ಒಣಗುತ್ತಿದ್ದ ಗಿಡಗಳ ಜೀವ ಉಳಿಸಿದರು. ಡಾ.ಅನಿಲ್‌, ಡಾ.ಸುಜಾತನಾಗ್‌, ಸಿಬ್ಬಂದಿ ನಾಗಣ್ಣ, ವೆಂಕಟೇಶ್‌, ಫ್ರೆಂಡ್ಸ್‌ ಗ್ರೂಪ್‌ ಮತ್ತು ಜಗ್ಗೇಶ್‌ ಅಭಿಮಾನಿ ಬಳಗದ ಶಿವಾನಂದ್‌, ಪ್ರದೀಪ್‌ಕುಮಾರ್‌, ಶಿವಶಂಕರ್‌, ಮುರಳೀಧರ, ಶಶಿಕುಮಾರ್‌, ಶ್ರೀಕಾಂತ, ಗಿರೀಶ್‌, ನಟರಾಜು, ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next