Advertisement

ವಂಶಪಾರಂಪರ್ಯ ರಾಜಕೀಯದಿಂದ ಕಾಂಗ್ರೆಸ್ ಉದ್ಧಾರ ಆಗಲ್ಲ: ಜಗದೀಶ್ ಶೆಟ್ಟರ್

06:18 PM Mar 02, 2021 | Team Udayavani |

ಮಂಡ್ಯ: ಕಾಂಗ್ರೆಸ್‌ನ ಕುಟುಂಬ ರಾಜಕಾರಣ ವಿರುದ್ಧ ಪಕ್ಷದ ಹಿರಿಯ ಮುಖಂಡರು ಸಿಡಿದು ನಿಂತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ನ 17ಕ್ಕೂ ಹೆಚ್ಚು ಹಿರಿಯ ನಾಯಕರು ಕಾಶ್ಮೀರದಲ್ಲಿ ಸಭೆ ನಡೆಸಿದ್ದು, ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದಾರೆ. ವಂಶಪಾರoಪರ್ಯ ವ್ಯವಸ್ಥೆ ಇರುವವರೆಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಉದ್ಧಾರ ಆಗುವುದಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ವಂಶಪಾರoಪರ್ಯ ರಾಜಕಾರಣ ನಿಲ್ಲದಿದ್ದರೆ ಪಕ್ಷದ ಬೆಳವಣಿಗೆ ಅಸಾಧ್ಯ ಎಂದು ಅವರದ್ದೇ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಕೇವಲ ರಾಷ್ಟ್ರ ರಾಜಕಾರಣದಲ್ಲಿ ಮಾತ್ರವಲ್ಲದೇ ರಾಜ್ಯ ರಾಜಕಾರಣದಲ್ಲೂ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣ ಎಂದು ಪಕ್ಷ ಎರಡು ಹೋಳಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ: ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದ್ದು, ದಿನಬೆಳಗಾದರೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಜಂಗೀ ಕುಸ್ತಿ ನಡೆಯುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ಭವಿಷ್ಯ ನುಡಿದರು.

ಇತ್ತೀಚೆಗೆ ದೇಶದ ನಾಲ್ಕೈದು ರಾಜ್ಯಗಳಲ್ಲಿ ಅಧಿಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಕಾಂಗ್ರೆಸ್ ನೆಲಸಮವಾಗಿದೆ. ಕರ್ನಾಟಕದಲ್ಲಿ ಅಲ್ಪಸ್ವಲ್ಪ ಅಸ್ತಿತ್ವ ಉಳಿಸಿಕೊಂಡಿತ್ತು. ಮುಂದಿನ ದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲೂ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಇದನ್ನೂ ಓದಿ:ಮೋದಿಗೆ ಬಹುಪರಾಕ್ : ಜಮ್ಮುವಿನಲ್ಲಿ ಆಜಾದ್ ವಿರುದ್ಧ ಆಕ್ರೋಶ ..!

Advertisement

ಎಸ್‌ಎಂಕೆ ಎಲ್ಲಿ ಡಿಕೆಶಿ ಎಲ್ಲಿ: ಎಸ್.ಎಂ.ಕೃಷ್ಣ ರೀತಿಯಲ್ಲಿ ಡಿ.ಕೆ.ಶಿವಕುಮಾರ್ ಪಾಂಚಜನ್ಯ ಮೊಳಗಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್.ಎಂ.ಕೃಷ್ಣ ಅವರಿಗೆ ಡಿ.ಕೆ.ಶಿವಕುಮಾರ್ ಅವರನ್ನು ಹೋಲಿಸಬೇಡಿ. ಎಸ್.ಎಂ.ಕೃಷ್ಣ ಅವರು ಎಲ್ಲಿ ಡಿ.ಕೆ.ಶಿವಕುಮಾರ್ ಎಲ್ಲಿ. ತಾಕತ್ತಿದ್ದರೆ ಡಿಕೆಶಿ ಪಾರ್ಟಿ ಕಟ್ಟಿ ತೋರಿಸಲಿ. ಶಿವಕುಮಾರ್‌ಗೆ ಪಕ್ಷ ಕಟ್ಟುವ ತಾಕತ್ತು ಇಲ್ಲ ಎಂದು ಛೇಡಿಸಿದರು.

ಡಿ.ಕೆ.ಶಿವಕುಮಾರ್ ಮೊದಲು ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲಿ. ಅವರಿಗೆ ಸಿದ್ದರಾಮಯ್ಯ ಅವರನ್ನೇ ಸಮಾಧಾನ ಮಾಡಲು ಆಗುತ್ತಿಲ್ಲ. ಇನ್ನು ಪಾರ್ಟಿ ಕಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಶಾಸಕ ತನ್ವೀರ್ ಸೇಠ್‌ಗೆ ನೋಟೀಸ್ ನೀಡಲಾಗಿದೆ. ಕಾಂಗ್ರೆಸ್‌ನ ಒಳ ಜಗಳ ಎಲ್ಲರಿಗೂ ಗೊತ್ತಾಗಿದೆ. ಅದನ್ನು ಮುಚ್ಚಿಡಲು ಆಗುವುದಿಲ್ಲ ಎಂದರು.

ಪಂಚಮಸಾಲಿ ಮೀಸಲಾತಿ ಬಗ್ಗೆ ಸದನದಲ್ಲಿ ಹೋರಾಡುತ್ತೇನೆಂಬ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳುತ್ತಾರೆ. ಯತ್ನಾಳ್ ಹೋರಾಟ ನಡೆಸುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next