ಬೆಳಗಾವಿ: ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು ಎಲ್ಲವೂ ವೇದವಾಕ್ಯ ಅಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕುವ ಪಾಟೀಲರು ಮೊದಲು ಈಗ ನಡೆಯುವ ಮೂರು ಉಪಚುನಾವಣೆಗಳನ್ನು ಗೆದ್ದು ತೋರಿಸಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮರು ಸವಾಲು ಹಾಕಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂ.ಬಿ. ಪಾಟೀಲ್ ಅವರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ. ಈ ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಅದರ ಮೇಲೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ:ಬಿಜೆಪಿಗೆ ಮಾರಾಟವಾದ ಪ್ರತಾಪಗೌಡ ಪಾಟೀಲರಿಗೆ ಮತದಾರರ ಪಾಠ ಕಲಿಸಲಿದ್ದಾರೆ: ಡಿ ಕೆ ಶಿವಕುಮಾರ್
ಈ ಹಿಂದೆ ನಡೆದ 15 ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗ ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ. ವಾತಾವರಣ ನಮ್ಮ ಪರವಾಗಿದೆ. ಹೀಗಿರುವಾಗ ಹೊಸದಾಗಿ ಅಸೆಂಬ್ಲಿ ಚುನಾವಣೆ ಮಾಡುವುದು ಬೇಡ, ಈಗ ಮೂರು ಚುನಾವಣೆಗಳಲ್ಲಿ ಗೆದ್ದು ತೋರಿಸಲಿ ಎಂದು ಪ್ರತಿ ಸವಾಲು ಹಾಕಿದರು.
ಲಖನ್ ಜಾರಕಿಹೊಳಿ ಮನೆಗೆ ಹೋಗಿ ಚರ್ಚೆ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿದ ಅವರು ಗೋಕಾಕದಲ್ಲಿ ಲಖನ್ ಜಾರಕಿಹೊಳಿ ಬಿಜೆಪಿ ಪರ ಕೆಲಸ ಮಾಡುತ್ತಾರೆ. ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಲಖನ್‍ಗೆ ಬೇಸರ ತಂದಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ 41ನೇ ಸ್ಥಾಪನಾ ದಿವಸ್ : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ : ಮೋದಿ
ಇನ್ನು ಅನಾರೋಗ್ಯದ ಕಾರಣ ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರದಿದ್ದರೂ, ತಮ್ಮ ಮುಖಂಡರು, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.