ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಕರ್ನಾಟಕ ವಿಶ್ವವಿದ್ಯಾಲಯ ಕಳೆದ ಏಪ್ರಿಲ್-ಮೇ ನಲ್ಲಿ ನಡೆಸಿದ ಬಿಕಾಂ ಪದವಿ ಪರೀಕ್ಷೆಯಲ್ಲಿ ಐದು ರ್‍ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆ ತೋರಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕರ್ನಾಟಕ ವಿಶ್ವವಿದ್ಯಾಲಯ ನೀಡುವ ಟಾಪ್ 10 ರ್‍ಯಾಂಕ್‌ಗಳಲ್ಲಿ ಮಹಾವಿದ್ಯಾಲಯದ ಐದು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದರು.
ವಿದ್ಯಾರ್ಥಿಗಳಾದ ವರ್ಷಾ ದೇಶಪಾಂಡೆ ಶೇ.96.30 ಅಂಕಗಳೊಂದಿಗೆ ಮೊದಲ ರ್‍ಯಾಂಕ್, ನೇಹಾ ನಾಡಪುರೋಹಿತ ಶೇ.94.16 ಅಂಕಗಳೊಂದಿಗೆ ನಾಲ್ಕನೇ ರ್‍ಯಾಂಕ್, ವೈಖರಿ ಪಾಟೀಲ ಶೇ.93.43 ಅಂಕಗಳೊಂದಿಗೆ 6ನೇ ರ್‍ಯಾಂಕ್, ಐಶ್ವರ್ಯ ಕಲುºರ್ಗಿ ಶೇ.93.08 ಅಂಕಗಳೊಂದಿಗೆ 9ನೇ ರ್‍ಯಾಂಕ್ ಹಾಗೂ ಸಚಿನ ಭಟ್ ಶೇ.93.03 ಅಂಕಗಳೊಂದಿಗೆ 10ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಮಹಾವಿದ್ಯಾಲಯ ಸತತವಾಗಿ ರ್‍ಯಾಂಕ್ ಪಡೆಯುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಕವಿವಿಗೆ ಮೊದಲ ರ್‍ಯಾಂಕ್ ಬಂದಿರುವ ವರ್ಷಾ ದೇಶಪಾಂಡೆ ಕಳೆದ ಮೂರು ವರ್ಷದಿಂದ ಕರ್ನಾಟಕ ವಿಶ್ವವಿದ್ಯಾಲಯ ನೀಡುವ ಡಾ| ಡಿ.ಸಿ. ಪಾವಟೆ ಪ್ರಶಸ್ತಿಗೆ ಭಾಜನವಾಗಿದ್ದಾರೆ. 1947ರಲ್ಲಿ ಪ್ರಾರಂಭವಾಗಿರುವ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯ ಕಳೆದ ಹಲವು ವರ್ಷಗಳಿಂದ ರ್‍ಯಾಂಕ್ ಪಡೆಯುತ್ತಾ ಬಂದಿದೆ.
ಇದಲ್ಲದೆ ನ್ಯಾಕ್ ನಿಂದಲೂ ಎ ಗ್ರೇಡ್ ಪಡೆಯುತ್ತಿದೆ ಎಂದರು. ಬಿಕಾಂನಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿ ವರ್ಷಾ ದೇಶಪಾಂಡೆ ಮಾತನಾಡಿ, ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ಮೊದಲ ರ್‍ಯಾಂಕ್ ಸಾಧ್ಯವಾಗಿದ್ದು, ಇದು ಕೇವಲ ನನ್ನ ವೈಯಕ್ತಿಕ ಸಾಧನೆ ಮಾತ್ರ ಅಲ್ಲ ಎಂದರು.
ಆರನೇ ರ್‍ಯಾಂಕ್ ಪಡೆದ ವೈಖರಿ ಪಾಟೀಲ ಮಾತನಾಡಿ, ಸತತ ಅಧ್ಯಯನ ಅಷ್ಟೇ ಅಲ್ಲದೆ, ಕಾಲೇಜಿನಲ್ಲಿ ಇನ್ನಿತರ ಕ್ಷೇತ್ರಗಳಲ್ಲೂ ಮಾರ್ಗದರ್ಶನ ದೊರೆತಿದ್ದರಿಂದ ರ್‍ಯಾಂಕ್ ಸಾಧನೆ ಸಾಧ್ಯವಾಗಿದೆ ಎಂದರು. 9ನೇ ರ್‍ಯಾಂಕ್ ಪಡೆದ ಐಶ್ವರ್ಯಾ ಕಲುºರ್ಗಿ, 10ನೇ ರ್‍ಯಾಂಕ್ ಪಡೆದ ಸಚಿನ ಭಟ್, 5ನೇ ರ್‍ಯಾಂಕ್ ಪಡೆದ ನೇಹಾ ನಾಡಪುರೋಹಿತ ಮಾತನಾಡಿದರು.
ಪ್ರಾಚಾರ್ಯ ಡಾ| ಡಿ.ವಿ. ಹೊನಗಣ್ಣನವರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರ್‍ಯಾಂಕ್ ಪಡೆಯುತ್ತಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇವಲ ಅಧ್ಯಯನ ಅಷ್ಟೇ ಅಲ್ಲದೆ ಕ್ರೀಡೆಯಲ್ಲೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 55 ಯುನಿರ್ವಸಿಟಿ ಬ್ಲ್ಯುಗಳಾಗಿ ಆಯ್ಕೆಯಾಗಿದ್ದಾರೆ. ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಡಿಜಿಟಲ್ ಗ್ರಂಥಾಲಯದ ವ್ಯವಸ್ಥೆ ಮಾಡಲಾಗಿದೆ ಎಂದರು. ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ| ಎಂ.ಎಸ್. ಬೆಂಬಳಗಿ, ಡಾ| ವಿ.ಆರ್. ಹಿರೇಮಠ, ಪ್ರೊ| ಎಸ್.ಎಸ್. ಪಾಟೀಲ, ಇದ್ದರು.