Advertisement

ಜ. 18: ಪಲಿಮಾರು ಶ್ರೀ ಸರ್ವಜ್ಞ  ಪೀಠಾರೋಹಣ

06:40 AM Jan 15, 2018 | Team Udayavani |

ಉಡುಪಿ: ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜ. 18ರಂದು ಪ್ರಾತಃಕಾಲ 3 ಗಂಟೆಗೆ ವೈಭವದ ಪರ್ಯಾಯ ಮೆರವಣಿಗೆ, 6.35ಕ್ಕೆ ಶ್ರೀಗಳ ಸರ್ವಜ್ಞ ಪೀಠಾರೋಹಣ ನೆರವೇರಲಿದೆ.

Advertisement

15ಕ್ಕೂ ಅಧಿಕ ಸ್ತಬ್ಧಚಿತ್ರಗಳು, 60ಕ್ಕೂ ಹೆಚ್ಚು ವೈವಿಧ್ಯಮಯ ಜಾನಪದ ಕಲಾ ತಂಡಗಳು, ಸಂಕೀರ್ತನೆ, ಭಜನ ತಂಡಗಳೊಂದಿಗೆ ವೈಭವದ ಮೆರವಣಿಗೆ ಜೋಡುಕಟ್ಟೆಯಿಂದ ರಥಬೀದಿಗೆ ಸಾಗಿಬರಲಿದೆ. ಅನಂತರ ಮುಂಜಾನೆ 6.35ಕ್ಕೆ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣಗೈಯಲಿದ್ದಾರೆ. ಬಳಿಕ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್‌ ಜರಗಲಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಪತ್ರಿಕಾ ಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ದರ್ಬಾರ್‌ ಸಮ್ಮಾನಿತರು
ಪರ್ಯಾಯ ದರ್ಬಾರ್‌ನಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪೇಜಾವರ ಶ್ರೀಪಾದರು ಮತ್ತು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಲಿದ್ದಾರೆ. ಕೆ. ವಾಸುದೇವ ಆಸ್ರಣ್ಣ, ಡಾ| ಮೋಹನ ಆಳ್ವ, ನೇರಂಬಳ್ಳಿ ರಾಘವೇಂದ್ರ ರಾವ್‌, ಮಯೂರ ಶ್ರೀನಿವಾಸ ರಾವ್‌, ಕೆ. ನಾಗರಾಜ ಪುರಾಣಿಕ, ಅಡ್ಕ ರಾಘವೇಂದ್ರ ರಾವ್‌, ಡಾ| ರಾಜೇಂದ್ರ ಸಿಂಗ್‌, ಮಧುಪಂಡಿತ್‌ ದಾಸ್‌, ಕಿಶೋರ್‌ ಆಳ್ವ, ಕೆ. ರಾಮಪ್ರಸಾದ್‌ ಭಟ್‌ ಚೆನ್ನೈ, ಅಪ್ಪಣ್ಣ ಹೆಗ್ಡೆ, ಗೋಪಾಲ್‌ ಮೊಗೆರಾಯ, ಬಿ.ಆರ್‌. ಶೆಟ್ಟಿ ಅವರನ್ನು ದರ್ಬಾರ್‌ನಲ್ಲಿ ಸಮ್ಮಾನಿಸಲಾಗುವುದು ಎಂದು ತಿಳಿಸಿದರು.

ಲಕ್ಷ  ತುಳಸಿ ಅರ್ಚನೆ
ದರ್ಬಾರ್‌ ಅನಂತರ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಬೆಳಗ್ಗೆ ಶ್ರೀಪಾದರ ಸಂಕಲ್ಪದಂತೆ 2 ವರ್ಷಗಳ ಅಖಂಡ ಭಜನೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಹಾಪೂಜೆಯ ಅನಂತರ ಸಾರ್ವ ಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ ಪರ್ಯಾಯದ ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆ ಗೊಂಡು ಜ. 29ರ ವರೆಗೆ ಪ್ರತೀ ದಿನ ಸಂಜೆ 7 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದರು.

ಪೇಜಾವರ ಶ್ರೀಗಳಿಗೆ ಅಭಿನಂದನೆ
ಪಂಚಮ ಪರ್ಯಾಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಮತ್ತು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಜ. 17ರಂದು ರಾತ್ರಿ 7ಕ್ಕೆ ರಥಬೀದಿಯ ಶ್ರೀ ಪರವಿದ್ಯಾ ಮಂಟಪದಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಸಮ್ಮಾನಿಸಲಾಗುವುದು.

Advertisement

ಜ. 17ರ ರಾತ್ರಿ, ಜ. 18ರ ಬೆಳಗ್ಗೆ ಮತ್ತು ಸಂಜೆ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಚಿವರಾದ ಅನಂತ ಕುಮಾರ್‌ ಹೆಗಡೆ, ಪ್ರಮೋದ್‌ ಮಧ್ವರಾಜ್‌, ಪಿ.ಜಿ.ಆರ್‌. ಸಿಂಧ್ಯಾ, ಸಂಸದೆ ಶೋಭಾ ಕರಂದ್ಲಾಜೆ ಮೊದ ಲಾದ ವರು ಪಾಲ್ಗೊಳ್ಳಲಿದ್ದಾರೆ ಎಂದರು.

ಮೇನೆ: ಶಿಷ್ಯರ ತೀರ್ಮಾನ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಮಿತಿ ಪದಾಧಿಕಾರಿಗಳು, “ಪರ್ಯಾಯ ಶ್ರೀಗಳು ಮೇನೆ (ಪಲ್ಲಕ್ಕಿ )ಯಲ್ಲಿ ಸಾಗುವುದು ಸಂಪ್ರದಾಯ. ಆದಾಗ್ಯೂ ಅದು ಸ್ವಾಮೀಜಿಯವರಿಗಿಂತಲೂ ಅವರ ಶಿಷ್ಯರ ಇಚ್ಛೆಯಂತೆ ನಡೆಯುತ್ತದೆ. ಪರ್ಯಾಯ ಮೆರವಣಿಗೆ ಸಾಂಪ್ರದಾಯಿಕತೆ ಮತ್ತು ವೈಭವದೊಂದಿಗೆ ನಡೆಯಲಿದೆ. ಮೆರವಣಿಗೆ ಸಾಗುವ ರಸ್ತೆಯ ಇನ್ನೊಂದು ಬದಿಯನ್ನು ಜಿಲ್ಲಾಡಳಿತ ಝೀರೋ ಟ್ರಾಫಿಕ್‌ ಝೋನ್‌ ಆಗಿ ಮಾಡಿ ಕೊಡಲಿದ್ದು ಸಾರ್ವಜನಿಕರು ರಸ್ತೆ ಯಲ್ಲಿ ನಿಂತು ಮೆರವಣಿಗೆಯ ವೈಭವ ಕಣ್ತುಂಬಿ ಕೊಳ್ಳಲು ಹೆಚ್ಚು ಅನುಕೂಲವಾಗಲಿದೆ. ಎಲ್ಲರ ಪಾಲ್ಗೊಳ್ಳು ವಿಕೆ, ಸಹಕಾರದಿಂದ ಪರ್ಯಾಯ ಮಹೋತ್ಸವ ಜರಗಲಿದೆ ಎಂದರು.

ವಿವಿಐಪಿಗಳಿಲ್ಲ
ಮೆರವಣಿಗೆ, ದರ್ಬಾರ್‌, ಸಭಾ ಕಾರ್ಯಕ್ರಮಗಳಲ್ಲಿ ನಾಡಿನ ಪ್ರಮುಖರು, ರಾಜಕಾರಣಿಗಳು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದರೆ ಲಕ್ಷಾಂತರ ಜನ ಪಾಲ್ಗೊಳ್ಳುವುದರಿಂದ ಅತೀ ಗಣ್ಯರನ್ನು ಆಹ್ವಾನಿಸಿಲ್ಲ. ಅವರ ಆಗಮನದಿಂದ ಭದ್ರತೆಯ ಕಾರಣಕ್ಕಾಗಿ ಸಾರ್ವಜನಿಕರಿಗೆ ಅನನುಕೂಲ ಆಗಬಾರದೆಂದು ಸಮಿತಿ ಈ ನಿರ್ಧಾರ ಮಾಡಿದೆ. ಅತೀ ಗಣ್ಯರನ್ನು ಪರ್ಯಾಯ ಅವಧಿಯಲ್ಲಿ ಆಹ್ವಾನಿಸಲಾಗುವುದು ಎಂದರು.

ಸ್ವಾಗತ ಸಮಿತಿ ಸಂಚಾಲಕ ಶ್ರೀಹರಿ
ನಾರಾಯಣದಾಸ ಆಸ್ರಣ್ಣ, ಪ್ರ. ಕಾರ್ಯದರ್ಶಿಗಳಾದ ಮಟ್ಟು ಲಕ್ಷ್ಮೀ ನಾರಾಯಣ ರಾವ್‌, ಕೆ. ಪದ್ಮನಾಭ ಭಟ್‌, ಪ್ರಹ್ಲಾದ ಪಿ.ಆರ್‌., ಖಜಾಂಚಿ ರಮೇಶ್‌ ರಾವ್‌ ಬೀಡು, ಅಧ್ಯಕ್ಷ ಶ್ರೀಧರ ಭಟ್‌, ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್‌ ಪಾಡಿಗಾರ್‌ ಮತ್ತು ವಿಷ್ಣು ಆಚಾರ್ಯ, ವೆಂಕಟರಮಣ ಮುಚ್ಚಿಂತಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next