Advertisement

ಸಿಬಂದಿ ಇಲ್ಲದೆ ಕಾಡು ಕಾಯೋದಿಲ್ಲಿ ಕಷ್ಟ

04:56 PM Nov 08, 2017 | |

ಸುಬ್ರಹ್ಮಣ್ಯ: ಸುಮಾರು ಒಂದು ಲಕ್ಷ ಹೆಕ್ಟೇರ್‌ ಭೌಗೋಳಿಕ ವಿಸ್ತಿರ್ಣ ಹೊಂದಿರುವ ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ ಶೇ. 60ರಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಅರಣ್ಯ ರಕ್ಷಣೆಗೆ ಇಲಾಖೆ ಪರದಾಡುತ್ತಿದೆ.

Advertisement

 ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಗೆ ಸುಳ್ಯ ತಾಲೂಕಿನ 8 ಹಾಗೂ ಪುತ್ತೂರು ತಾಲೂಕಿನ 6 ಸಹಿತ ಒಟ್ಟು 14 ಗ್ರಾಮಗಳಿವೆ. ಇದರಲ್ಲಿ ಶೇ. 80ರಷ್ಟು ಭಾಗವು ಸರಕಾರದ ಮೀಸಲು ದಟ್ಟ ಅರಣ್ಯವೆಂದು ಗುರುತಿಸಿದೆ.

ಸುಬ್ರಹ್ಮಣ್ಯ ವಿಭಾಗದ 80 ಸಾವಿರ ಎಕ್ರೆ ದಟ್ಟ ಮೀಸಲು ಅರಣ್ಯ ರಕ್ಷಣೆಗೆ ಇಲ್ಲಿರುವ ಸಿಬಂದಿ ಸಂಖ್ಯೆ ಏನೂ ಸಾಲದು. ಸರಕಾರದಿಂದ ಒಟ್ಟು 32 ಹುದ್ದೆಗಳಷ್ಟೆ ಮಂಜೂರಾಗಿವೆ. 9 ಫಾರೆಸ್ಟರ್‌, 19 ಫಾರೆಸ್ಟ್‌ ಗಾರ್ಡ್‌, 4 ವಾಚರ್‌ ಹುದ್ದೆಗಳಿದ್ದು, ಒಂದು ಫಾರೆಸ್ಟರ್‌, 9 ಗಾರ್ಡ್‌ ಹಾಗೂ 3 ವಾಚರ್‌ ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅಂದರೆ, ಶೇ. 60ರಷ್ಟು ಹುದ್ದೆಗಳು ಖಾಲಿಯೇ ಉಳಿದಿವೆ.

ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ವಲಯವೂ ಇದೆ. ಇದು ಜೈವಿಕ ವೈವಿಧ್ಯಗಳಿಂದ ಕೂಡಿದ ಅರಣ್ಯವಾಗಿದೆ. 450ಕ್ಕೂ ಅಧಿಕ ಸಸ್ಯಸಂಕುಲ, ವಿವಿಧ ಔಷಧೀಯ ಸಸ್ಯಗಳು, ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿ ಸಮೂಹ, ಅಳಿವಿನ ಅಂಚಿನಲ್ಲಿರುವ ಅಪೂರ್ವ ಸಸ್ಯಪ್ರಭೇದಗಳು ಇಲ್ಲಿವೆ. ವರ್ಷ ಪೂರ್ತಿ ಇಲ್ಲಿ ಹರಿಯುವ ನದಿ ಹಾಗೂ ಹಳ್ಳಗಳಿಗೆ ನೀರಿನ ಒರತೆಗಳನ್ನು ಒದಗಿಸಲು ಸಹಕಾರಿಯಾದ ದಟ್ಟ ಮರಗಳಿವೆ.

ಪಂಜ ವಲಯಕ್ಕೆ ಪುತ್ತೂರು ತಾಲೂಕಿನ 16 ಹಾಗೂ ಸುಳ್ಯ ತಾಲೂಕಿನ 14 ಗ್ರಾಮಗಳಿವೆ. 12,631.25 ಹೆಕ್ಟೇರ್‌ ಮೀಸಲು ಅರಣ್ಯ ಪಂಜ ವಲಯದಲ್ಲಿವೆ. ವಲಯ ಅರಣ್ಯಾಧಿಕಾರಿಗಳ ಹುದ್ದೆ ಭರ್ತಿಯಾಗಿದ್ದು, ಉಪವಲಯ ಅರಣ್ಯಾಧಿಕಾರಿಗಳ 8 ಹುದ್ದೆಗಳ ಪೈಕಿ ನಾಲ್ಕು ಭರ್ತಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. 22 ಅರಣ್ಯರಕ್ಷಕರ ಹುದ್ದೆಯ ಪೈಕಿ 11 ಮಂದಿ ಮಾತ್ರವಿದ್ದು, ಮೂವರು ಅರಣ್ಯ ವೀಕ್ಷಕರು ಇರುವಲ್ಲಿ ಇಬ್ಬರಷ್ಟೇ ಕರ್ತವ್ಯದಲ್ಲಿದ್ದಾರೆ.

Advertisement

ಅನ್ಯ ಕೆಲಸಕ್ಕೆ ನಿಯೋಜನೆ
ಇಲ್ಲಿರುವ ಬೆರಣೆಣಿಕೆಯ ಸಿಬಂದಿಗೆ ಇತರೆ ಕೆಲಸಗಳೇ ಜಾಸ್ತಿ. ಡೀಮ್ಡ್ ಫಾರೆಸ್ಟ್‌ ಸರ್ವೆ, ಅಕ್ರಮ ಸಕ್ರಮ ಹಾಗೂ 94ಸಿ ಕಡತಗಳಿಗೆ ಇಲಾಖಾಭಿಪ್ರಾಯ ವರದಿ ಸಂಗ್ರಹ, ಪರಿಶಿಷ್ಟ ಜಾತಿ – ಪಂಗಡದವರಿಗೆ ಎಲ್‌ಪಿಜಿ ವಿತರಣೆ, ಗ್ರಾಮ ಅರಣ್ಯ ಸಮಿತಿಗಳ ನಿರ್ವಹಣೆ, ಎನ್‌ಆರ್‌ಇಜಿಎಸ್‌ ಅನುಷ್ಠಾನ ಇತ್ಯಾದಿ ಕೆಲಸಗಳ ಹೊರೆಯೂ ಇದೆ.

ತಾರತಮ್ಯ ಏಕೆ?
ಮಂಗಳೂರು ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಪಟ್ಟಣ ಪ್ರದೇಶ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ವಲಯದಲ್ಲಿ ಬಹುತೇಕ ಎಲ್ಲ ಹುದ್ದೆಗಳು ಭರ್ತಿಯಾಗಿವೆ. ನೇಮಕಾತಿಯಲ್ಲಿ ತಾರತಮ್ಯ ಆಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ದಟ್ಟ ಮೀಸಲು ಅರಣ್ಯದಿಂದ ಕೂಡಿರುವ ಸುಬ್ರಹ್ಮಣ್ಯ ವಲಯವು ತೀರಾ ಗ್ರಾಮೀಣ ಒಳ ಪ್ರದೇಶವಾಗಿರುವುದರಿಂದ ಅಧಿಕಾರಿಗಳು, ಸಿಬಂದಿ ಇಲ್ಲಿಗೆ ಬರಲೂ ಹಿಂದೇಟು ಹಾಕುತ್ತಿದ್ದಾರೆ.

ಬೆಲೆಬಾಳುವ ಹರಳುಕಲ್ಲು ಪ್ರದೇಶ
ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಿರಿಭಾಗ ಮೀಸಲು ಅರಣ್ಯದ ಸುಟ್ಟತ್‌ಮಲೆ ಹಾಗೂ ಸೂಳೆಕೇರಿ ಪ್ರದೇಶದ ಭೂಮಿಯಲ್ಲಿ ಹೇರಳ ಸಂಪತ್ತು ಇದೆ. ಇಲ್ಲಿ ಸಿಗುವ ವಿಶಿಷ್ಟ ಕೆಂಪು ಹರಳುಕಲ್ಲಿಗೆ ಬಾರಿ ಬೇಡಿಕೆ ಇದೆ.

ಸಮಸ್ಯೆ ಇದೆ
ಹುದ್ದೆಗಳು ಖಾಲಿ ಇರುವುದರಿಂದ ಸಮಸ್ಯೆ ಇದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಇರುವ ಸಿಬಂದಿ ಬಳಸಿ ಅರಣ್ಯ ಸಂರಕ್ಷಣೆಗೆ ಪ್ರಯತ್ನಿಸುತ್ತಿದ್ದೇವೆ.
ತ್ಯಾಗರಾಜ್‌ ಎಚ್‌.ಎಸ್‌.,
  ವಲಯಾರಣ್ಯಾಧಿಕಾರಿ (ರೇಂಜರ್‌), ಸುಬ್ರಹ್ಮಣ್ಯ ಅರಣ್ಯ ವಲಯ

ಸಿಬಂದಿ ನೇಮಿಸಿಲ್ಲ
ಸರಕಾರವು ಪರಿಸರ ಸೂಕ್ಷ್ಮವಲಯ, ನೀರಿಗಾಗಿ ಅರಣ್ಯ ಇತ್ಯಾದಿ ಕಾರ್ಯಕ್ರಮ ಜಾರಿ ಮಾಡಿ ಅರಣ್ಯ ಸಂರಕ್ಷಣೆ ಕೆಲಸ ಮಾಡುತ್ತಿದೆ. ಇದರ ಕಾರ್ಯಗತಕ್ಕೆ ಅಗತ್ಯಕ್ಕೆ ತಕ್ಕಂತೆ ಸಿಬಂದಿ ನೇಮಿಸಿಲ್ಲ. ಸ್ಥಳೀಯ ಅಭ್ಯರ್ಥಿಗಳ ನೇಮಕವಾದಲ್ಲಿ ಅನುಕೂಲ.
ಭುವನೇಶ್‌ ಕೈಕಂಬ,
  ವನ್ಯಜೀವಿ ಸಂರಕ್ಷಣಕಾರ

Advertisement

Udayavani is now on Telegram. Click here to join our channel and stay updated with the latest news.

Next