ಹೌದು ಕಣೋ ಹುಡುಗ. ನೀ ನನ್ನ ಬದುಕಿಗೆ ಪ್ರವೇಶಿಸುವ ಮುನ್ನ ಅದು ಬರೀ ಖಾಲಿ ಹಾಳೆಯಂತೆ ಇತ್ತು. ಅದರ ಮೇಲೆ ಪ್ರೀತಿ, ಸಂತೋಷ, ಖುಷಿ, ಮುನಿಸು, ಕೋಪ ಎಂಬ ಬಣ್ಣಗಳನ್ನು ಚೆಲ್ಲಿ ಸುಂದರ ಚಿತ್ರಕಲೆಯನ್ನಾಗಿಸಿದ ಕಲಾವಿದ ನೀನು.
ನನ್ನ ಜೀವನದಲ್ಲಿ ನೀನು ಬಾರದೇ ಹೋಗಿದ್ದರೆ ನಾನು ನಿಂತ ನೀರಂತೆ ಕೊನೆಗೊಂದು ದಿನ ಅಲ್ಲಿಯೇ ಬತ್ತಿ ಹೋಗುತ್ತಿದ್ದೆನೇನೊ? ನನ್ನ ಬದುಕಿಗೆ ಅನಿರೀಕ್ಷಿತವಾಗಿ ಬಂದ ನೀನು ಈಗ ಅನಿವಾರ್ಯ ಆಗಿ ಹೋಗಿದ್ದೀಯ. ನನ್ನ ಪ್ರತೀ ಕನಸಿಗೆ ಕಾವಲುಗಾರನಾಗಿದ್ದೀಯ. ನನ್ನ ತುಡಿತಕ್ಕೆ ಮಿಡಿಯುವ ಹೃದಯವಾಗಿದ್ದೀಯ. ನಿರ್ಜೀವ ಬದುಕಿಗೆ ಪ್ರೀತಿಯೆಂಬ ಜೀವ ತುಂಬಿದವನು ನೀನು. ನನ್ನ ಬದುಕಿಗೆ ಹುಣ್ಣಿಮೆ ಬೆಳಕನ್ನು ತಂದವನು ನೀನೇ. ಇವೆಲ್ಲವನ್ನು ಉಡುಗೊರೆಯಾಗಿ ನೀಡಿದ ನಿನ್ನ ಮೇಲೆ ನನ್ನ ಪ್ರೀತಿಯ ಸ್ವಾರ್ಥವೂ ಇದೇ ಹುಡುಗ.
ಅದೇನೆಂದರೆ, ನೀನು ನನ್ನವನು ನನಗೆ ಮಾತ್ರ ಸ್ವಂತ ಎಂಬ ಸ್ವಾರ್ಥ. ನನ್ನ ಪ್ರತೀ ಹೆಜ್ಜೆಯಲ್ಲೂ ನೀನು ನನ್ನ ಜೊತೆಯಿರಬೇಕೆಂಬ ಸ್ವಾರ್ಥ. ನನ್ನ ಹುಚ್ಚು ಪ್ರೀತಿಗೆ ನೀನು ಮೌನಿಯಾಗಬೇಕೆಂಬ ಸ್ವಾರ್ಥ. ನನ್ನ ಅರ್ಥವಿಲ್ಲದ ಆಸೆಗಳಿಗೆ ನೀನು ಮಣಿಯಬೇಕೆಂಬ ಸ್ವಾರ್ಥ. ನನ್ನ ಪೆದ್ದು ಮಾತುಗಳಿಗೆ ನೀನು ಸಮ್ಮತಿಸಬೇಕೆಂಬ ಸ್ವಾರ್ಥ. ಒಟ್ಟಿನಲ್ಲಿ, ನೀ ನನ್ನ ಸ್ವಂತ ಎನ್ನುವಂಥ ಸ್ವಾರ್ಥ ಈ ನಿನ್ನ ಹುಡುಗಿಯದು ಅರ್ಥ ಮಾಡ್ಕೊ. ನೀನೇನಾದ್ರೂ ನೋ ಅಂದ್ರೆ ನಂಗೆ ಬೇಜಾರಾಗುತ್ತೆ…
ಇಂತಿ,
ಫಿಲೋಮಿನಾ