Advertisement

ನ.16ರಂದು ಐಟಿಇ, ಬಯೋ ಮೇಳ

11:18 AM Jul 25, 2017 | Team Udayavani |

ಬೆಂಗಳೂರು: ಬೆಂಗಳೂರು ಐಟಿಇ ಬಿಜ್‌ ಹಾಗೂ ಬೆಂಗಳೂರು ಇಂಡಿಯಾ ಬಯೋ ಮೇಳ ನವೆಂಬರ್‌ 16ರಿಂದ 18ರವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ಏಕಕಾಲಕ್ಕೆ ನಡೆಸಲಾಗುವುದು ಎಂದು ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

Advertisement

ಸೋಮವಾರ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ  ಐಟಿ ಬಿಜ್‌ ಕಾರ್ಯಕ್ರಮ ಆಯೋಜಿಸಿ 20 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಐಟಿ ಹಾಗೂ ಬಿಟಿ ಎರಡೂ ಸಮಾವೇಶಗಳನ್ನು ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಆಯೋಜಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಂದೇ ಹೆಸರಿನಲ್ಲಿ ಆಯೋಜಿಸುವ ಆಲೋಚನೆ ಇದೆ ಎಂದು ಹೇಳಿದರು.

ಈ ವರ್ಷ ಐಟಿ ಬಿಟಿ ಸಮಾವೇಶದಲ್ಲಿ “ಕಲ್ಪಿಸಿ, ನವೀಕರಿಸಿ ಮತ್ತು ಸಂಶೋಧಿಸಿ’ ಎಂಬ ಕಲ್ಪನೆಯಡಿ ಒಂದೆ ಸೂರಿನಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಲ್ಪನೆ ಮೂಲಕ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಆಗುವುದರಿಂದ ಉದ್ದಿಮೆಗಳು ಸ್ಥಾಪನೆಯಾಗುತ್ತವೆ.

ಅದರಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುವುದಷ್ಟೆ ಅಲ್ಲದೇ, ಉದ್ಯೋಗ ಸೃಷ್ಠಿಯಾಗಲಿದೆ. ಬೆಂಗಳೂರು ಐಟಿ ಬಿಟಿ ಕ್ಷೇತ್ರದಲ್ಲಿ ತನ್ನದೇ ಆದ ನಾಯಕತ್ವವನ್ನು ಮುಂದುವರೆಸಿಕೊಂಡು ಹೋಗಲು ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಆರ್‌ ಆಂಡ್‌ ಡಿ ಕಂಪನಿ ಅಷ್ಟೇ ಅಲ್ಲದೇ ಹೊಸ ಆವಿಷ್ಕಾರಗಳು ಹೊರ ಬರಲು ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ರಾಜ್ಯ ಸರ್ಕಾರದೊಂದಿಗೆ ಸುಮಾರು 3500 ಸ್ಟಾರ್ಟ್‌ ಅಪ್‌ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಈ ವರ್ಷ ನೂರು ಉತ್ತಮ ಸ್ಟಾರ್ಟ್‌ ಅಪ್‌ ಕಂಪನಿಗಳಿಗೆ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. 

Advertisement

ಜಿಲ್ಲೆಗಳಲ್ಲೂ ಸ್ಟಾರ್ಟ್‌ ಅಪ್‌: ಸ್ಟಾರ್ಟ್‌ ಅಪ್‌ ಕಂಪನಿಗಳಲ್ಲಿ ಕೇವಲ ಬೆಂಗಳೂರಿಗೆ ಸೀಮಿತವಾಗದೇ, ರಾಜ್ಯದ ಇತರ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಜಿಲ್ಲೆಗಳಿಂದಲೂ ಸ್ಟಾರ್ಟ್‌ ಅಪ್‌ ಕಂಪನಿಗಳು ನೋಂದಣಿಯಾಗಿದ್ದು ಗ್ರಾಮೀಣ ಭಾಗದಲ್ಲಿಯೂ ಐಟಿ ಕ್ಷೇತ್ರಕ್ಕೆ ಸಾಕಷ್ಟು ಉತ್ತೇಜನ ದೊರೆಯುತ್ತಿದೆ ಎಂದರು.

ಸ್ಟಾರ್ಟ್‌ ಅಪ್‌ ಕಂಪನಿಗಳಲ್ಲಿ ಮಹಿಳಾ ಉದ್ಯಮಿಗಳು ನೋಂದಣಿ ಮಾಡಿದ್ದು, ಅವರಿಗೆ ಪತ್ಯೇಕವಾಗಿ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಹೇಳಿದರು. ಐಟಿ ಹಾಗೂ ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ನಾಯಕನ ಸ್ಥಾನದಲ್ಲಿದ್ದು, ಅದೇ ಸ್ಥಾನವನ್ನು ಮುಂದುವರೆಸಿಕೊಂಡು ಹೋಗಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ರಾಜ್ಯ ಸರ್ಕಾರ ಐಟಿ ಬಿಟಿ ಹಾಗೂ ವಿಜ್ಞಾನ ಕ್ಷೇತ್ರಕ್ಕೆ  ಬಜೆಟ್‌ನಲ್ಲಿ ಹಣದ ಕಡಿತ ಮಾಡಿಲ್ಲ ಎಂದು ಹೇಳಿದರು. 

300 ಪ್ರದರ್ಶಕರು ಭಾಗಿ: ನವೆಂಬರ್‌ನಲ್ಲಿ ನಡೆಯುವ ಐಟಿ ಬಿಟಿ ಮೇಳದಲ್ಲಿ 300 ಕ್ಕೂ ಹೆಚ್ಚು ಪ್ರದರ್ಶಕರನ್ನು ಸೆಳೆಯಲಿದ್ದು, ಅವರು ತಮ್ಮ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳನ್ನು 10 ಸಾವಿರ ಗ್ರಾಹಕರಿಗೆ ಪ್ರದರ್ಶಿಸಲಿದ್ದಾರೆ. ವಿವಿಧ ವಿಷಯಗಳಾದ ಕೌಡ್‌ ಆಂಡ್‌ ಬಿಗ್‌ ಟಾಟಾ, ಏರೋಸ್ಪೇಸ್‌ ಆಂಡ್‌ ಡಿಫೆನ್ಸ್‌, ಟೆಲಿಕಾಮ್‌, ಎಲೆಕ್ಟ್ರಾನಿಕ್ಸ್‌, ಸೈಬರ್‌ ಸೆಕ್ಯುರಿಟಿ,  ಎನಿಮೇಶನ್‌, ಎ.ಆರ್‌. ಆಂಡ್‌ ವಿಆರ್‌, ಇಎಸ್‌ಡಿಎಂ, ಜಿಐಎಸ್‌, ರೋಬೊಟಿಕ್ಸ್‌ ಆಂಡ್‌ ಎಐ, ಗೌಪ್ಯತೆ ಮತ್ತು ಹಕ್ಕು ಸ್ವಾಮ್ಯತೆಗಳ ಬಗ್ಗೆ ಸಮ್ಮೇಳನದಲ್ಲಿ ಪ್ರದರ್ಶನ ಮತ್ತು ಚರ್ಚೆ ನಡೆಯಲಿದೆ ಎಂದರು.

ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜೂಮ್‌ದಾರ್‌ ಷಾ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣದ ಕಡಿತ ಮಾಡುತ್ತಿದೆ. ಅದರ ವಿರುದ್ಧ  ಆಗಸ್ಟ್‌ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next