ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಹಲವಾರು ಮಕ್ಕಳಿಗೆ ಕಜ್ಜಿ,ತುರಿಕೆ ಕಾಣಿಸಿಕೊಂಡಿದ್ದು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ ಹಾಡಿಯ ಮಕ್ಕಳು ದೊಡ್ಡವರೆನ್ನದೆ ಎಲ್ಲರಿಗೂ ಅಂಟಿಕೊಂಡಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಹಾಡಿಯಲ್ಲಿ ಸುಮಾರು 80 ಕುಟುಂಬವಿದ್ದು, 500ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಬಹುತೇಕರು, ಕೊಡಗಿಗೆ ಇಲ್ಲವೇ ಸುತ್ತಮುತ್ತಲ ಗ್ರಾಮಗಳಲ್ಲಿ ಕೂಲಿಗೆ ತೆರಳುತ್ತಾರೆ, ಬೆಳಗ್ಗೆ ತೆರಳಿದರೆ ವಾಪಾಸ್ ಆಗುವುದು ರಾತ್ರಿಯೇ ಇದರಿಂದಾಗಿ ವೈದ್ಯರ ಬಳಿಗೂ ಹೋಗಲಾರದ ಸ್ಥಿತಿ ಇಲ್ಲಿದೆ.
ಈ ಕಾಯಿಲೆಯು ಮಕ್ಕಳಲ್ಲೇ ಹೆಚ್ಚಾಗಿ ಕೈ, ಕಾಲು, ಹಣೆಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಕಡಿತದಿಂದಾಗಿ ದಿನದಿಂದ ದಿನಕ್ಕೆ ರೋಗಬಾಧೆ ಹೆಚ್ಚುತ್ತಲೇ ಇದೆ. ಹಾಡಿಯ 10 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಮಹಿಳೆಯರಿಗೂ ಕಾಯಿಲೆ ಕಾಣಿಸಿಕೊಂಡಿದೆ. ಇಲ್ಲಿ ಅಂಗವಾಡಿ ಕೇಂದ್ರವೂ ಇದೆ, ಆಶಾ ಕಾರ್ಯಕರ್ತರೂ ಇದ್ದಾರೆ.
ಆದರೆ ಇಡೀ ಹಾಡಿಯಲ್ಲಿ ಅಶುಚಿತ್ವ ತಾಂಡವಡುತ್ತಿರುವುದರಿಂದಲೇ ಇಂಥ ರೋಗ ಬರಲು ಕಾರಣವಾಗಿದೆ. ಈ ಹಾಡಿ ಸೇರಿದಂತೆ ಅರಣ್ಯದಂಚಿನಲ್ಲಿರುವ ಆದಿವಾಸಿಗಳಿಗೆ ಕಜ್ಜಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಮರ್ಪಕ ಆರೋಗ್ಯ ಸೇವೆ ಸಿಗದಿದ್ದರೆ ಬೇರೆ ಪ್ರದೇಶಕ್ಕೂ ಹರಡುವ ಸಾಧ್ಯತೆಗಳಿವೆ.
ಕಾಡಿನ ಪಕ್ಕದಲ್ಲಿರುವ ಗಿರಿಜನರಲ್ಲಿ ಈ ಕಾಯಿಲೆ ಹೆಚ್ಚು. ಇದು ಹರಡುವ ರೋಗವಲ್ಲದಿದ್ದರೂ ಗಾಯಾಳು ಬಳಸುವ ಬಟ್ಟೆ, ಹೊದಿಕೆಗಳನ್ನು ಇತರರು ಬಳಸುವುದರಿಂದಲೂ ಬರುತ್ತದೆ. ಶುಚಿತ್ವ ಹಾಗೂ ನಿತ್ಯ ಬಿಸಿ ನೀರು ಬಳಸುವ ಹಾಗೂ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಣಕ್ಕೆ ಬರಲಿದೆ. ಆರೋಗ್ಯ ಸಹಾಯಕರೊಂದಿಗೆ ಹಾಡಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ. ಸಂದೀಪ್. ನೇರಳಕುಪ್ಪೆ ಆರೋಗ್ಯ ಕೇಂದ್ರದ ವೈದ್ಯರು
ಶಾಲೆಯ ಮಕ್ಕಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ, ಮನೆಯಲ್ಲೇ ಉಳಿಯುವ ಮಕ್ಕಳಲ್ಲಿ ಶುಚಿತ್ವ ಕೊರತೆಯಿಂದಾಗಿ ಕಜ್ಜಿಯಂತಹ ಕಾಯಿಲೆ ಕಾಣಿಸಿಕೊಳ್ಳುತ್ತವೆ. ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳನ್ನು ಇಂದೇ ಕಳುಹಿಸುತ್ತೇನೆ.
-ಡಾ.ಕೀರ್ತಿಕುಮಾರ್. ಟಿಎಚ್‌ಒ ಹುಣಸೂರು