Advertisement
ಯಥಾಪ್ರಕಾರ ಶಾಲೆ ಶುರುವಾದರೂ ಮತ್ತೆ ರಜೆಯದ್ದೇ ನೆನಪು.ಆಡಿ, ಕುಣಿದ, ತಿರುಗಾಡಿದ ಫ್ಲ್ಯಾಶ್‌ಬ್ಯಾಕ್! ಮಲೆನಾಡಿನ ಹಳ್ಳಿಯಲ್ಲಿ ನಲವತ್ತು-ಐವತ್ತು ಮನೆ. ಎಲ್ಲರಿಗೂ ಎಲ್ಲರೂ ಪರಿಚಿತರು. ಯಾರ ಮನೆಯಲ್ಲಿ ಏನೇ ಕೆಲಸವಾದರೂ ಎಲ್ಲರೂ ಸೇರಿ ಮಾಡುವ ಕ್ರಮ. ಹೀಗಾಗಿ ನಮ್ಮ ಮನೆ, ಅವರ ಮನೆ ಎಂಬ ಬೇಧವಿರಲಿಲ್ಲ. ಅಂಥಾದ್ದೇ ಒಂದು ರಜೆಯಲ್ಲಿ ಅಜ್ಜನ ಮನೆಯಲ್ಲೊಂದು ಶ್ರಾದ್ಧ.ಅಜ್ಜನ ಅಪ್ಪ ಅಂದರೆ ಮುತ್ತಜ್ಜನ ಮೊದಲ ಶ್ರಾದ್ಧ. ಮನೆ ತುಂಬ ಜನ ಸೇರಿದ್ದರು. ನಮಗೆ ನಾಮಕರಣ, ಮದುವೆ, ಮುಂಜಿ, ಶ್ರಾದ್ಧ, ವೈಕುಂಠ ಸಮಾರಾಧನೆ- ಹೀಗೆ ಏನೇ ಸಮಾರಂಭವಾದರೂ ಖುಷಿಯೇ! ಕುಣಿಯಲು ಇತರ ಮಕ್ಕಳು, ತಿನ್ನಲು ಒಳ್ಳೆ ಊಟ ಸಿಗುವುದಲ್ಲ ಎನ್ನುವುದರತ್ತ ಮಾತ್ರ ಗಮನ. ದೊಡ್ಡವರೆಲ್ಲ ಸೇರಿದಾಗ “ಮುಂದಿನ ವರ್ಷ ಮೂಲೆ ಮನೆ ಶಾರದೆ ಮದುವೆ ಆಗಬಹುದು, ಅಣ್ಣಯ್ಯನ ಮಗನ ಮುಂಜಿ ಮಾಡಬಹುದು’ ಎಂದು ಲೆಕ್ಕ ಹಾಕುತ್ತಿದ್ದರೆ ತರಲೆ ಮಕ್ಕಳು ಯಾವ ಮುದುಕರಿಗೆ ಎಷ್ಟು ವಯಸ್ಸಾಯಿತು, ಮುಂದಿನ ವರ್ಷ ಇರುತ್ತಾರೋ ಇಲ್ಲವೋ ಎಂದು ತಲೆ ಓಡಿಸುತ್ತಿದ್ದರು. ಆದರೆ, ಶ್ರಾದ್ಧದ ದಿನಗಳಲ್ಲಿ ಒಂದು ಬೇಸರವೆಂದರೆ ಏನೇನೋ ವಿಧಿ-ವಿಧಾನ ಮಾಡಿದ ನಂತರ ಬಾಳೆ ಎಲೆಯಲ್ಲಿ ಮಾಡಿದ್ದನ್ನೆಲ್ಲ ಬಡಿಸಿ ಹೊರಗೆ ಇಟ್ಟು ಬರುತ್ತಿದ್ದರು. ಕಾಗೆ ಹಾರಿ ಬಂದು ಅದರಲ್ಲಿ ತಿಂದ ನಂತರವೇ ಎಲ್ಲರಿಗೂ ಊಟ. ಪಿತೃವೇ ಬಂದು ಸ್ವೀಕರಿಸಿದಂತೆ ಎಂಬ ನಂಬಿಕೆ. ಆದರೆ ನಮಗೆ ಇದು ದೊಡ್ಡ ಸಮಸ್ಯೆ. ಕುಣಿದು ಕುಣಿದು ಸುಸ್ತು, ಜತೆಗೆ ಹಸಿವು. ಬಾಳೆಯಲ್ಲಿ ಬಡಿಸಿಟ್ಟ ಊಟವಲ್ಲ, ಬಾಳೆಎಲೆಯನ್ನೇ ತಿನ್ನುವಷ್ಟು ಹಸಿವು. ಮಧ್ಯೆ ಮಧ್ಯೆ ಅವಲಕ್ಕಿ, ಅರಳು ಕಾಳು ತಿಂದರೂ ಸಾಲುತ್ತಿರಲಿಲ್ಲ. ದಣಿದ ದೇಹಕ್ಕೆ ಬಿಸಿಲಿಗೆ ಜೊಂಪು ಬೇರೆ. ಅದಕ್ಕಾಗಿ ಶ್ರಾದ್ಧ ಎಂದು ಗೊತ್ತಾದ ದಿನ ಬೆಳಗಿನಿಂದಲೇ ಕಾಗೆ ಎಲ್ಲಿದೆ ಎಂದು ಹುಡುಕಾಟ ನಡೆಯುತ್ತಿತ್ತು. ಕೆಲವು ಬಾರಿ ಕಾಗೆ ಬೇಗ ಬಂದರೆ ಮತ್ತೆ ಕೆಲವು ಬಾರಿ ಸಾಕಷ್ಟು ತಡವಾಗುತ್ತಿತ್ತು. ಕಾಗೆ ಬಾರದಿದ್ದದ್ದಕ್ಕೆ “ಮೃತರ ಏನೋ ಆಸೆ ಪೂರ್ಣವಾಗಿಲ್ಲ, ಅದಕ್ಕೇ ಅದು ಅತೃಪ್ತಿಯಿಂದ ಬರುತ್ತಿಲ್ಲ’ ಎನ್ನುತ್ತಿದ್ದರು ದೊಡ್ಡವರು. ಸುಮಾರು ಸಲ ಭರ್ಜರಿ ಊಟದ ಹೊತ್ತಿನಲ್ಲಿ ಈ ಕಾಗೆ ಕೊಡುವ ಕಾಟದಿಂದ ಬೇಸತ್ತು ಮಕ್ಕಳಾದ ನಮಗೆ ದನಕರು ಸಾಕಿದ ಹಾಗೆ ಒಂದೆರಡು ಕಾಗೆ ಪಂಜರದಲ್ಲಿಟ್ಟು ಸಾಕಿದರೆ ಹೇಗೆ? ಆಗ ಶ್ರಾದ್ಧದ ದಿನ ನಾವು ಹೇಳಿದ ಟೈಮಿಗೆ ತಿನ್ನುತ್ತೆ, ಎಲ್ಲರ ಮನೆಗೂ ಉಪಯೋಗ ಎಂಬ ಘನವಾದ ಆಲೋಚನೆ ಹೊಳೆದಿತ್ತು. ಅದನ್ನು ಕಾರ್ಯರೂಪಕ್ಕೆ ತರಲಾಗಲಿಲ್ಲ. ಏಕೆಂದರೆ, ಈ ಮಾತು ಕೇಳಿದ್ದೇ ಅಜ್ಜಿ ಹೌಹಾರಿ ಮಂಗನಿಂದ ಮಾನವ ಎನ್ನುವ ಮಾತಿಗೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಡಾರ್ವಿನ್‌ನನ್ನು ಕೊಂಡಾಡಿದಳು. ಹಾಗೇ ನಮ್ಮನೆ ಮಂಗಗಳು ಮನುಷ್ಯರಾದರೆ ಸಾಕು ಎಂದು ದೇವರಿಗೆ ಹರಕೆ ಹೊತ್ತಳು. ಹೀಗಾಗಿ, ಶ್ರಾದ್ಧ ಇದ್ದಾಗ ಕಾಗೆಗಾಗಿ ಕಾಯುವುದು ಅನಿವಾರ್ಯವಾಗಿತ್ತು.
“”ಹಳ್ಳಿ ಮನೆಗಳಲ್ಲಿ ಸಾಮಾನ್ಯವಾಗಿ ಮನೆಯ ಯಜಮಾನ ಮೊದಲು ಊಟ ಮಾಡಿ ನಂತರ ಮಕ್ಕಳು, ಹೆಂಗಸರು ಊಟ ಮಾಡುವ ಪದ್ಧತಿ. ಆದರೆ, ಮಕ್ಕಳು ಎಂದರೆ ಬಹಳ ಪ್ರೀತಿಯಾಗಿದ್ದ ನನ್ನಪ್ಪನಿಗೆ ಇದು ಇಷ್ಟವಿರಲಿಲ್ಲ. ಮಕ್ಕಳು ಹಸಿದಿರುವಾಗ ದೊಡ್ಡವರು ಊಟ ಮಾಡುವುದು ತಪ್ಪು$ಎನ್ನುತ್ತಿದ್ದರು. ಹಾಗಾಗಿಯೇ ಮನೆಯಲ್ಲಿ ಐದೂ ಮಕ್ಕಳಿಗೆ ಮೊದಲು ತಿಂಡಿ-ಊಟ ಹಾಕಬೇಕಿತ್ತು. ನಂತರ ಅಪ್ಪ ಮತ್ತು ತನಗೆ ಬಡಿಸಿಕೊಂಡು ಅಮ್ಮನೂ ಒಟ್ಟಿಗೇ ಕೂರುತ್ತಿದ್ದಳು.ಎಷ್ಟೋ ಬಾರಿ ಮಕ್ಕಳಾದ ನಮಗೆ ಪಾತ್ರೆಯಲ್ಲಿ ಎಷ್ಟಿದೆ, ಅಪ್ಪ-ಅಮ್ಮರಿಗೆ ಬೇಕು ಎನ್ನುವ ಪರಿವೆಯೂ ಇರುತ್ತಿರಲಿಲ್ಲ. ಹಾಗಾಗಿ, ಅವರು ಅರೆಹೊಟ್ಟೆ ಉಂಡಿದ್ದೂ ಇದೆ. ಕಡೆಯತನಕ ಅಪ್ಪಈ ನಿಯಮ ಪಾಲಿಸಿಕೊಂಡು ಬಂದವರು. ಹಾಗಾಗಿಯೇ ಇವತ್ತು ಮಕ್ಕಳು ಹಸಿದು ಕಾಯುತ್ತಿರುವುದನ್ನು ಅವರ ಆತ್ಮಕ್ಕೆ ಸಹಿಸಲಾಗಲಿಲ್ಲ ಅನ್ನಿಸಿತು. “ಯಾರೇನೇ ಹೇಳಲಿ ಕಾದಿದ್ದು ಸಾಕು; ಮಕ್ಕಳಿಗೆ ಊಟ ಹಾಕೋಣ’ ಎಂದೆ. ಆತ್ಮ, ಕಾಗೆ ಅದೆಲ್ಲಾ ಅವರವರ ನಂಬಿಕೆ. ಆದರೆ ಕಾಕತಾಳೀಯವೋ ಏನೋ ಮಕ್ಕಳು ಊಟ ಮಾಡುತ್ತಿದ್ದಂತೆ ಅಲ್ಲಿ ಕಾಗೆ ಬಂತು. ಇನ್ನು ಅಪ್ಪನ ಶ್ರಾದ್ಧದಲ್ಲಿ ಮಕ್ಕಳಿಗೆ ಮೊದಲು ಊಟ ಹಾಕಿಬಿಡೋಣ ಎಂದು ನಿರ್ಧರಿಸಿದ್ದೇನೆ”
Related Articles
Advertisement
ಕೆ. ಎಸ್. ಚೈತ್ರಾ