Advertisement

ಬಿಡುವು ಅನ್ನುವಷ್ಟರಲ್ಲಿ ಮತ್ತೆ ಮಳೆ ಅಬ್ಬರ

09:12 PM Aug 10, 2019 | Lakshmi GovindaRaj |

ಮೈಸೂರು: ಕಳೆದ ಐದು ದಿನಗಳಿಂದ ಹಗಲು-ರಾತ್ರಿ ಧಾರಾಕಾರವಾಗಿ ಸುರಿದ ಮಳೆ, ಶನಿವಾರ ಕೊಂಚ ಬಿಡುವು ನೀಡಿದ್ದರಿಂದ ಸೂರ್ಯನ ದರ್ಶನವಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳುವ ವೇಳೆಗೆ ಮತ್ತೆ ಮಳೆ ಶುರುವಾಗಿದೆ. ಕಳೆದ ಐದು ದಿನಗಳಿಂದಲೂ ಮೈಸೂರು ಜಿಲ್ಲೆ ಅಕ್ಷರಶಃ ಮಳೆನಾಡಾಗಿ ಪರಿವರ್ತನೆಯಾಗಿದ್ದರಿಂದ ಸೂರ್ಯನ ದರ್ಶನವೇ ಇಲ್ಲದೆ ಕತ್ತಲು ಆವರಿಸಿತ್ತು.

Advertisement

ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲೂ ಬೆಳಗ್ಗೆ ಮಳೆ ನಿಂತು, ಸೂರ್ಯನ ಬೆಳಕು ಬಿದ್ದಿದ್ದರಿಂದ 5 ದಿನಗಳ ಭಾರೀ ಮಳೆಯಿಂದ ತತ್ತರಿಸಿಹೋಗಿದ್ದ ಜನತೆ ನಿಟ್ಟುಸಿರು ಬಿಟ್ಟು ತಂತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ವೇಳೆಗೆ ಮಳೆ ಮತ್ತೆ ತನ್ನ ಅಬ್ಬರ ತೋರಿಸಿದೆ. ಮೈಸೂರು ನಗರ, ನಂಜನಗೂಡು ಮತ್ತು ತಿ.ನರಸೀಪುರ ತಾಲೂಕುಗಳಲ್ಲಿ ಶನಿವಾರ ಮಳೆಯಾಗಿಲ್ಲ. ಎಚ್‌.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್‌.ನಗರ ತಾಲೂಕುಗಳಲ್ಲಿ ಬೆಳಗ್ಗೆ ಕೆಲ ಕಾಲ ಬಿಡುವು ನೀಡಿದ್ದು ಬಿಟ್ಟರೆ, ಮಳೆ ಸುರಿಯುತ್ತಲೇ ಇದೆ.

ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಳಿಯ ಸೇತುವೆ ಮೇಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಶುಕ್ರವಾರ ಸಂಜೆಯಿಂದಲೇ ಸಂಚಾರ ಬಂದ್‌ ಮಾಡಿ, ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಕಳೆದ ವರ್ಷ ಇದೇ ದಿನಗಳಲ್ಲಿ ವಾರಗಳ ಕಾಲ ಈ ಸೇತುವೆಯನ್ನು ಬಂದ್‌ ಮಾಡಲಾಗಿತ್ತು. ಈ ವರ್ಷ ಕಳೆದ ಬಾರಿಗಿಂತಲೂ ಹೆಚ್ಚು ನೀರು ಬಂದಿದೆ. ಪರಿಣಾಮ ಕೊಪ್ಪದಿಂದ ಬೈಲುಕಪ್ಪೆಯ ಗೋಲ್ಡನ್‌ ಟೆಂಪಲ್‌ಗೆ ಹೋಗುವ ಮಾರ್ಗ ಸಂಪೂರ್ಣ ಜಲಾವೃತವಾಗಿದೆ. ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಇದರಿಂದಾಗಿ ನೂರಾರು ಎಕರೆ ಬೆಳೆ ಹಾನಿ ಉಂಟಾಗಿದೆ.

ಎಚ್‌.ಡಿ.ಕೋಟೆ: ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಬೆಳಗ್ಗೆ ಕೊಂಚ ಬಿಡುವು ನೀಡಿತ್ತಾದರೂ ತಾಲೂಕಿನಲ್ಲಿ ಸಾಧಾರಣ ಮಳೆ ಸುರಿಯುತ್ತಿದೆ. ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಹೆಚ್ಚಿನ ಒಳಹರಿವು ಬರುತ್ತಿರುವುದರಿಂದ ಕಬಿನಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್‌ ನೀರು ಬಿಡಲಾಗಿದ್ದು, ನದಿ ಪಾತ್ರದ ನೂರಾರು ಎಕರೆ ಜಮೀನು ಜಲಾವೃತವಾಗಿದೆ.

ತಾರಕ ಜಲಾಶಯದ ಹೊರ ಹರಿವು ನಿಲ್ಲಿಸಿರುವುದರಿಂದ ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಜೊತೆಗೆ ಕೇರಳದ ಮಾನಂದವಾಡಿಗೆ ಸಂಚಾರ ಪುನಾರಂಭವಾಗಿದೆ. ಹ್ಯಾಂಡ್‌ಪೋಸ್ಟ್‌ಬಳಿ ಕುಸಿದಿದ್ದ ರಸ್ತೆಗೆ ಮರಳು ಮೂಟೆ ಹಾಕಿ ತಾತ್ಕಾಲಿಕವಾಗಿ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿರುವುದರಿಂದ ಹೆಬ್ಬಳ್ಳ ಕೋಡಿ ಬಿದ್ದಿದೆ.

Advertisement

ಕೆ.ಆರ್‌.ನಗರ: ಕೆ.ಆರ್‌.ನಗರ ತಾಲೂಕಿನಲ್ಲಿ ಬೆಳಗ್ಗೆ ಮಳೆ ಬಿಡುವು ನೀಡಿದ್ದರಿಂದ ಬಿಸಿಲು ಬಂದಿತ್ತು. 10 ಗಂಟೆ ನಂತರ ಮತ್ತೆ ತುಂತುರು ಮಳೆ ಆರಂಭವಾಗಿದೆ. ಪಟ್ಟಣ ಅರ್ಕೇಶ್ವರ ದೇವಸ್ಥಾನ ಬಳಿ ಕಾವೇರಿ ನದಿ ಪಾತ್ರದಲ್ಲಿದ್ದ ಮಂಟಪ ಶೇ.60ರಷ್ಟು ಮುಳುಗಿದೆ. ಶ್ರೀಕ್ಷೇತ್ರ ಕಪ್ಪಡಿ ಭಾಗದಲ್ಲಿ ಕಾವೇರಿ ನದಿಯ ಹರಿವು ಹೆಚ್ಚಳದಿಂದ ಜಮೀನುಗಳು ಮುಳುಗಡೆಯಾಗಿದೆ. ತಾಲೂಕಿನ ಚುಂಚನಕಟ್ಟೆ ಬಳಿ ಕಾವೇರಿ ಧುಮಿಕ್ಕಿ-ಭೋರ್ಗರೆದು ಹರಿಯುತ್ತಿರುವುದರಿಂದ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪಟ್ಟಣದ ವ್ಯಾಪ್ತಿಯಲ್ಲಿ ಕಾವೇರಿ ನದಿ ಪಾತ್ರ ವಿಸ್ತೀರ್ಣವಾಗಿರುವುದರಿಂದ ಸದ್ಯಕ್ಕೆ ಜಮೀನುಗಳಿಗೆ ನೀರು ನುಗ್ಗಿಲ್ಲ.

ಹುಣಸೂರು: ಹುಣಸೂರು ತಾಲೂಕಿನ ಹನಗೋಡು ಭಾಗದಲ್ಲಿ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದರೆ, ಹುಣಸೂರು ಪಟ್ಟಣದ ದಾವಣಿಬೀದಿ, ಬ್ರಾಹ್ಮಣರ ಬೀದಿ, ಕಾಫಿವರ್ಕ್ಸ್ ಸುತ್ತಮುತ್ತ, ರಹಮತ್‌ ಮೊಹಲ್ಲಾ, ಕಲ್ಕುಣಿಕೆಯ ಕೆಲ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಬೆಳಗ್ಗಿನಿಂದ ಬಿಡುವು ನೀಡಿದ್ದ ಮಳೆ ಸಂಜೆ 5ಗಂಟೆ ನಂತರ ಮತ್ತೆ ಶುರುವಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿರುವುದರಿಂದ ಹುಣಸೂರು ಪಟ್ಟಣದ ಬೈಪಾಸ್‌ ರಸ್ತೆ ಬಳಿಯ ನೂತನ ವಸತಿ ಬಡಾವಣೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ನೂತನ ಬಡಾವಣೆಯಲ್ಲಿರುವ ಖಾಸಗಿ ಶಾಲೆಗಳು ಸೇರಿದಂತೆ 50ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿರುವ ಕಾರಣ ಇಲ್ಲಿನ ಜನರನ್ನು ರಾತ್ರೋರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪಟ್ಟಣದಲ್ಲಿನ ಬ್ರಿಟಿಷರ ಕಾಲದ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬೈಪಾಸ್‌ ರಸ್ತೆಯ ಮೂಲಕ ಮಡಿಕೇರಿ-ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸ ಸೇತುವೆ ಮೇಲೆ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದ್ದರಿಂದ ಹೊಸ ಸೇತುವೆಯ ಮೇಲೆ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ, ಲಘು ವಾಹನಗಳಿಗಷ್ಟೇ ಅನುವು ಮಾಡಿಕೊಡಲಾಗುತ್ತಿದೆ. ಮೈಸೂರು-ಪಿರಿಯಾಪಟ್ಟಣ ನಡುವೆ ಸಂಚರಿಸುವ ಬಸ್‌ಗಳ ಮಾರ್ಗವನ್ನು ಕಟ್ಟೆಮಳಲವಾಡಿ, ಗಾವಡಗೆರೆ, ಬಿಳಿಕೆರೆ ಮಾರ್ಗ ಬದಲಾವಣೆ ಮಾಡಲಾಗಿದೆ.

ನಂಜನಗೂಡು: ಕಪಿಲೆ ಪ್ರವಾಹದಿಂದ ಶ್ರೀಕಂಠೇಶ್ವರನ ಸನ್ನಧಿ ಜಲಾವೃತ್ತವಾಗಿದ್ದು, ದಾಸೋಹ ಭವನಕ್ಕೆ ನೀರು ನುಗ್ಗಿದ್ದರಿಂದ ದಾಸೋಹ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆಯಿಂದ ತಾಲೂಕಿನಲ್ಲಿ 75ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ನೂರಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡಿವೆ. ನೂರಾರು ಮನೆಗಳು ಮಳೆಯಿಂದಾಗಿ ಶಿಥಿಲವಾಗಿದ್ದು, ಯಾವಾಗ ಬೇಕಾದರೂ ಕುಸಿದು ಬೀಳುವ ಹಂತದಲ್ಲಿವೆ. ಇದರಿಂದ ಜನರು ಭಯಭೀತರಾಗಿದ್ದಾರೆ. ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಪರಿಹಾರ ಕೇಂದ್ರಗಳನ್ನು ಹೆಚ್ಚಿಸಲಾಗಿದೆ.

ತಿ.ನರಸೀಪುರ: ತಿ.ನರಸೀಪುರ ತಾಲೂಕಿನಲ್ಲಿ ಹೆಚ್ಚೇನು ಮಳೆ ಬೀಳದ್ದರಿಂದ ಸದ್ಯಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಶನಿವಾರ ಮಧ್ಯಾಹ್ನದ ವರೆಗೆ ಬಿಸಿಲಿತ್ತಾದರೂ ನಂತರ ಮೋಡ ಕವಿದ ವಾತಾವರಣವಿದೆ. ಮಧ್ಯಾಹ್ನ ಕೆ.ಆರ್‌.ಎಸ್‌. ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ತಿ.ನರಸೀಪುರ ಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ಸಂಗಮದಲ್ಲಿ ಕಪಿಲಾ ಮತ್ತು ಕಾವೇರಿ ಸೇರಿ ಉಕ್ಕಿ ಹರಿಯಲಿವೆ. ಕೆಆರ್‌ಎಸ್‌ನಿಂದ ನೀರು ಬಿಡುಗಡೆಮಾಡಿರುವುದರಿಂದ ತಾಲೂಕಿನ ಹುಣಸೂರು, ಹೆಮ್ಮಿಗೆ, ಬಿಳಿಗೆರೆ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next