ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತೂಮ್ಮೆ ಕುಟುಕಿದೆ. ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿದ್ದು, 414 ಕೋಟಿ ರೂ. ದಂಡ ವಿಧಿಸಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. ಅಲ್ಲದೆ ವಿಚಾರಣೆಯ ವೇಳೆ ದಿಲ್ಲಿ ಕೋರ್ಟ್‌ಗೆ ಈ ಸಂಬಂಧ ಐಟಿ ನೋಟಿಸ್‌ನ ಪ್ರತಿ ಸಹಿತ 105 ಪುಟ ಗಳ ವಿವರಣೆಯನ್ನು ನೀಡಿದ್ದಾರೆ.
ವಿಚಾರಣೆಯನ್ನು ಮಾರ್ಚ್ 27ಕ್ಕೆ ಕೋರ್ಟ್ ಮುಂದೂಡಿದ್ದು, ಅಲ್ಲಿಯ ವರೆಗೆ ಸ್ವಾಮಿ ಸಲ್ಲಿಸಿದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿರಿಸುವಂತೆ ಸೂಚಿಸಿದೆ.
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನೆಹರೂ ಕುಟುಂಬ, ಯಂಗ್ ಇಂಡಿಯಾ ಕಂಪೆನಿ ಹಾಗೂ ಇತರ ನಾಲ್ವರ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆ ಕೈಗೊಂಡಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃಸಂಸ್ಥೆ ಅಸೋಸಿ ಯೇಟ್ ಜರ್ನಲ್ಸ್‌ಗೆ ಕಾಂಗ್ರೆಸ್ ಪಕ್ಷವು 90 ಕೋಟಿ ರೂ. ಅನ್ನು ಬಡ್ಡಿ ರಹಿತ ಸಾಲದ ರೂಪದಲ್ಲಿ ನೀಡಿದೆ. ಈ ಸಾಲವನ್ನು ಯಂಗ್ ಇಂಡಿಯಾಗೆ ವರ್ಗಾಯಿಸುವಾಗ ಕೇವಲ 50 ಲಕ್ಷ ರೂ. ಪಾವತಿ ಮಾಡಲಾಗಿದ್ದು, ಈ ವಹಿವಾಟು ಸಂಪೂರ್ಣ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ವಾಸ್ತವವಾಗಿ ಈ ವಹಿವಾಟು ನಡೆದೇ ಇಲ್ಲ. ನ್ಯಾಷನಲ್ ಹೆರಾಲ್ಡ್ ಹೊಂದಿರುವ 2000 ಕೋಟಿ ರೂ. ಆಸ್ತಿಯನ್ನು ವಶ ಪಡಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯ ವಹಿವಾಟು ನಡೆಸಲಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.
ಸ್ವಾಮಿಗೆ ನೋಟಿಸ್ ಸಿಕ್ಕಿದ್ದು ಹೇಗೆ?
ಸ್ವಾಮಿ ಐಟಿ ನೋಟಿಸ್ ಅನ್ನು ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆಯೇ ಪ್ರತಿ ವಾದಿ ವಕೀಲರು ದಾಖಲೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ ಈ ನೋಟಿಸ್ ಸ್ವಾಮಿ ಕೈಗೆ ಹೇಗೆ ಸಿಕ್ಕಿತು ಎಂದೂ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, ಡಿಸೆಂಬರ್ 27ರಂದು ನನ್ನ ಮನೆ ಬಾಗಿಲಿನಲ್ಲಿ ದಿನಪತ್ರಿಕೆಗಳ ಜತೆ ಈ ನೋಟಿಸ್ ಬಂದು ಬಿದ್ದಿತ್ತು ಎಂದರು. ಅಲ್ಲದೆ ನಾನು ಸಲ್ಲಿಸಿದ ಕೆಲವು ದಾಖಲೆಗಳು ಈ ಹಿಂದೆ ಸೋನಿಯಾ ಗಾಂಧಿಯೇ ಬೇರೆ ಪ್ರಕರಣಗಳಲ್ಲಿ ಕೋರ್ಟ್‌ಗೆ ಸಲ್ಲಿಸಿದವುಗಳಾಗಿವೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳು: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡರಾದ ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ.