Advertisement

Assembly Election ಸೋಲಿನಿಂದ ಮೋದಿ ಅವರಿಗೆ ಅಸಮಧಾನವಿರುವುದು ನಿಜ : ಯತ್ನಾಳ್

06:04 PM Aug 28, 2023 | Team Udayavani |

ವಿಜಯಪುರ : ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿ ಅವರಿಗೆ ಅಸಮಧಾನ ಇರುವುದು ನಿಜ. ಅದರಲ್ಲಿ ನಮ್ಮ ತಪ್ಪೂ ಇದೆ. ನಮ್ಮ ತಪ್ಪಿನ ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ವಿಜಯಪುರ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ, ವಿಪಕ್ಷದ ನಾಯಕನ್ನು ನೇಮಿಸಲಿ ಬಿಡಲಿ, ಬಿಜೆಪಿ ಮಾತ್ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನ ಗೆಲ್ಲುವುದು ಖಚಿತ. ಜ್ಯದಲ್ಲಿ ಬಿಜೆಪಿ ಪಕ್ಷ ಅತ್ಯಂತ ಬಲಿಷ್ಠವಾಗಿದೆ. 66 ಜನ ಶಾಸಕರಿದ್ದರೂ ಯಾರೊಬ್ಬರೂ ಹತಾಶರಾಗಿಲ್ಲ. ವಿಪಕ್ಷದ ನಾಯಕನಿಲ್ಲದಿದ್ದರೂ ಯಾವುದೇ ಅಸಮಾಧಾನ ಅತೃಪ್ತಿ ಇಲ್ಲದೇ ಬಿಜೆಪಿ ಶಾಸಕರೆಲ್ಲ ಸನದಲ್ಲಿ ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದ್ದೇವೆ ಎಂದರು.

ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರದಲ್ಲಿ ಇಳಿಯುವಂತೆ ಮಾಡಿದ ಇಸ್ರೋ ವಿಜ್ಞಾನಿಗಳ ಭೇಟಿಗಾಗಿ ಆಗಮಿಸಿದ್ದ ಪ್ರಧಾನಿ ಮೋದಿ ಅವರ ಭೇಟಿ ಸರ್ಕಾರಿ ಕಾರ್ಯಕ್ರಮ ಆಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಸರ್ಕಾರದ, ಪಕ್ಷದ ಯಾರಿಗೂ ಪ್ರಧಾನಿ ಕಚೇರಿಯಿಂದ ಆಹ್ವಾನ ಇರಲಿಲ್ಲ. ಆದರೆ ಬಿಜೆಪಿ ನಾಯಕರು ಪಕ್ಷದ ಕಾರ್ಯಕರ್ತರಾಗಿ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದರು.

ಈ ವಿಷಯದಲ್ಲಿ ಪ್ರಧಾನಿ ಯಾರನ್ನೂ ಆಹ್ವಾನಿಸದಿರುವುದು ಪಕ್ಷದ ನಾಯಕರಿಗೆ ಅಸಮಧಾನ ತರಿಸಿದೆ ಎಂಬುದೆಲ್ಲ ಸುಳ್ಳು. ಪ್ರಧಾನಿ ಮೋದಿ ಅವರು ಸಾಧನೆ ಮಾಡಿರುವ ಇಸ್ರೋ ವಿಜ್ಞಾನಿಗಳನ್ನು ಅಭಿನಂಧಿಸಿ, ಗೌರವಿಸಲು ಬಂದಿದ್ದರು. ಅದು ಸರ್ಕಾರಿ ಕಾರ್ಯಕ್ರಮವಾಗಿರದ ಕಾರಣ ಶಿಷ್ಟಾಚಾರ ಪಾಲನೆ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದರು.

ಭಾರತದ ಉಳಿವಿಗಾಗಿ, ಬಲಿಷ್ಟ ರಾಷ್ಟ್ರದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂಬುದು ದೇಶದ ಜನತೆಯ ಬಯಕೆ. ಈಗಾಗಲೇ ವಿಶ್ವದ ಆರ್ಥಿಕ ಸಶಕ್ತ ರಾಷ್ಟ್ರಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಭಾರತ ಮುಂದಿನ 5 ವರ್ಷದಲ್ಲಿ ಜಗತ್ತಿನ ಮೊದಲ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದರು.

Advertisement

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾರಕ ಕೃತ್ಯಗಳಿಗೆ ಕಡಿವಾಣ ಹಾಕಿದ್ದು, ದೇಶದ ಜನರು ಸುರಕ್ಷಿತವಾಗಿದ್ದಾರೆ. ಭಾರತ ಆರ್ಥಿಕ ಸಂಕಷ್ಟದಿಂದ ಹೊರ ಬಂದಿದೆ. ದೇಶವನ್ನು ಕಾಡುತ್ತಿರುವ ಬಹುತೇಕ ಗಂಭೀರ ಸಮಸ್ಯೆಗಳು ಪರಿಹಾರ ಕಾಣುತ್ತಿವೆ. ಇಂಥ ಸಮಯದಲ್ಲಿ ಯಾರೊಬ್ಬರೂ ಬಿಜೆಪಿ ಪಕ್ಷ ಬಿಡುವ ಸಾಹಸ ಮಾಡಲಾರರು ಎಂದರು.

ಗುತ್ತಿಗೆದಾರರನ್ನು ಬಿಜೆಪಿ ನಾಯಕರು ಎತ್ತಿಗಟ್ಟುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾಡಿರುವ ಆರೋಪ ನಿರಾಧಾರ. ಈ ಹಿಂದೆ ಗುತ್ತಿಗೆದಾರರ ಸಂಘದ ಆಧ್ಯಕ್ಷ ಕೆಂಪಣ್ಣರನ್ನ ಅವರನ್ನು ಎತ್ತಿ ಕಟ್ಟಿದ್ದೇ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಸಚಿವರು ಹಣ ಬೇಡಿಲ್ಲವೆಂದು ಹೇಳುವ ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಅವರಿಗೆ ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಾಣುತ್ತಿಲ್ಲವೇ ಎಂದು ಹರಿಹಾಯ್ದರು.

ಶಟ್ಟರ್ ಗೆ ವರ್ಚಸ್ಸು ಹೆಚ್ಚಿಸಿಕೊಳ್ಳುವ ಹಪಾಹಪಿ

ಜಗದೀಶ ಶೆಟ್ಟರ್ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡುವ ಪ್ರಶ್ನೆಯೇ ಇಲ್ಲ. ನಾನೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದರು ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಬಹುದು ಎಂದರು.

ವಿಶ್ವದಲ್ಲಿ ಭಾರತವನ್ನು ಆರ್ಥಿಕವಾಗಿ 5ನೇ ಬಲಿಷ್ಠ ರಾಷ್ಟ್ರವಾಗಿಸಿರುವ ಪ್ರಧಾನಿ ಮೋದಿ ಅವರ ಕಾಲಘಟ್ಟದಲ್ಲಿ ಬಿಜೆಪಿ ಪಕ್ಷದ ಯಾವುದೇ ನಾಯಕ ಪಕ್ಷ ತೊರೆಯಲಾರ. ಬಿಜೆಪಿ ಪಕ್ಷದ ಮಾಜಿ ಶಾಸಕರು ಕಾಂಗ್ರೆಸ್ ಸೇರುವ ಪ್ರಶ್ನೇಯೇ ಇಲ್ಲ. ಪಕ್ಷದಲ್ಲಿ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಪಕ್ಷ ತೊರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ಯತೀಂದ್ರ ಅವರ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿ ಆ.30 ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲು ಯೋಜಿಸಿದ್ದಾರೆ ಎಂದೆಲ್ಲ ಟೀಕೆ ಮಾಡಲಾರೆ. ಮುಖ್ಯಮಂತ್ರಿಯಾದವರು ಸಹಜವಾಗಿ ತಮ್ಮ ತವರು ಜಿಲ್ಲೆಯಿಂದ ಇಂಥ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಸ್ವಾಭಾವಿಕ ಎಂದರು.

ಲೋಕಸಭೆ ಚುನಾವಣೆ ಹಂತದಲ್ಲಿ ಆಫರೇಶನ್ ಕಾಂಗ್ರೆಸ್ ಎಂಬುದು ಸೃಷ್ಟಿಯಷ್ಟೇ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಯಾವೊಬ್ಬ ಬೆಂಬಲಿಗರೂ ಕಾಂಗ್ರೆಸ್ ಸೇರುವುದಿಲ್ಲ. ಈ ಹಿಂದೆ ಶಿವರಾಮ ಹೆಬ್ಬಾರ, ರೇಣುಕಾಚಾರ್ಯ ಇವರ ಬಗ್ಗೆ ಇಂಥದ್ದೇ ಸುದ್ದಿ ಹರಡಲಾಗಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿರುವ ಎಸ್.ಟಿ.ಸೋಮಶೇಖರ ಪಕ್ಷ ತೊರೆಯುವುದಿಲ್ಲ. ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಯಾರೂ ಪಕ್ಷ ಬಿಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ 300 ಕ್ಷೇತ್ರಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆದ್ದು ಸ್ಪಷ್ಟ ಬಹುಮತದಿಂದ ಬಿಜೆಪಿ ಆಧಿಕಾರದ ಗದ್ದುಗೆ ಹಿಡಿಯುವ ಹ್ಯಾಟ್ರಿಕ್ ಸಾಧನೆ ಮಾಡಲಿದೆ. ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರೇ ಅಧಿಕಾರಕ್ಕೇರಲಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ ಎಂದರು.

ಲೋಕಸಭಾ ಚುನಾವಣೆಗೂ ಮುನ್ನ ಏನೋ ಅನಾಹುತವಾಗುತ್ತದೆ ಎಂದು ಭವಿಷ್ಯ ನುಡಿದ ಯತ್ನಾಳ್, ಇದು ಸಹಜವಾಗಿ ಕಾಂಗ್ರೆಸ್ ಪಕ್ಷದಲ್ಲಿನ ಭಯಕ್ಕೆ ಕಾರಣವಾಗಿದೆ. 135 ಶಾಸಕರು ಆಯ್ಕೆಯಾದರೂ ಅವರ ಮೇಲೆ ಕಾಂಗ್ರೆಸ್‍ಗೆ ವಿಶ್ವಾಸವಿಲ್ಲ. ಬಿಜೆಪಿ ಪಕ್ಷದವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಮಾತ್ರ ಲೋಕಸಭಾ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಭಾವನೆ ಅವರಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next