Advertisement

ಇದು ಸಮಯಕ್ಕೆ ತಕ್ಕಂತ ಸರ್ಕಾರ

02:05 PM May 22, 2018 | |

ಮೈಸೂರು: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಯಾವುದೇ ತತ್ವ-ಸಿದ್ಧಾಂತಗಳಿಲ್ಲ. ಇದೊಂದು ಸಮಯಕ್ಕೆ ತಕ್ಕಂತ ಸರ್ಕಾರವೇ ಹೊರತು, ಸಮ್ಮಿಶ್ರ ಸರ್ಕಾರವಲ್ಲ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಟೀಕಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸನಸಭೆ, ಸಂಸತ್‌ಗೆ ಆಯ್ಕೆಯಾಗುವವರ ವ್ಯಕ್ತಿತ್ವದ ಜತೆಗೆ ಚುನಾವಣಾ ವ್ಯವಸ್ಥೆ ಅಮೂಲ್ಯವಾಗಿರಬೇಕು. ಆದರೆ, ಇಂದು ಪಾವಿತ್ರತೆ, ತತ್ವ-ಸಿದ್ಧಾಂತ, ಹೋರಾಟಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಎಲ್ಲಾ ಚುನಾವಣೆಗಳು ಜಾತಿ, ಹಣದ ಆಧಾರದಲ್ಲಿ ನಡೆಯುತ್ತಿವೆ. ಪವಿತ್ರವಾಗಿ ಚುನಾಚಣೆ ಎದುರಿಸಲು ಯಾರಿಗೂ ಸಹ ಸಾಧ್ಯವಾಗುತ್ತಿಲ್ಲ.

ಚುನಾವಣೆ ಪವಿತ್ರವಾಗಿ ನಡೆಸಿದರೆ ಮತಹಾಕದ ಸ್ಥಿತಿ ತಲುಪಿದ್ದು, ಎಷ್ಟು ಹಣ ಖರ್ಚು ಮಾಡಿದರೆ ಶಾಸಕ, ಮಂತ್ರಿ ಆಗುತ್ತೇನೆಂಬ ಸ್ಥಿತಿಗೆ ತಲುಪಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಅರಾಜಕತೆ ಸೃಷ್ಟಿಯಾಗಲಿದ್ದು, ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯಬೇಕಿದೆ. ಚುನಾವಣೆ ವೇಳೆ ಬಿಡುಗಡೆಯಾಗುವ ಪ್ರಣಾಳಿಕೆಗಳು ಬೋಗಸ್‌ ಎಂದು ಕಿಡಿಕಾರಿದರು.

ಪ್ರಾಮಾಣಿಕತೆ ಇಲ್ಲ: 55 ವರ್ಷದಿಂದ ಹೋರಾಟ ಮಾಡುತ್ತಿರುವ ತಾವು, ಬೇರೆ ಪಕ್ಷದಲ್ಲಿದ್ದರೆ ಶಾಸಕ, ಮಂತ್ರಿಯಾಗುವ ಎಲ್ಲಾ ಅವಕಾಶಗಳಿತ್ತು. ಆದರೂ ಹೋರಾಟವನ್ನೇ ನಂಬಿ ಬರುತ್ತಿದ್ದೇನೆ. ಚಾಮರಾಜನಗರವನ್ನು ಜಿಲ್ಲೆ ಮಾಡಲು ಹಾಗೂ ಕಾವೇರಿ ವಿಷಯಕ್ಕಾಗಿ ಹೋರಾಟ ಮಾಡಿದ್ದೇನೆ.

ಹೀಗಿದ್ದರೂ ಚುನಾವಣೆಯಲ್ಲಿ ಮತದಾರರು ನನ್ನ ಪರವಾಗಿ ನಿಲ್ಲಲಿಲ್ಲ, ಇದಕ್ಕೆ ತಮಗೆ ಯಾವುದೇ ಬೇಸರವಿಲ್ಲ. ಚುನಾವಣೆಯಲ್ಲಿ ಜಾತಿ, ಹಣ ತಮ್ಮನ್ನು ಸೋಲಿಸಿದೆ ಹೊರತು, ಬೇರೇನೂ ಅಲ್ಲ. ಯಾವ ರಾಜಕೀಯ ಪಕ್ಷಗಳು ಜಾತ್ಯತೀತವಲ್ಲ, ರಾಜ್ಯದಲ್ಲಿ ನಾನು ಮಾತ್ರವೇ ಜಾತ್ಯತೀತ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದರು.

Advertisement

ಅನುಮಾನ ಮೂಡಿದೆ: ಮತಯಂತ್ರದ ಬಗ್ಗೆ ನನಗೆ ಅನುಮಾನ ಮೂಡಿದೆ. ಈ ವಿಷಯದಲ್ಲಿ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಬೇಕಿದೆ. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ತಾವು ಪತ್ರ ಬರೆಯುತ್ತೇನೆ. ಚುನಾವಣೆಯ ಸೋಲಿಗೆ ತಲೆಕೆಡಿಸಿಕೊಳ್ಳಲ್ಲ, ಮುಂದೆಯೂ ಚುನಾವಣೆಗೆ ನಿಲ್ಲುತ್ತೇನೆ ಎಂದು ತಿಳಿಸಿದರು.

ಪ್ರಾಧಿಕಾರ ರಚನೆ ಬೇಡ: ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆ ರಾಜ್ಯಕ್ಕೆ ಅಪಾಯಕಾರಿ ಆಗಿದೆ. ಇದರಿಂದ ತಮಿಳುನಾಡಿಗೆ ಅನುಕೂಲವಾಗಲಿದೆ. ಪ್ರಾಧಿಕಾರ ರಚನೆಯಿಂದ ಕುಡಿಯಲು, ಕೃಷಿಗೆ ನೀರು ಸಿಗದಂತೆ ಸ್ಥಿತಿ ಎದುರಾಗಲಿದೆ. ಹೀಗಾಗಿ ಪ್ರಾಧಿಕಾರ ರಚನೆಗೆ ಅವಕಾಶ ನೀಡಬಾರದು.

ನಟ ರಜನಿಕಾಂತ್‌ ಸಿನಿಮಾ ನಟರಾಗಿ ರಾಜಕಾರಣಿಯಂತೆ ಮಾತನಾಡುತ್ತಿದ್ದು, ತಮಿಳುನಾಡಿನ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ರಜನಿಕಾಂತ್‌ ಒಬ್ಬ ಕನ್ನಡ ದ್ರೋಹಿಯಾಗಿದ್ದು, ಅವರು ಕರ್ನಾಟಕಕ್ಕೆ ಬರಬಾರದು. ಚಿತ್ರೀಕರಣಕ್ಕೂ ಸಹ ರಾಜ್ಯಕ್ಕೆ ಬರಬಾರದು. ಅವರ ಮನೆಗೆ ಬರಬೇಕಾದರೆ ಬರಲಿ, ಹಾಗೇನಾದರೂ ಬಂದರೆ ನಾವು ಹೋರಾಟ ಮಾಡುತ್ತೇವೆ ಎಂದು ವಾಟಾಳ್‌ ನಾಗರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next