ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಪಂಥಾಹ್ವಾನ ನೀಡಿರುವ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ವಿಜಯಪುರ ನಗರದಲ್ಲಿ ಇಬ್ಬರೂ ಪಕ್ಷೇತರಾಗಿ ಸ್ಪರ್ಧಿಸೋಣ. ಸೋತವರು ರಾಜಕೀಯ ನಿವೃತ್ತಿ ಪಡೆಯೋಣ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅನಗತ್ಯವಾಗಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಯತ್ನಾಳ್ ನನ್ನ ವಿರುದ್ಧ ಟೀಕೆ ಮಾಡುವುದರ ಹಿಂದೆ ಬೇರೊಬ್ಬರ ಪ್ರಚೋದನೆ ಇರುವುದು ಸ್ಪಷ್ಟವಾಗಿದೆ ಎಂದು ದೂರಿದರು.
ನಾನು ಪಕ್ಷದಾಚೆಯ ರಾಜಕೀಯ ಶಕ್ತಿ ಹೊಂದಿದ್ದು, ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿದ್ದೇನೆ. ಹೀಗೆಯೇ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್, ಬಿಜೆಪಿ ಪಕ್ಷದಿಂದಲೂ ಗೆದ್ದು ಶಾಸಕನಾದವನು. ಹೀಗಾಗಿ ಯತ್ನಾಳ್ ಅವರಿಗೆ ರಾಜಕೀಯವಾಗಿ ನಿಜಕ್ಕೂ ಶಕ್ತಿ ಇದ್ದರೆ ವಿಜಯಪುರ ಕ್ಷೇತ್ರದಲ್ಲಿ ನಾನು ಹಾಗೂ ಯತ್ನಾಳ್ ಇಬ್ಬರೂ ಪಕ್ಷೇತರರಾಗಿ ಸ್ಪರ್ಧಿಸೋಣ. ಸೋತವರು ರಾಜಕೀಯ ನಿವೃತ್ತಿ ಪಡೆಯೋಣ. ಈ ಸವಾಲು ಸ್ವೀಕರಿಸುವ ಶಕ್ತಿ ಯತ್ನಾಳ್ ಗೆ ಇದೆಯೇ ಎಂದು ಶಾಸಕ ಶಿವಾನಂದ ಪಾಟೀಲ ತೊಡೆ ತಟ್ಟಿದ್ದಾರೆ.
ಈ ಹಿಂದೆ ಯತ್ನಾಳ್ ಸಂಸದರಾಗಿ ಆಯ್ಕೆ ಆಗುವಲ್ಲಿ ಆಗ ಬಿಜೆಪಿ ಶಾಸಕನಾಗಿದ್ದ ನನ್ನ ಕೊಡುಗೆಯೂ ಇದೆ. ಆದರೆ ಕೃತಜ್ಞತೆ ಇಲ್ಲದ ಯತ್ನಾಳ್ ಅನಗತ್ಯವಾಗಿ ರಾಜಕೀಯವಾಗಿ ನನ್ನನ್ನು ಕೆಣಕುವ ಸಾಹಸ ಮಾಡದಿರಲಿ. ಮತ್ತೊಮ್ಮೆ ಇದೇ ರೀತಿ ಮುಂದುವರೆದರೆ ರಾಜಕೀಯವಾಗಿಯೇ ತಕ್ಕ ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
Related Articles
ಇದನ್ನೂ ಓದಿ: ಮಂಗಳೂರಿನಿಂದ ಉಡುಪಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಬಾಣಸಿಗ
ಅಣ್ಣ ಒಂದು ಪಕ್ಷದಲ್ಲಿ, ತಮ್ಮ ಒಂದು ಪಕ್ಷದಲ್ಲಿದ್ದು ರಾಜಕೀಯ ನಾಟಕ ಮಾಡುತ್ತಾರೆ ಎನ್ನುವ ಯತ್ನಾಳ್ ಸಹೋದರ ಕೂಡ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದರು, ಆಗ ಬಸನಗೌಡ ವಿರುದ್ಧ ಅವರ ಅಣ್ಣ ಏನು ಹೇಳಿದ್ದರು ಎಂದು ಜನರ ಮುಂದಿಡಲೇನು ಎಂದು ವಾಗ್ದಾಳಿ ನಡೆಸಿದರು.
ಬಸವನಬಾಗೇವಾಡಿ, ವಿಜಯಪುರ, ಬಬಲೇಶ್ವರ ಸೇರಿದಂತೆ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಯಾವುದೇ ಪಕ್ಷದಿಂದ ಸ್ಪರ್ಧಿಸಲು ನಾನು ಸಿದ್ಧ. ಅದೇ ಧೈರ್ಯ ಯತ್ನಾಳ್ ಗೆ ಇದೆಯೇ ಎಂದು ಪ್ರಶ್ನಿಸಿದ ಶಾಸಕ ಶಿವಾನಂದ ಪಾಟೀಲ, ನನ್ನನ್ನು ಅನಗತ್ಯವಾಗಿ ಕೆಣಕಿದರೆ ಅದರ ರಾಜಕೀಯವಾಗಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ನನ್ನ ರಾಜಕೀಯ ಭವಿಷ್ಯ ನಿರ್ಧರಿಸುವವರು ಮತದಾರರೇ ಹೊರತು ಯತ್ನಾಳ್ ಅಲ್ಲ. ನಾನು ಯತ್ನಾಳ್ ವಿರುದ್ಧ ಒಂದೇ ಒಂದು ಮಾತನಾಡಿಲ್ಲ. ಆದರೆ ಯತ್ನಾಳ್ ಅನಗತ್ಯವಾಗಿ ನನ್ನ ವಿರುದ್ಧ ಟೀಕೆಗಳ ಮಾತನಾಡುತ್ತಿದ್ದಾರೆ. ಆದರೆ ನನ್ನ ಮೌನವನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ನನ್ನ ಸಹನೆಗೂ ಮಿತಿ ಇದೆ ಎಂದು ಗುಡುಗಿದರು.