ಬೆಂಗಳೂರು:ಶಿಕ್ಷಕರು -ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ವಿಧಾನಪರಿಷತ್ ಸದಸ್ಯರು ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸ್ಪಂದಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯ ಕಳೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌದ ಆವರಣದ ಗಾಂಧಿಪ್ರತಿಮೆ ಬಳಿ ಪರಿಷತ್ ಸದಸ್ಯರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆ ಜನ ಒಪ್ಪುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ ಎಂಬುದು ತಿಳಿದುಕೊಳ್ಳಬೇಕು ಎಂದು ಹೇಳಿದರು.
ವಿಧಾನಸೌಧಕ್ಕೆ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸೆ.15 ರಂದು ಮಾತುಕತೆಗೆ ಸಮಯ ಕೊಟ್ಟಿದ್ದೇನೆ. ಅಲ್ಲಿವರೆಗೂ ಇರಲಿ ಬಿಡು ಎಂಬ ಹಠದ ಮನೋಭಾವನೆ ಖಂಡಿತ ಒಳ್ಳೆಯದಲ್ಲ. ಇದು ಸರ್ಕಾರಕ್ಕೂ ಶೋಭೆ ತರುವ ವಿಷಯವಲ್ಲ ಎಂದರು.
ಶೈಕ್ಷಣಿಕ ವಲಯದ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿ ಎಂಟು ದಿನಗಳಿಂದ ಪಕ್ಷಾತೀತವಾಗಿ ಪರಿಷತ್ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಒಂದು ವರ್ಷದಿಂದ ಸದನ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ತಲೆಕೆಡಿಸಿಕೊಂಡಿಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಗೆ ಬಂದಾಗ ಪ್ರತಿನಿಧಿಗಳನ್ನು ಕಳಿಸುವ ಸಂಸ್ಕೃತಿ ಇತ್ತು. ಆದ್ರೆ ಇದ್ಯಾವುದೋ ಆಗಿಲ್ಲ. ಅವರ ಶೇ.80 ರಷ್ಟು ಬೇಡಿಕೆ ಈಡೇರಿಸಿದರೂ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಸೆ.15 ರಸಭೆಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ನಮ್ಮ ಪಕ್ಷದಿಂದ ಹೋರಾಟ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.