ಭದ್ರಾವತಿ: ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿ ಇದೇ ರೀತಿ ಮುಂದುವರಿದರೆ ಮುಂದಿನ ದಶಕದೊಳಗೆ ಮನೆ ಮಾಲೀಕರು ಮನೆ ಮಾರಿ ತೆರಿಗೆ ಪಾವತಿಸಬೇಕಾದ ಪರಿಸ್ಥಿತಿಗೆ ಸಿಲುಕುವುದು ನಿಶ್ಚಿತ ಎಂದು ಶಿವಮೊಗ್ಗ ಜನಹಿತರಕ್ಷಣಾ ಸಮಿತಿಯ ಪ್ರಮುಖ ವಸಂತಕುಮಾರ್ ಹೇಳಿದರು.
ಸೋಮವಾರ ಸರ್ಕಾರದ ಆಸ್ತಿ ತೆರಿಗೆ ಹೆಚ್ಚಳ ನೀತಿ ವಿರೋಧಿಸಿ ಭದ್ರಾವತಿ ನಗರಸಭೆ ಮುಂದೆ ಭದ್ರಾವತಿ ಮನೆ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರ ತನ್ನ ಆದಾಯ ಹೆಚ್ಚಳ ಮಾಡಿಕೊಳ್ಳಲು ಆಸ್ತಿ ಮೇಲಿನ ತೆರಿಗೆಯನ್ನು ಮನ ಬಂದಂತೆ ಹೆಚ್ಚಿಸಿರುವುದರಿಂದ ಮನೆ ಮಾಲೀಕರ ಮೇಲೆ ಬರೆ ಎಳೆದಂತಾಗಿದೆ. ಇದನ್ನು ಪಕ್ಷಾತೀತವಾಗಿ ಜನಸಾಮಾನ್ಯರು ವಿರೋಧಿಸದಿದ್ದರೆ ಮುಂದೆ ಇದರ ದುಷ್ಪರಿಣಾಮ ಎಲ್ಲರೂ ಎದುರಿಸಬೇಕಾಗುತ್ತದೆ. ಈ ಅವೈಜ್ಞಾನಿಕ ತೆರಿಗೆ ಹೆಚ್ಚಳದ ನೀತಿ ಕೈ ಬಿಡುವವರೆಗೂ ಯಾರೂ ತೆರಿಗೆ ಪಾವತಿಸಬಾರದು ಎಂದು ಅವರು ಹೇಳಿದರು.
ಶಿವಮೊಗ್ಗ ಜನ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಡಾ| ಬಸವರಾಜ್ ಶೆಟ್ಟಿ ಮಾತನಾಡಿ, ನಾವು ನಮ್ಮ ವಾಸಕ್ಕಾಗಿ ಮಾಡಿಕೊಂಡಿರುವ ಮನೆ ನಮಗೆ ಆಸರೆಯ ಮೂಲವೇ ಹೊರತು ಅದು ದುಡಿಮೆ ಮಾಡುವ ಬಂಡವಾಳವಲ್ಲ. ನೆರೆಹೊರೆ ರಾಜ್ಯಗಳು ಕೊರೊನಾ ಕಾಲದಲ್ಲಿ ಜನತೆ ಸಂಕಷ್ಟವನ್ನು ಅರಿತು ತೆರಿಗೆ ಏರಿಕೆ ಮಾಡಿಲ್ಲ. ಆದರೆ ನಮ್ಮ ರಾಜ್ಯ ಸರ್ಕಾರ ಕೊರೊನಾ ಸಂಕಷ್ಟ ಕಾಲದಲ್ಲಿಯೇ ಮನೆ ಆಸ್ತಿ ತೆರಿಗೆ ಮನಬಂದತೆ ಹೆಚ್ಚಿಸಿ ಬಿಲ್ ಪಾಸ್ ಮಾಡಿ ಜನರಿಗೆ ಸಂಕಷ್ಟ ಸೃಷ್ಟಿಸಿದೆ. ಇದನ್ನು ನಾವು ಈಗಾಗಲೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದೇವೆ. ನೀವೂ ಸಹ ನಮ್ಮ ಹೋರಾಟಕ್ಕೆ ಬೆಂಬಲಿಸಿ ಕಾನೂನು ಹೋರಾಟಕ್ಕೆ ಮುಂದಾದರೆ ನ್ಯಾಯ ಸಿಗುವುದು ಖಂಡಿತ ಎಂದರು.
ನಗರಸಭೆ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ಆಯುಕ್ತರು, ಅಧಿಕಾರಿಗಳು ಸರ್ಕಾರದ ಏಜೆಂಟರಿದ್ದಂತೆ. ಅವರು ಅಸಹಾಯಕರು. ಪಕ್ಷಾತೀತವಾಗಿ ನಗರಸಭೆ ಸದಸ್ಯರು ಈಗಾಗಲೇ ಸಭೆ ನಡೆಸಿ ಆಸ್ತಿ ತೆರಿಗೆ ಹೆಚ್ಚಳದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸುವಂತೆ ಆಯುಕ್ತರಿಗೆ ನೀಡಿದ್ದೇವೆ. ಇಲ್ಲಿನ ರಾಜ್ಯ ಸರ್ಕಾರಕ್ಕೆ ಜನಪರ ಸರ್ಕಾರವಾಗಿರದೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದೆ. ಮನೆ ಮಾಲೀಕರ ಸಂಘ ಕಾನೂನು ಹೋರಾಟಕ್ಕೆ ಮುಂದಾದರೆ ಅದನ್ನು ನಾವು ಬೆಂಬಲಿಸುತ್ತೇವೆ ಎಂದರು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಕಳೆದ ಎರಡು ವರ್ಷ ನಗರಸಭೆಯಲ್ಲಿ ಕೌನ್ಸಿಲ್ ಬಾಡಿ ಅಸ್ತಿತ್ವದಲ್ಲಿ ಇಲ್ಲದಿದ್ದ ಸಮಯದಲ್ಲಿ ಇಲ್ಲಿನ ನಗರಸಭೆ ಈ ರೀತಿ ಆಸ್ತಿ ತೆರಿಗೆ ಹೆಚ್ಚಳ ನಿರ್ಧರಿಸಿದೆ. ಇದನ್ನು ನಾವು ಖಂಡಿಸಿದ್ದೇವೆ ಎಂದರು. ಆಯುಕ್ತ ಪರಮೆಶ್ವರ್ ಮಾತನಾಡಿ, ನಗರಸಭೆ ಚುನಾಯಿತ ಸದಸ್ಯರ ಸಭೆಯು ನೀಡಿರುವ ಮನವಿಯನ್ನು ನಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಮನೆ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜಯ್ಯ, ಗೌರವ ಸಲಹೆಗಾರರಾದ ರುದ್ರಪ್ಪ, ಉಪಾಧ್ಯಕ್ಷ ರಾಮು, ನಿರ್ದೇಶಕರಾದ ಮಂಜುಳಾ, ನಾಗೋಜಿ ರಾವ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಕದಿರೇಶ್, ಕರಿಗೌಡ, ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಹಾ. ರಾಮಪ್ಪ, ಆಮ್‌ಆದ್ಮಿ ಅಧ್ಯಕ್ಷ ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅದ್ಯಕ್ಷ ಬಿ.ಎನ್. ರಾಜು,ನರಸಿಂಹಾಚಾರ್, ರವಿಕುಮಾರ್ ಇತರರು ಇದ್ದರು.