Advertisement

ಬಡವರ ಹಸಿವು ನೀಗಿಸುವುದು ಪ್ರತಿಯೊಬ್ಬರ ಕರ್ತವ್ಯ: ಕಂದಗಲ್ಲ

05:16 PM Apr 23, 2022 | Shwetha M |

ಮುದ್ದೇಬಿಹಾಳ: ಹಸಿವನ್ನು ಅರಿತವನೇ ಹಸಿದವನ ಹಸಿವಿಗೆ ಸ್ಪಂದಿಸುವುದು ಸಾಧ್ಯ. ಹಸಿವು ಯಾವುದೇ ಪ್ರಕಾರದಲ್ಲಿದ್ದರೂ ಅದನ್ನು ನೀಗಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ. ತಿಂದು ಬಿಟ್ಟ ನಂತರ ಉಳಿಯುವುದು ಸಮಾಜದ ಸ್ವತ್ತು. ಅದನ್ನು ಸಮಾಜಕ್ಕೇ ಮರಳಿಸಬೇಕು ಎಂದು ಬಾಗಲಕೋಟೆ ಜಿಲ್ಲೆ ಇಳಕಲ್ಲನ ಪ್ರವಚನಕಾರ ಲಾಲಹುಸೇನ ಕಂದಗಲ್ಲ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ನೇತಾಜಿ ನಗರದಲ್ಲಿ ಗಂಗಾ ಫೌಂಡೇಶನ್‌ ಮತ್ತು ಚಲವಾದಿ ಸಮಾಜ ವತಿಯಿಂದ ಏರ್ಪಡಿಸಿದ್ದ ಸೌಹಾರ್ದ ಇಫಿಯಾರ್‌ ಸಮಾರಂಭದ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಜಗತ್ತಿನ ಅತ್ಯಂತ ದೊಡ್ಡ ಸಮಸ್ಯೆ ಹಸಿವು. ಹಸಿವು ಮುಕ್ತ ರಾಷ್ಟ್ರ, ವಿಶ್ವವನ್ನು ಇವತ್ತಿಗೂ ನೋಡಲು ಸಾಧ್ಯವಾಗುತ್ತಿಲ್ಲ. ಸಮಾಜದ, ರಾಷ್ಟ್ರದ ಹಸಿವನ್ನು ನೀಗಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹೊಣೆ ಮಾತ್ರವಲ್ಲ ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎನ್ನುವುದನ್ನು ಧರ್ಮ ತಿಳಿಸಿಕೊಡುತ್ತದೆ. ರಂಜಾನ್‌ ಮಾಸದಲ್ಲಿ ಹಸಿವು ನೀಗಿಸುವ ಪ್ರಾಯೋಗಿಕ ಕಾರ್ಯ ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಚಲವಾದಿ ಕುಟುಂಬದವರು ಇಫಿಯಾರ್‌ ಕೂಟ ಆಯೋಜಿಸಿ ಸೌಹಾರ್ದತೆ ಮೆರೆದಿದ್ದಾರೆ. ಶ್ರೀಕಾಂತ ಚಲವಾದಿ ಮತ್ತು ಅವರ ಬಳಗದ ಕಾರ್ಯ ಶ್ಲಾಘನೀಯವಾದದ್ದಾಗಿದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಮಾತನಾಡಿ, ಮಾನವೀಯತೆ, ಮನುಷ್ಯತ್ವ ಇದ್ದವರು ಧರ್ಮವನ್ನು ಎತ್ತಿ ಹಿಡಿಯಬೇಕು ಎಂದು, ತಾಳಿಕೋಟಿಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಅವರು ಹಿಂದೂ ಮುಸ್ಲಿಂ ಕೆಟ್ಟವರಲ್ಲ. ಕಾಲ, ಖುರಾನ್‌, ಭಗವದ್ಗೀತೆ, ಬೈಬಲ್‌ ಇವ್ಯಾವುದೂ ಕೆಟ್ಟಿಲ್ಲ ಕೆಟ್ಟಿದ್ದು ಮನುಷ್ಯನ ಮನಸ್ಸು. ಅದು ಸುಧಾರಣೆಯಾದರೆ ಸಮಾಜ ಸುಂದರವಾಗುತ್ತದೆ ಎಂದು ಹೇಳಿದರು.

Advertisement

ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಸಸಿಗೆ ನೀರೆರೆದು ಉದ್ಘಾಟಿಸಿದರು. ಜಮಿಯತೆ ಉಲ್ಮಾ ಹಿಂದ್‌ನ ಕಾರಿ ಇಸಾಕ ಮಾಗಿ, ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್‌.ಮದರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಎಚ್‌.ಹಾಲಣ್ಣವರ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ದಿ ಕರ್ನಾಟಕ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಸತೀಶ ಓಸ್ವಾಲ್‌, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ್‌ ಕಲಬುರ್ಗಿ, ಪುರಸಭೆ ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಶಿವಪೂರ, ಸದಸ್ಯರಾದ ಹನುಮಂತ ಭೋವಿ, ಅಲ್ಲಾಭಕ್ಷ ಢವಳಗಿ, ಸಮಾಜ ಸೇವಕ ಅಯ್ಯೂಬ ಮನಿಯಾರ, ಅಮಾನತ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಪ್ರಮುಖರಾದ ಮಹೆಬೂಬ ಹಡಲಗೇರಿ, ಮಾರುತಿ ನಲವಡೆ, ಅಶೋಕ ಇರಕಲ್ಲ, ಭಗವಂತ ಕಬಾಡೆ, ರೇವಣೆಪ್ಪ ಚಲವಾದಿ, ಪರಶುರಾಮ ನಾಲತವಾಡ, ಕಾಂತು ಚಲವಾದಿ, ಗುರುಸ್ವಾಮಿ ಬೂದಿಹಾಳಮಠ, ಬಸಪ್ಪ ಮೂಲಿಮನಿ, ಭೀಮಪ್ಪ ದೊಡಮನಿ, ಹಸನಪ್ಪ ದೊಡಮನಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next