ಪಿರಿಯಾಪಟ್ಟಣ: ಸಮಾಜದಲ್ಲಿ ಶಾಂತಿಯಿಂದ ಪ್ರತಿಯೊಬ್ಬರೂ ಜೀವನ ಸಾಗಿಸಲು ಸಂವಿಧಾನವೇ ಮೂಲ ಕಾರಣವಾಗಿದ್ದು ಇದನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಆರ್.ಕಾಂತರಾಜು ತಿಳಿಸಿದರು.
ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿನಿರ್ವಾಣ ದಿನದಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿ ಆಡಳಿತದಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಗುಲಾಮಗಿರಿ ವಿರುದ್ಧ ಧ್ವನಿಯಾಗಿದ್ದಾರೆ.
ಅಲ್ಲದೆ ಶಿಕ್ಷಣದ ಮೂಲಕ ಪ್ರತಿಯೊಬ್ಬರೂ ಜಾಗೃತಿಹೊಂದಲು ಸಾಧ್ಯವೆಂದು ಸಾರ್ವಜನಿಕ ಶಿಕ್ಷಣ ಜಾರಿಗೊಳಿಸಿ ಜಾಗೃತಿ ಮೂಡಿಸಿದ್ದಾರೆಂದು ತಿಳಿಸಿದರು. ತಹಶೀಲ್ದಾರ್ ಜೆ.ಮಹೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ರವರ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಭಾಗವಹಿಸಿ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕೆಂದರು.
ಜನಪ್ರತಿನಿಧಿಗಳ, ಅಧಿಕಾರಿಗಳ ಗೈರು: ವೇದಿಕೆಗಳಲ್ಲಿ ಮಹನೀಯರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯಕ್ರಮಕ್ಕೆ ಬಾರದೆ ಗೈರು ಹಾಜರಾಗಿದ್ದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪುರಸಭಾ ಸದಸ್ಯರಾದ ಪಿ.ಮಹದೇವ್, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಮುಖ್ಯಾಧಿಕಾರಿ ಕೃಷ್ಣ, ತಾಪಂ ಸಹಾಯಕ ನಿರ್ದೇಶಕ ಬಾಬು, ವಿದ್ಯಾರ್ಥಿ ನಿಲಯಗಳ ನಿಲಯಪಾಲಕರಾದ ಗುರುಸ್ವಾಮಿಆರಾಧ್ಯ, ಮೋಹನ್, ರಾಜಯ್ಯ, ಮುಖಂಡರಾದ ಪಿ.ಪಿ.ಮಹದೇವ್, ಕೃಷ್ಣಯ್ಯ, ಆರ್.ಡಿ.ಮಹದೇವ್, ಬಸಪ್ಪ, ಮೇಲೂರು ರಾಜೇಶ್, ಲೋಕೇಶ್ ಹೊನ್ನೇನಹಳ್ಳಿ, ಚೆಲುವಯ್ಯ ಬೇಗೂರು, ಶೇಖರ್, ಸೋಮಶೇಖರ್, ಈರಾಜ್‌ಬಹುಜನ್ ಮತ್ತಿತರರಿದ್ದರು.