ಬೀದರ: ರಾಜ್ಯದಲ್ಲಿ ಸರ್ಕಾರಿ ಜಮೀನು ಭೂಕಬಳಿಕೆ ಮತ್ತು ಒತ್ತುವರಿ ತಡೆಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಕ್ರಮ ವಹಿಸುತ್ತಿದ್ದು, ಭೂಕಬಳಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷರಾದ ವಿಧಾನಸಭೆ ಸದಸ್ಯ ಕೆ.ಜಿ ಬೋಪಯ್ಯ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರಿ ವಕೀಲರನ್ನು ನೇಮಿಸಲಾಗುತ್ತಿದೆ. ಸಮಿತಿ ಜಾರಿಯಾದ ಬಳಿಕ ರಾಜ್ಯದಲ್ಲಿ ಇಲ್ಲಿಯವರೆಗೆ 80 ಸಭೆಗಳನ್ನು ಮಾಡಲಾಗಿದೆ ಮತ್ತು ಪ್ರತಿವಾರ ಸಭೆ ಕರೆಯಲಾಗುತ್ತದೆ. ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಸಭೆ ನಡೆಸಿ ಸರ್ಕಾರಿ ಭೂಮಿಯನ್ನು ಒತ್ತುವರಿ ಆಗಿರುವ ಕುರಿತು ಮಾಹಿತಿ ಪಡೆದಿದ್ದು, ಸಂಬಂಧಿಸಿದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಗಳಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಿದ್ದೇನೆ ಎಂದರು.
ರಾಜ್ಯದೆಲ್ಲೆಡೆ ಸರ್ಕಾರಿ ಜಮೀನು ಕೆರೆ, ರಾಜ್ಯ ಕಾಲುವೆ ಒತ್ತುವರಿ ಕಂಡುಬಂದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮಿತಿಯ ಅಧ್ಯಕ್ಷರಿಗೆ ಅಥವಾ ಸಂಬಂಧಪಟ್ಟ ಡಿಸಿಗಳಿಗೆ ಸಾರ್ವಜನಿಕರು ತಮ್ಮ ಹೆಸರು ಮತ್ತು ವಿಳಾಸದೊಂದಿಗೆ ದೂರನ್ನು ಸಲ್ಲಿಸಿ. ಈ ಕುರಿತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದು, ಎಲ್ಲರೂ ಸೇರಿ ಸರ್ಕಾರಿ ಜಮೀನು ಉಳಿಸಬೇಕಾಗಿದೆ ಎಂದು ಹೇಳಿದರು.
ಕೆಲವು ಕಡೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂಕಬಳಿಕೆ ಮಾಡಲಾಗಿದೆ. ಇದನ್ನು ತಡೆಯಲು ಸಮಿತಿ ಸಂಬಂಧಿ ಸಿದ ಇಲಾಖೆಗಳ ಸಹಯೋಗದಲ್ಲಿ ಸೂಕ್ತ ಕ್ರಮ ವಹಿಸುತ್ತಿದೆ. ರಾಜ್ಯದ ಬಹಳಷ್ಟು ಕಡೆ ಅರಣ್ಯ ಇಲಾಖೆ ಭೂಮಿಯನ್ನು ಕಬಳಿಸಲಾಗಿದ್ದು, ಹೈಕೋರ್ಟ್ ಪ್ರತಿ ತಿಂಗಳು ಎಷ್ಟು ಭೂಕಬಳಿಕೆ ತೆರವುಗೊಳಿಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡುವಂತೆಯೂ ಸಮಿತಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಅದರ ಮೇಲೆ ನಿಗಾ ವಹಿಸುತ್ತಿದೆ ಎಂದರು.
ಸಮಿತಿಯ ಸದಸ್ಯ ಎ.ಟಿ.ರಾಮಸ್ವಾಮಿ ಮಾತನಾಡಿ, ಭೂಕಬಳಿಕೆ ರಾಜ್ಯದಲ್ಲಿ ಉದ್ದ ಅಗಲ ಬಹಳ ಇದೆ. ಭೂಮಾಫಿಯಾ ಬೃಹತ್ ವಾಗಿ ಬೆಳೆದಿದೆ. ಬಹುತೇಕ ಕಡೆ ಆಸ್ತಿ ವಹಿಗಳನ್ನು ಸರಿಯಾಗಿಯೇ ನಿರ್ವಹಿಸಿಲ್ಲ. ಹಾಗಾಗಿ ಇದರ ತಡೆಗಾಗಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಹುಮನಾಬಾದ ತಾಲೂಕಿನಲ್ಲಿ ಪುರಸಭೆಯಿಂದ 1200 ನಿವೇಶನಗಳನ್ನು ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದು, ಇದು ಕೇವಲ ಒಂದು ಉದಾಹರಣೆ ಮಾತ್ರ. ಆದರೆ, ರಾಜ್ಯದಲ್ಲಿ ಇಂತಹ ಹಲವಾರು ನಿದರ್ಶನಗಳಿವೆ ಎಂದು ಹೇಳಿದರು.
ಸಮಿತಿಯ ಸದಸ್ಯರಾದ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ ಮಾತನಾಡಿ, ಜಿಲ್ಲೆಯಲ್ಲಿ ಆಗಿರುವ ಸರ್ಕಾರಿ ಜಮೀನುಗಳ ಭೂ ಒತ್ತುವರಿ ತಡೆಗೆ ಕ್ರಮ ವಹಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಮಿತಿಯ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. ಸಮಿತಿಯ ಸದಸ್ಯ ಕಾರ್ಯದರ್ಶಿ ವಸಂತಕುಮಾರ, ಕವಿತಾ ರಾಣಿ, ಡಿಸಿ ಗೋವಿಂದರೆಡ್ಡಿ, ಶಿಲ್ಪಾ ಎಂ., ಶಿವಕುಮಾರ ಶೀಲವಂತ ಇದ್ದರು.