Advertisement

ರಾಜಧಾನಿಯಲ್ಲಿ ಕನ್ನಡದ ಅಸ್ಮಿತೆ ಉಳಿಸಿಕೊಳ್ಳುವುದೇ ಸವಾಲು

12:15 PM Apr 08, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಸಿರುಗಟ್ಟಿದ ಸ್ಥಿತಿಯಲ್ಲಿದೆ ಎಂದು ಸಾಹಿತಿ ಬೇಂದ್ರೆ ಕೃಷ್ಣಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಮಲ್ಲೇಶ್ವರದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

Advertisement

ಆಂಗ್ಲ ಭಾಷೆಯ ಮೋಹ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಹೆಚ್ಚಳದಿಂದ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಕರ್ನಾಟಕದಲ್ಲಿದ್ದವರು ಕನ್ನಡಿಗರಾಗಿ ಬಾಳಬೇಕು ಎಂದು ಹೇಳಿದರು. ಎಲ್ಲರಿಗೂ ಕನ್ನಡ ಕಲಿಸುವುದರ ಜತೆಗೆ ಪ್ರತಿ ಮನೆಯಲ್ಲೂ ಕನ್ನಡ ವ್ಯವಹಾರಿಕ ಭಾಷೆಯಾಗಬೇಕು.

ಮಕ್ಕಳಿಗೆ ಮೊದಲು ಕನ್ನಡ ಕಲಿಸಬೇಕಿದೆ. ಕನ್ನಡ ಭಾಷಾ ಕಲಿಕಾ ನಿಯಮದಂತೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಕನ್ನಡಿಗರೇ ಖಾಸಗಿ ಶಾಲೆ ನಡೆಸುತ್ತಿದ್ದಾರೆ. ಕನ್ನಡ ಉಳಿಸಲು ಸರ್ಕಾರಿ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಇಂದಿನ ಅಗತ್ಯ ಎಂದರು.

ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ಷರ, ಕಾಗುಣಿತದ ಮೂಲಕ ಕನ್ನಡ ಕಲಿಸುವ ಪದ್ಧತಿ ಜಾರಿಯಾಗಬೇಕು. ಪದ ಕಲಿಸಿ ಅನಂತರ ಅಕ್ಷರ ಕಲಿಸುವ ಕೃತಕ ಕಲಿಕಾ ಪದ್ಧತಿಯಿಂದ ಭಾಷೆಯ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು ಒತ್ತಕ್ಷರ, ದೀರ್ಘಾಕ್ಷರಗಳ ಬಳಕೆಯಲ್ಲಿ ಎಡವುತ್ತಿದ್ದಾರೆ. ಇದರಿಂದಲೇ ಕನ್ನಡ ಮಕ್ಕಳ ಮನಸ್ಸನ್ನು ಪ್ರವೇಶಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ಪಠ್ಯದಲ್ಲಿ ಸ್ವರಾಕ್ಷರ, ಕಂಠ್ಯ, ತಾಲವ್ಯ, ಮೂರ್ಧನ್ಯ, ದಂತ್ಯ, ಓಷ್ಯಂ ಎಂಬಿತ್ಯಾದಿ ಮೂಲ ಪಾಠವನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಹೇಳಿಕೊಡಲಾಗುತ್ತಿಲ್ಲ. ಅವರ್ಗೀಯ ವ್ಯಂಜನಗಳನ್ನು ಪ್ರತ್ಯೇಕ ಗುಂಪೆಂದು ಕ್ರಮಬದ್ಧ ಕಲಿಕೆಯ ರೀತಿ ಹೇಳಿಕೊಡುತ್ತಿಲ್ಲ. ಕನ್ನಡ ಭಾಷೆಯ ಮೂಲಬೇರನ್ನು ನಾವೇ ನಮ್ಮ ಕನ್ನಡ ಶಿಕ್ಷಣ ಕಲಿಕೆಯ ಮೂಲಕ ಕತ್ತರಿಸುತ್ತಿದ್ದೇವೆ ಎಂದರು.

Advertisement

ಪ್ರೌಢ ಶಿಕ್ಷಣ ಮುಗಿದರೂ, ಅಲ್ಪಪ್ರಾಣ, ಮಹಾಪ್ರಾಣ ಬರೆಯಲು, ಉಚ್ಚರಿಸಲು ಅನೇಕರು ಎಡವುತ್ತಾರೆ. ಭಾಷೆಯ ಅರಿವು, ಭಾವದ ಕಾವು ಕಮರಿ ಹೋಗುತ್ತಿದೆ. ಹೀಗಾಗಿ ಸರ್ಕಾರ ಇಂತಹ ವ್ಯವಸ್ಥೆಯನ್ನು ಬದಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾಯಣ್ಣ, ಶಾಸಕ ಅಶ್ವಥ್‌ ನಾರಾಯಣ,  ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಗಣೇಶರಾವ್‌ ಕೇಸರ್ಕರ್‌, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕನ್ಯಾಡಿ, ಶೇಷಾದ್ರಿಪುರ ಕಾಲೇಜು ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ, ಸಾಹಿತಿ ಬೈರಮಂಗಲ ರಾಮೇಗೌಡ ಮೊದಲಾದವರು ಇದ್ದರು.

ಸಾಹಿತ್ಯ ಸಮ್ಮೇಳನದಲ್ಲಿ ವಿದೇಶಿಗ: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯು ಮಲ್ಲೇಶ್ವರ ವೃತ್ತದಿಂದ ಸರ್ಕಾರಿ ಶಾಲೆಯ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ವಿದೇಶಿ ಯುವಕನೊಬ್ಬ ಆಕರ್ಷಿತನಾಗಿ ನೇರವಾಗಿ ಸಮ್ಮೇಳನದ ಸಭಾಂಗಣದೊಳಗೆ ಬಂದಿದ್ದರು. ನಂತರ ಸಂಘಟಕರು ಅವರಿಗೆ ಕನ್ನಡ ಧ್ವಜ ನೀಡಿ, ಶಾಲು ಹಾಕಿದರು.

ಸಭಾ ಕಾರ್ಯಕ್ರಮ ಆರಂಭದಲ್ಲಿ ನಡೆದ ಸಾಂಸ್ಕೃತಿಕ ವೈಭವನ್ನು ಕ್ಯಾಮೆರಾದ ಮೂಲಕ ಸೆರೆಹಿಡಿದು ಎಲ್ಲರ ಗಮನ ಸೆಳೆದರು.  ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದೇನೆ. ನಮ್ಮದು ಸೈಬೀರಿಯಾ, ಇಲ್ಲಿನ ಉತ್ಸವ, ಆಚರಣೆಗಳನ್ನು ನೋಡಿ ತುಂಬಾ ಆಕರ್ಷಿತನಾಗಿದ್ದೇನೆ ಎಂದು ಡೀಮಾ ತನ್ನ ಅನುಭವವನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next