Advertisement

ಐಟಿ ಸಿಟಿಯ 18ರ ನಂಟು

12:21 PM Jan 01, 2018 | |

ಜನವರಿ
ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ: ಮಕರ ಸಂಕ್ರಾಂತಿಯಂದು  ಬೆಂಗಳೂರಿನ ಕೆಂಪೇಗೌಡ ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ  ಶಿವನ ಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವ ಆಪೂರ್ವ ದೃಶ್ಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.  ಅಂದು  ಸೂರ್ಯಾಸ್ತ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಕಿ ಮೂಲಕ ಹಾದು, ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸಿ ನಂತರ ಸಂಪೂರ್ಣವಾಗಿ ಪಥ ಬದಲಾವಣೆಯಾಗುವುದು ವಿಶೇಷ. ಇದನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.

Advertisement

ಫೆಬ್ರವರಿ
ಫೆ. 1: ತುಮಕೂರು ರಸ್ತೆಯ ಕೋರೆ ಕನ್ವಷನಲ್‌ ಹಾಲ್‌ನಲ್ಲಿ “ವಾಟರ್‌ ಎಕ್ಸಪೋ’
ಫೆ.4ಕ್ಕೆ: ವಿಶ್ವ ಕ್ಯಾನ್ಸರ್‌ ದಿನ
ಫೆ.7ಕ್ಕೆ: ಕರ್ನಾಟಕ ಟ್ರೇಡ್‌ ಪ್ರಮೋಷನ್‌ ಸಂಸ್ಥೆಯಲ್ಲಿ ” ರಕ್ಷಾ ದಿವಸ್‌’ ರಕ್ಷಣೆ, ಏರೋಸ್ಪೇಸ್‌, ಮಿಲಿಟರಿ ಕ್ಷೇತ್ರದ ಬಗ್ಗೆ ಚರ್ಚೆ
ಫೆ.10 ಕ್ಕೆ: ಕನಕಪುರ ರಸ್ತೆಯ ಆರ್ಟ್‌ ಆಫ್ ಲಿವಿಂಗ್‌ನಲ್ಲಿ ” ಜಾಗತಿಕ ಪರಿಸರ ಕಾಂಗ್ರೆಸ್‌’ ಸಮಾವೇಶ
ಫೆ.13 ಕ್ಕೆ: ಐಐಎಸ್ಸಿಯ ಟಾ ಟಾ ಆಡಿಟೋರಿಯಮ್‌ನಲ್ಲಿ ಆಧುನಿಕ ಶಸ್ತ್ರಾಸ್ತ್ರ,ಮಿಲಿಟರಿ ಬಗ್ಗೆ ಚರ್ಚಿಸುವ “ಎಲೆಕ್ಟ್ರಾನಿಕ್‌ ವಾರ್‌ಫೇರ್‌
ಫೆ.13 ಕ್ಕೆ: ಮಹಾಶಿವರಾತ್ರಿ-ಪ್ರಮುಖ ಶಿವನ ದೇವಾಲಯಗಳಲ್ಲಿ ಶಿವನ ಆರಾಧನೆ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಯಿಂದ ಪವಿತ್ರ ಗಂಗಾಜಲ ವಿತರಣೆ ( ಶಿವರಾತ್ರಿ ಮುನ್ನಾದಿನ)
ಫೆ.14 ಕ್ಕೆ: ಪ್ರೇಮಿಗಳ ದಿನಾಚರಣೆ- ಪ್ರಮುಖ ಮಾಲ್‌ಗ‌ಳಲ್ಲಿ ಉಡುಗೊರೆಗಳ ಭರ್ಜರಿ ವ್ಯಾಪಾರ,ಪರಸ್ಪರ ಪ್ರೇಮಿಗಳಲ್ಲಿ ವಿನಿಮಯ.ಕಬ್ಬನ್‌ ಪಾರ್ಕ್‌,ಲಾಲ್‌ಬಾಗ್‌,ಎಂಜಿ ರಸ್ತೆ,ಬ್ರಿಗೇಡ್‌ ರಸ್ತೆಗಳಲ್ಲಿ ಪ್ರೇಮಿಗಳ ಶುಭಾಷಯದ ಭರಾಟೆ.
ಫೆ.28: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಾರ್ಚ್‌ 
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ: ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಕರಗ ವಿಶ್ವ ವಿಖ್ಯಾತಿ ಪಡೆದಿದೆ. ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಡೆಯುತ್ತಿರುವ ಕರಗ ಬ್ರ್ಯಾಂಡ್‌ ಬೆಂಗಳೂರಿನ ಪ್ರಮುಖ ಆಕರ್ಷಣೆಯೂ ಹೌದು.  9 ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ  ಚೈತ್ರ ಪೌರ್ಣಿಮೆಯಂದು ಹೂವಿನ ಕರಗ ವಿಶೇಷ. ಬೆಂಗಳೂರಿನ ಧರ್ಮರಾಯ ದೇವಾಲಯ ಸಮಿತಿ ವತಿಯಿಂದ ಕರಗ ಮಹೋತ್ಸವ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಕರಗ ವೀಕ್ಷಿಸಲು ಆಗಮಿಸುತ್ತಾರೆ. ಉಳಿದಂತೆ, ಹೋಳಿ ಹಬ್ಬ, ಮಹಾವೀರ ಜಯಂತಿ, ಅಂತಾರಾಷ್ಟ್ರೀಯ ಮಹಿಳಾ ದಿನ, ಕಿಡ್ನಿ ದಿನ, ಲಸಿಕಾ ದಿನ, ಗುಬ್ಬಚ್ಚಿ ದಿನ, ಹವಾಮಾನ ದಿನಾಚರಣೆ ಇರಲಿದೆ.

ಏಪ್ರಿಲ್‌
ಸೌರಮಾನ ಯುಗಾದಿ/ಬಿಸು ಪರ್ಬ: ಏಪ್ರಿಲ್‌ 15ರಂದು ಸೌರಮಾನ ಯುಗಾದಿ. ಅರ್ಥಾತ್‌ ಕರಾವಳಿ ಭಾಗದ ಜನರ ಬಿಸು ಪರ್ಬ (ವಿಷು ಹಬ್ಬ). ಅದು ಹೊಸ ವರ್ಷಾರಂಭವೂ ಹೌದು. ಇದರ ಅಂಗವಾಗಿ ನಗರದ ಹಲವೆಡೆ ಕರಾವಳಿ ಭಾಗದ ಜನ ಸೇರಿ ಬಿಸು ಪರ್ಬ ಆಚರಿಸಿಕೊಳ್ಳುತ್ತಾರೆ. ಕಲಶ ಕನ್ನಡಿ ಇಟ್ಟು, ಅದರ ಸುತ್ತ ರೈತರು ಹೊಲ, ಗದ್ದೆಗಳಲ್ಲಿ ಬೆಳೆಯುವ ಉತ್ಪನ್ನಗಳನ್ನು ಇಡುವುದು (ಕಣಿ ಇಡುವುದು) ಇದರ ವಿಶೇಷತೆ. ಬೆಲ್ಲ ನೀರು ಪಾನಕ ಮತ್ತೂಂದು ವೈಶಿಷ್ಠ. ಜತೆಗೆ ತಿಂಗಳ ಕೊನೆಯವರೆಗೂ ಬಿಸು ಪರ್ಬ ಹೆಸರಿನಲ್ಲಿ ರಾಜಧಾನಿ ನಗರಿಯ ವಿವಿಧೆಡೆ ತುಳು ಸಂಸ್ಕೃತಿ ಅನಾವರಣಗೊಳ್ಳುತ್ತದೆ. 

ಅಕ್ಷಯ ತೃತೀಯ: ಏ. 18ರಂದು ಬಸವ ಜಯಂತಿ. ಜಗಜ್ಯೋತಿ ಬಸವೇಶ್ವರ ಕುರಿತಾದ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಅಕ್ಷಯ ತೃತೀಯ ಕೂಡ ಇದೇ ದಿನ ಬರುವುದು ವಿಶೇಷ. ಈ ದಿನ ಚಿನ್ನ ಖರೀದಿಗೆ ಅತ್ಯಂತ ಪ್ರಸಕ್ತ ಎಂಬುದು ಪ್ರತೀತಿ. ಹೀಗಾಗಿ ಆ ದಿನ ನಗರದ ಚಿನ್ನಾಭರಣ ಮಳಿಗೆಗಳು ತುಂಬಿ ತುಳುಕುತ್ತವೆ. ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯುತ್ತದೆ. ಈ ಬಾರಿ ಶಂಕರಾಚಾರ್ಯ, ರಾಮಾನುಜಾಚರ್ಯಯ ಜಯಂತಿಗಳೂ ಏಪ್ರಿಲ್‌ ತಿಂಗಳಲ್ಲಿ ಬರುತ್ತವೆ. ಬುದ್ಧ ಪೂರ್ಣಿಮೆ ಕೂಡ ಈ ತಿಂಗಳ ವಿಶೇಷ.

Advertisement

ಮೇ
ವಿಶ್ವ ನಗೆ ದಿನ: ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗೆ ದಿನಕ್ಕೆ ನಗರದ ಹಲವು ಉದ್ಯಾನಗಳು ಸಾಕ್ಷಿಯಾಗಲಿವೆ. ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌, ಎಂ.ಎನ್‌.ಕೃಷ್ಣರಾವ್‌ ಪಾರ್ಕ್‌ ಇತರೆಡೆ ನಗೆಕೂಟ ಏರ್ಪಡಿಸಿ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಜತೆಗೆ ಸಹಕಾರನಗರ, ಜಯನಗರ ನ್ಯಾಷನಲ್‌ ಕಾಲೇಜು ಸೇರಿದಂತೆ ಹಲವೆಡೆ ಹಾಸ್ಯ ಕೂಟ ನಡೆಯಲಿದ್ದು, ಭಾರಿ ಸಂಖ್ಯೆಯಲ್ಲಿ ಸಭಿಕರು ಸೇರುತ್ತಾರೆ. ಬೆಂಗಳೂರು ನಗೆ ಕೂಟಗಳ ಸಂಸ್ಥೆ ಹಾಗೂ ನಾನಾ ನಗೆಕೂಟಗಳು ಒಟ್ಟಾಗಿ ಬೆಂಗಳೂರು ನಗೆ ಕೂಟಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸುವ ಜತೆಗೆ ನಗೆ ಜಾಥವನ್ನು ನಡೆಸಲಾಗುತ್ತದೆ.

ಖಾದಿ ಉತ್ಸವ: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಆಶ್ರಯದಲ್ಲಿ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನದಲ್ಲಿ ಅಥವಾ ಇತರೆ ಪ್ರಮುಖ ಸ್ಥಳದಲ್ಲಿ ಖಾದಿ ಉತ್ಸವ ನಡೆಯಲಿದೆ. ರಾಜ್ಯದ ನಾನಾ ಭಾಗದಿಂದ ಮಾತ್ರವಲ್ಲದೇ ಹಲವು ರಾಜ್ಯಗಳ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ- ಮಾರಾಟ ಮೇಳಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಲಿದ್ದು ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಹೊಸ ಬಗೆಯ ಖಾದಿ, ಗ್ರಾಮೋದ್ಯೋಗದ ಹೊಸ ಉತ್ಪನ್ನಗಳ, ವಿನೂತನ ವಸ್ತ್ರಗಳು, ಗೃಹಬಳಕೆ ವಸ್ತುಗಳ ದೊಡ್ಡ ಸಂಗ್ರಹ ಒಂದೇ ಸೂರಿನಡಿ ಅನಾವರಣಗೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ  ಈ ಉತ್ಸವ ರಾಜಧಾನಿಯಲ್ಲಿ ಯುವಸಮೂಹ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವ ತಂಬಾಕು ನಿಷೇಧ‌ ದಿನ: ಮೇ 31ರಂದು ವಿಶ್ವ ತಂಬಾಕು ನಿಷೇಧ ದಿನದಂದು ನಾನಾ ಸಂಘಟನೆಗಳು ಜಾಗೃತಿ ಜಾಥ ಹಮ್ಮಿಕೊಳ್ಳುತ್ತವೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ವತಿಯಿಂದಲೂ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ತಂಬಾಕು ಸೇವೆ­ಯಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ಸಂಬಂಧಿ ಸಮಸ್ಯೆಗಳು, ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಫ‌ಲಕ ಪ್ರದರ್ಶನ, ಬೀದಿನಾಟಕ, ಪ್ರಾತ್ಯಕ್ಷಿಕೆಗಳು ನಡೆಯುತ್ತವೆ. ಉಳಿದಂತೆ, ಕಾರ್ಮಿಕರ ದಿನ,  ಅಂತಾರಾಷ್ಟ್ರೀಯ ದಾದಿಯರ ದಿನ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ, ವಿಶ್ವ ಸಂಗೀತ ಉಪಕರಣಗಳ ದಿನ, ವಿಶ್ವ ರೆಡ್‌ಕ್ರಾಸ್‌ ದಿನ, ವಿಶ್ವ ಟೆಲಿ ಕಮ್ಯುನಿಕೇಷನ್‌ ದಿನಾಚರಣೆಗಳಿಗೂ ಮೇ ಸಾಕ್ಷಿಯಾಗಲಿದೆ.

ಜೂನ್‌
ವೇಣು ಗೋಪಾಲ ಸ್ವಾಮಿ ರಥೋತ್ಸವ: ಇತಿಹಾಸ ಪ್ರಸಿದ್ದ ಮಲ್ಲೇಶ್ವರದ ವೇಣುಗೋಪಾಲ­ಸ್ವಾಮಿ ರಥೋತ್ಸವ. ಬೆಂಗಳೂರಿನ ಹಳೇ ಪ್ರದೇಶಗಳಲ್ಲಿ ಒಂದಾದ ಮಲ್ಲೇಶ್ವರಂನಲ್ಲಿ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ವೇಣುಗೋಪಾಲ ಸ್ವಾಮಿ ದೇವಾಲಯ­ದಲ್ಲಿ ಶತಮಾನಗಳಿಂದಲೂ ಪಾರಂಪರಿಕವಾಗಿ  ಈ ರಥೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಬೆಂಗಳೂರಿನ ನಾನಾನ ಭಾಗಗಳಿಂದ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ.

ವೆಂಕಟರಮಣಸ್ವಾಮಿ ರಥೋತ್ಸವ: ಸುಪ್ರಸಿದ್ಧ ಕೋಟೆ ವೆಂಕಟರಮಣ ಸ್ವಾಮಿ ರಥೋತ್ಸವ, 1689 ರಲ್ಲಿ ಡ್ರಾವಿಡ ಮತ್ತು ವಿಜಯನಗರ ಅರಸರ ಶೈಲಿಯಲ್ಲಿ ನಿರ್ಮಾಣ­ವಾಗಿರುವ ದೇವಸ್ಥಾನವನ್ನು ಮೈಸೂರಿನ ಮಹಾರಾಜ ಚಿಕ್ಕದೇವರಾಜ ಒಡೆಯರ್‌ ಕಟ್ಟಿಸಿದ್ದಾರೆ.  ಈ ದೇವಾಲಯದಲ್ಲಿ ಪ್ರತಿವರ್ಷ ರಥೋತ್ಸವ ನಡೆಯುತ್ತದೆ.

ಜುಲೈ
ಕೆಂಡದ ಬಿಸಿಲು ದಿನ: 
ನಗರದಲ್ಲಿ ಇತ್ತಿಚಿಗೆ ಪ್ರಚಲಿತಕ್ಕೆ ಬರುತ್ತಿರುವ ಕೆಂಡದ ಬಿಸಿಲು ದಿನ ಯುವಸಮೂಹದಲ್ಲಿ ವಿಶೇಷತೆ ಪಡೆದಿದೆ.  ಈ  ದಿನ ಜನರು  ತಂಪು ತಾಣಗಳನ್ನು ನೆಚ್ಚಿಕೊಳ್ಳುತ್ತಾರೆ. ಮಾಲ್‌ಗ‌ಳು, ವಿಲ್ಲಾ, ಅಪಾರ್ಟ್‌ಮೆಂಟ್‌ ಸೇರಿದಂತೆ ಕಾಸ್ಮೋಪಾಲಿಟನ್‌ ಜನವಸತಿಗಳಲ್ಲಿ ತಂಪು ಪಾನೀಯ ಕುಡಿಯುವ ಸ್ಪರ್ಧೆ, ಜಲಕ್ರೀಡೆಗಳ ಆಯೋಜನೆ ನಡೆಯುತ್ತದೆ.

ರಾಷ್ಟ್ರೀಯ ವೈದ್ಯರ ದಿನ: ನಗರದಲ್ಲಿ ಖಾಸಗಿ ಆಸ್ಪತ್ರೆಗಳು, ರೋಟರಿ ಕ್ಲಬ್‌ಗಳು ಹಾಗೂ ಸಂಘ-ಸಂಸ್ಥಗಳಿಂದ ವಿಶೇಷ ಕಾರ್ಯಕ್ರಮಗಳ ಆಯೋಜನೆ, ಸಾಧಕ ವೈದ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತವೆ.

ವಿಶ್ವ ಜನಸಂಖ್ಯಾ ದಿನಾಚರಣೆ: ಈ ದಿನ ನಗರದಲ್ಲಿ ಸರ್ಕಾರದ ಜೊತೆಗೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ­ಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸು­ತ್ತವೆ. ಜನಸಂಖ್ಯಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಜಾಥಾ, ವಾಕಾಥಾನ್‌, ಬೈಕ್‌ ರ್ಯಾಲಿ ಜೊತೆಗೆ ವಿಚಾರಸಂಕಿರಣಗಳ ಆಯೋಜನೆ.

ಆಗಸ್ಟ್‌
ಸ್ವಾತಂತ್ಯೋತ್ಸವ: ಸ್ವಾತಂತ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫ‌ಲಪುಷ್ಪ ಪ್ರದರ್ಶನ ನಡೆಯುತ್ತದೆ. ಮೈಸೂರು ಉದ್ಯಾನಕಲಾ ಸಂಘವು ತೋಟಗಾ­ರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಫ‌ಲಪುಷ್ಪ ಪ್ರದರ್ಶನ ರಾಜಧಾನಿಯಲ್ಲಿ ಅತ್ಯಂತ ಜನಪ್ರಿಯ ಪಡೆದಿದೆ.

ಫ‌ಲಪುಷ್ಪ ಪ್ರದರ್ಶನ: ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘವು ಗಣರಾಜ್ಯೋತ್ಸವದ ಅಂಗವಾಗಿ ಸಸ್ಯಕಾಶಿ ಲಾಲ್ಬಾಗ್‌ನಲ್ಲಿ ಆಯೋಜಿಸುವ ಹತ್ತು ದಿನಗಳ ಫ‌ಲಪುಷ್ಪ ಪ್ರಮುಖ ಆಕರ್ಷಣೆ. ಲಕ್ಷಾಂತರ ಹೂಗಳಲ್ಲೇ ಮೂಡಿದ ಪ್ರತಿಕೃತಿಗಳು, ತರಕಾರಿ, ಹಣ್ಣುಗಳಲ್ಲಿ ರೂಪುಗೊಳ್ಳುವ ಇಕೆಬಾನ ಕಲೆ ಗಮನ ಸೆಳೆಯಲಿವೆ. ನಗರದ ಜನತೆ ಮಾತ್ರವಲ್ಲದೆ ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗೆಂದೇ ಸಾಕಷ್ಟು ಮಂದಿ ಭೇಟಿ ನೀಡುವುದು ವಿಶೇಷ.

ಉಳಿದಂತೆ, ಸಜ್ಜನ್‌ರಾವ್‌ ಸರ್ಕಲ್‌ನ ಶ್ರೀವಾಸವಿ ಕಾಂಡಿಮೆಂಟ್ಸ್‌ ವತಿಯಿಂದ ಜನವರಿ 4 ರಿಂದ 15 ರ ವರೆಗೆ ವಿವಿ ಪುರಂನ ಸಜ್ಜನ್‌ರಾವ್‌ ವೃತ್ತದಲ್ಲಿ “ಅವರೆ ಕಾಯಿ ಮೇಳ’ ನಡೆಯಲಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ವಜ್ರಮಹೋತ್ಸವದ ಅಂಗವಾಗಿ  ಜ. 2ರಿಂದ 31ರವರೆಗೆ ನಗರದ ಸ್ವಾತಂತ್ರ್ಯ ಉದ್ಯಾನದ ಪೀಪಲ್‌ ಪ್ಲಾಜಾನಲ್ಲಿ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಸ್ವಾತಂತ್ರ್ಯ ಯೋಧರು, ಸೇವಾದಳ ವತಿಯಿಂದ ಕ್ವಿಂಟ್‌ ಇಂಡಿಯಾ ದಿನಾಚರಣೆ ಅಂಗವಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸ್ವಾತಂತ್ಯ ಉದ್ಯಾನವನ, ಗಾಂಧಿಭವನ, ಮಹಾತ್ಮಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಮುಂಭಾಗ ಕಾರ್ಯಕ್ರಮಗಳು ನಡೆಯಲಿವೆ.  ಉಳಿದಂತೆ, ಹಿಂದೂ ಪರ ಸಂಘಟನೆಗಳಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ,  ಅಂತಾರಾಷ್ಟ್ರೀಯ ಯುವಕರ ದಿನಾಚರಣೆ, ರಾಘವೇಂದ್ರಸ್ವಾಮಿ ಆರಾಧನೆ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ.

ಸೆಪ್ಟೆಂಬರ್‌
ಶಿಕ್ಷಕರ ದಿನ: ಇನ್ನರ್‌ವ್ಹೀಲ್‌ ಕ್ಲಬ್‌ ಆಫ್ ಬೆಂಗಳೂರು ಸೌತ್‌, ರೋಟರಿ ಕ್ಲಬ್‌, ಶಿಕ್ಷಕರ ಸಂಘದಿಂದ  ನಗರದಲ್ಲಿ ಉತ್ತಮ ಕಾರ್ಯನಿರ್ವಹಿಸಿದ  ಶಿಕ್ಷಕ ರಿಗೆ ಪ್ರಶಸ್ತಿ ಪುರಸ್ಕಾರ, ಗುರು ವಂದನೆ ಕಾರ್ಯಕ್ರಮಗಳು ನಡೆಯಲಿದೆ.

ಅಂತರರಾಷ್ಟ್ರೀಯ ಸಾಕ್ಷರತಾ ದಿನ: ಪ್ರಥಮ್‌ ಬುಕ್ಸ್‌ ಸಂಸ್ಥೆಯಿಂದ ಸಾಕ್ಷರತೆ ಕುರಿತು ಅರಿವು, ಪುಸ್ತಕ ಓದುವುದು, ಅನಾಥ ಮಕ್ಕಳಿಗೆ ಅಕ್ಷರ ಕಲಿಕೆ, ಉಪನ್ಯಾಸ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. 

ಗಣೇಶ ಚತುರ್ಥಿ: ಗಣೇಶ ಹಬ್ಬದ ಪ್ರಯುಕ್ತ ನಗರದ ಹಲವೆಡೆ ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಗಣಪ ಮೂರ್ತಿಗಳ ವಿಸರ್ಜನೆ ನಡೆಯುತ್ತದೆ. ಬಸವನಗುಡಿಯ ವಿದ್ಯಾರಣ್ಯ ಯುವಕರ ಸಂಘವು ಪ್ರತಿವರ್ಷ ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಸಿ ಸಂಗೀತೋತ್ಸವ ಆಯೋಜಿಸುತ್ತದೆ. ದಂಡು ಪ್ರದೇಶ, ಚಿಕ್ಕಪೇಟೆ, ಜೆಸಿ ನಗರಲ್ಲಿ ಸಾಮೂಹಿಕ ಗಣಪ ಮೂರ್ತಿಗಳ ವಿಸರ್ಜನೆ ನಡೆಯುತ್ತದೆ.
ಉಳಿದಂತೆ, ಅಂತರರಾಷ್ಟ್ರೀಯ ಶಾಂತಿ ದಿನಾಚರಣೆ,  ಮೊಹರಂ ಸಹ ಸೆಪ್ಟೆಂಬರ್‌ ತಿಂಗಳಲ್ಲಿ ನಗರದಲ್ಲಿ ಆಚರಿಸಲಾಗುವುದು.

ಅಕ್ಟೋಬರ್‌
ಜೆಸಿ ನಗರ ದಸರಾ: ಮೈಸೂರು ದಸರಾ ಮಾದರಿಯಲ್ಲೇ ಬೆಂಗಳೂರಿನ ಜೆಸಿ ನಗರದಲ್ಲೂ ಅದ್ಧೂರಿ ದಸರಾ ಆಚರಣೆಯಾಗುತ್ತದೆ. ನವರಾತ್ರಿಯ ದಿನದಂದು ಬೆಂಗಳೂರು ದಂಡು ಪ್ರದೇಶ ಸೇರಿ ಸುತ್ತಮುತ್ತಲ ಪ್ರದೇಶಗಳಿಂದ ದೇವರ ಉತ್ಸವ ಮೂರ್ತಿಗಳು ಅಲ್ಲಿಗೆ ಆಗಮಿಸಿ ಮೆರವಣಿಗೆ ನಡೆಯಲಿದೆ.

ದುರ್ಗಾ ಪೂಜೆ: ಇದೇ ಸಂದರ್ಭದಲ್ಲಿ ನಗರದ ಬೆಂಗಾಳಿ ಅಸೋಸಿಯೇಷನ್‌ ವತಿಯಿಂದ ದುರ್ಗಾ ಪೂಜೆ ಸಹ ನಗರದಲ್ಲಿ ನಡೆಯುತ್ತದೆ. ನಂತರ ನೃತ್ಯ, ಮೆರವಣಿಗೆ ಮೂಲಕ ಅಲಸೂರು ಕೆರೆಯಲ್ಲಿ ದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತದೆ. ಮನೆಗಳಲ್ಲಿ ನವರಾತ್ರಿ ಬೊಂಬೆಗಳ  ಪ್ರದರ್ಶನವೂ ವಿಶೇಷ. ಉಳಿದಂತೆ,  ಜೀವನ್‌ ವಿಜ್ಞಾನ ದಿವಸ್‌, ತ್ಯಾಗರಾಜರ  ಆರಾಧನೆ, ಅಂತಾರಾಷ್ಟ್ರೀಯ ಹಿರಿಯರ ದಿನಾಚರಣೆ ಡಿಸೆಂಬರ್‌ನಲ್ಲಿ ನಡೆಯಲಿವೆ.

ಬೆಂಗಳೂರು ಸಾಹಿತ್ಯ ಹಬ್ಬ: ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಬೆಂಗಳೂರು ಸಾಹಿತ್ಯ ಹಬ್ಬ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಸಮಕಾಲೀನ ವಿಚಾರಗಳ ಬಗ್ಗೆ ಚರ್ಚೆ,ಸಂವಾದ, ವಿಷಯ ಮಂಡನೆ ಸೇರಿ ಕವಿ-ಸಾಹಿತಿ-ಚಿಂತಕರ ನಡುವಿನ ಜುಗಲ್‌ಬಂದಿ ನಡೆಯುವ ಸಾಹಿತ್ಯ ಹಬ್ಬ ಬೆಂಗಳೂರಿನ ಮತ್ತೂಂದು ಆಕರ್ಷಣೆ. ರಾಷ್ಟ್ರಮಟ್ಟದ ಬುದ್ಧಿ ಜೀವಿಗಳು, ಚಿಂತಕರು, ಸಾಹಿತಿಗಳು  ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.

ನವೆಂಬರ್‌
ಬಸವನಗುಡಿ ಕಡಲೇಕಾಯಿ ಪರಿಷೆ: ರಾಜಧಾನಿ ಬೆಂಗಳೂರಿನಲ್ಲಿ ಕರಗ ನಂತರ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಬಸವನಗುಡಿ ಕಡಲೇಕಾಯಿ ಪರಿಷೆ. ಗ್ರಾಮೀಣ ಸೊಗಡು ನೆನಪಿಸುವ  ಈ ಪರಿಷೆಗೆ ಬಹುಪ್ರಸಿದ್ಧ. ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಕಾರ್ತಿಕ ಮಾಸದ ಕಡೆಯ ಸೋಮವಾರದಂದು  ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ನಡೆಯುತ್ತದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಡಲೇಕಾಯಿ ಬೆಳೆದ ರೈತರು ವಾರ ಕಾಲ ನಡೆಯುವ ಪರಿಷೆಯಲ್ಲಿ ತಂದು ಮಾರಾಟ ಮಾಡುತ್ತಾರೆ. ಜತೆಗೆ ಸಮೀಪದಲ್ಲೇ ಇರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಆ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಐಟಿ ಬಿಜ್‌: ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಟಿ ಕ್ಯಾಪಿಟಲ್‌, ಸಿಲಿಕಾನ್‌ ವ್ಯಾಲಿ ಎಂದೇ ಹೆಸರು ಪಡೆದಿರುವ ಬೆಂಗಳೂರಿನಲ್ಲಿ ಐಟಿ ಬಿಝ್ ನಡೆಯಲಿದೆ. ಅರಮನೆ ಮೈದಾನ ಅಥವಾ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯಲಿರುವ ಐಟಿ ಬಿಝ್ನಲ್ಲಿ ಜಗತ್ತಿನ ಖ್ಯಾತ ಐಟಿ ಉದ್ಯಮದಾರರು ಭಾಗವಹಿಸಲಿದ್ದಾರೆ. 1996ರಲ್ಲಿ ಆರಂಭಗೊಂಡ ಬೆಂಗಳೂರು ಐಟಿ ಬಿಝ್ ನಿರಂತರವಾಗಿ ನಡೆಯುತ್ತಿದ್ದು  ಈ ಬಾರಿಯದು 21 ನೆಯದು.ಉಳಿದಂತೆ, ಮಕ್ಕಳ ದಿನಾಚರಣೆ,  ಈದ್‌ ಮೀಲಾದ್‌ ನವೆಂಬರ್‌ ತಿಂಗಳಲ್ಲಿ ನಡೆಯಲಿದೆ.

ಡಿಸೆಂಬರ್‌
ಕ್ರಿಸ್‌ಮಸ್‌: ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಸಡಗರದಿಂದ ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ಪ್ರಯುಕ್ತ  ಸೆಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ಬೃಹತ್‌ ಕೇಕ್‌ ಮೇಳ ನಡೆಯುವುದು ಪ್ರತಿವರ್ಷದ ವಿಶೇಷ. ಜತೆಗೆ, ಕ್ರಿಸ್‌ಮಸ್‌ ಪ್ರಯುಕ್ತ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಯಲ ಸ್ಟ್ರೀಟ್‌ಗಳು ದೀಪಾಲಂಕಾರಗಳಿಂದ ಕಂಗೊಳಿಸಲಿವೆ. ಶಿವಾಜಿನ ನಗರದ ಸೆಂಟ್‌ ಮೇರಿ ಬೆಸಿಲಿಕಾ ಚರ್ಚ್‌,  ಕಾರ್ಪೋರೇಷನ್‌ ವೃತ್ತದ ಹಡ್ಸನ್‌ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.

ವೈಕುಂಠ ಏಕಾದಶಿ: ಬೆಂಗಳೂರಿನಲ್ಲಿ ವೈಕುಂಠ ಏಕಾದಶಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ.  ಐತಿಹಾಸಿಕ ಪ್ರಸಿದ್ಧ ಕೋಟೆ  ಪ್ರಸನ್ನ ವೆಂಕಟರಮಣ ದೇವಾಲಯ,ಜೆಪಿ ನಗರದ ತಿರುಮಲಗಿರಿ ಲಕ್ಷ್ಮೀ ವೆಂಕ ಟೇಶ್ವರ ಸ್ವಾಮಿ, ವೈಯಾಲಿಕಾವಲ್‌ನ ತಿರುಮಲ ತಿರುಪತಿ ದೇವಾಲಯ, ಇಸ್ಕಾನ್‌ ದೇವಾಲಯ ಸೇರಿದಂತೆ ವಿಶೇಷ ಪೂಜೆ  ನಡೆಯಲಿದೆ. ಉಳಿದಂತೆ ಕುವೆಂಪು ದಿನಾಚರಣೆ, ಆಪರಾಧ ತಡೆ ಮಾಸಾಚರಣೆ ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next