ಗಂಟೆ, ದಿನ, ಋತು ಬದಲಾದಂತೆ ಫ್ಯಾಷನ್ ಕೂಡ ಬದಲಾಗ್ತಿರುತ್ತದೆ. ಈಗಿದ್ದ ಫ್ಯಾಷನ್ ನಾಳೆ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಯಾವಾಗ ಬೇಕಾದರೂ ಹಳೇ ಫ್ಯಾಷನ್, ಟ್ರೆಂಡ್ ಆಗಬಹುದು. ಇಂದಿನ ದಿನಗಳಲ್ಲಿ ಫ್ಯಾಷನ್ ಗೆ ತಕ್ಕಂತೆ ನಾವು ಬದಲಾಗಬೇಕು ನಿಜ. ಹಾಗಂತ ಎಲ್ಲ ಫ್ಯಾಷನ್ ಅನ್ನು ನಾವು ಟ್ರೈ ಮಾಡಲು ಹೋದರೆ ತೊಂದರೆ ಆಗಬಹುದು. ಇರುವ ಸುಂದರ ಲುಕ್ ಹಾಳಾಗಬಹುದು. ಹಾಗಾಗಿ ಫ್ಯಾಷನ್ ಮಾಡುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.
ಯುವಜನತೆಗೆ ಫ್ಯಾಷನ್ ಬಗ್ಗೆ ಆಸಕ್ತಿ ಹೆಚ್ಚು. ಅದರಲ್ಲೂ ಹುಡುಗಿಯರು ಹೊಸ ಹೊಸ ಫ್ಯಾಷನ್ ಮೇಲೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಹೊಸ ಫ್ಯಾಷನ್ ಬರ್ತಿದ್ದಂತೆ ಅದನ್ನು ಫಾಲೋ ಮಾಡುತ್ತಾರೆ. ಅನೇಕ ಬಾರಿ ಫ್ಯಾಷನ್ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಲ್ಪಸ್ವಲ್ಪ ತಿಳಿದುಕೊಂಡು ಪ್ರಯತ್ನಕ್ಕೆ ಕೈ ಹಾಕಿ ಯಡವಟ್ಟು ಮಾಡಿಕೊಳ್ಳುತ್ತಾರೆ. ಇದರಿಂದಾಗಿ ಅವರ ಲುಕ್ ಸಂಪೂರ್ಣ ಹಾಳಾಗುತ್ತದೆ. ಫ್ಯಾಷನ್ ಫಾಲೋ ಮಾಡುತ್ತೇನೆ ಎನ್ನುವವರು ಅದಕ್ಕೆ ಸಂಬಂಧಿಸಿದ ಕೆಲ ಸಂಗತಿಯನ್ನು ಅವಶ್ಯಕವಾಗಿ ತಿಳಿದಿರಬೇಕು. ಆಗ ಹೊಸ ಟ್ರೆಂಡ್ ಗೆ ಹೊಂದಿಕೊಳ್ಳುವುದು ಸುಲಭ. ಇಂದು ಫ್ಯಾಷನ್ ಅನುಸರಿಸುವಾಗ ಯಾವ ತಪ್ಪು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಆ್ಯಕ್ಸಸರಿಸ್ (Accessories): ನಾವು ಧರಿಸುವ ಬಟ್ಟೆ (Clothes) ಮಾತ್ರವಲ್ಲ ಅದಕ್ಕೆ ತಕ್ಕಂತೆ ನಾವು ಧರಿಸುವ ಕಿವಿಯೋಲೆ, ಬಳೆ, ಚಪ್ಪಲಿ, ಸರ ಎಲ್ಲವೂ ಇಲ್ಲಿ ಮಹತ್ವ ಪಡೆಯುತ್ತದೆ. ಆದರೆ ಕೆಲವರು ಬಟ್ಟೆಗೆ ಮಾತ್ರ ಗಮನ ನೀಡುತ್ತಾರೆ. ಯಾವುದೋ ಡ್ರೆಸ್ ಗೆ ಇನ್ಯಾವುದೋ ಎಕ್ಸಸರಿಸ್ ಹಾಕಿದರೆ ಅದು ಲುಕ್ ಹಾಳು ಮಾಡುತ್ತದೆ. ಸಿಲ್ವರ್ ಡ್ರೆಸ್ ಗೆ ಗೋಲ್ಡ್ ಕಲರ್ ಆ್ಯಕ್ಸಸರಿಸ್ ಹಾಕಿದ್ರೆ ನಿಮ್ಮ ಸೌಂದರ್ಯ ಹಾಳಾದಂತೆ. ಹಾಗಾಗಿ ಯಾವ ಡ್ರೆಸ್ ಗೆ ಯಾವ ಆ್ಯಕ್ಸಸರಿಸ್ ಬಳಸಬೇಕು ಎಂಬುದನ್ನು ತಿಳಿದಿರಿ. ಇದೇ ಎಂಬ ಕಾರಣಕ್ಕೆ ಯಾವ್ದ್ಯಾವ್ದೋ ಹಾಕಬೇಡಿ.
ಬಣ್ಣ: ಕೆಲವೊಮ್ಮೆ ಒಂದೊಂದು ಕಲರ್ (Color) ಟ್ರೆಂಡ್ ಆಗುತ್ತಿರುತ್ತದೆ. ಎಲ್ಲರೂ ಧರಿಸ್ತಾರೆ ಎನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲ ಅಥವಾ ನಿಮಗೆ ಹೊಂದಿಕೆಯಾಗ್ತಿಲ್ಲವೆಂದಾದರೆ ಆ ಬಣ್ಣದ ಬಟ್ಟೆ ಧರಿಸಬೇಕಾಗಿಲ್ಲ. ನೀವು ಧರಿಸುವ ಬಟ್ಟೆಯಲ್ಲಿ ನೀವೆಷ್ಟು ಆರಾಮವಾಗಿರುತ್ತೀರಿ ಎನ್ನುವುದು ಮುಖ್ಯ. ಹಾಗೆ ಇದೇ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.
ಬ್ಲೌಸ್ (Blouse) : ಮಾಡೆಲ್ ಗಳು ಚೆಂದದ, ಸ್ಲಿವ್ ಲೆಸ್ ಬ್ಲೌಸ್ ಧರಿಸುತ್ತಾರೆ ಅಂತಾ ನೀವು ಆ ಪ್ರಯತ್ನಕ್ಕೆ ಹೋಗಬೇಡಿ. ನಿಮಗೆ ಅಭ್ಯಾಸವಿಲ್ಲವೆಂದರೆ ಈ ಬ್ಲೌಸ್ ನಿಮ್ಮ ಲುಕ್ ಹಾಳು ಮಾಡುತ್ತದೆ.
ಬಟ್ಟೆ (Clothes) : ನಾವು ಧರಿಸುವ ಉಡುಪು ವಿಚಾರದಲ್ಲೂ ಇದು ಸತ್ಯ. ಸಾರ್ವಜನಿಕ ಸ್ಥಳದಲ್ಲಿ ಮುಜುಗರ ತರಿಸುವ ಅಥವಾ ನಿಮಗೆ ಅಭ್ಯಾಸವಿಲ್ಲದ ಡ್ರೆಸ್ ಧರಿಸುವ ಪ್ರಯತ್ನ ಬೇಡ. ಕೆಲವರಿಗೆ ಶಾರ್ಟ್ ಸ್ಕರ್ಟ್ ಧರಿಸಿ ಅಭ್ಯಾಸವಿರುವುದಿಲ್ಲ. ಫ್ಯಾಷನ್ ಹೆಸರಿನಲ್ಲಿ ಈ ಡ್ರೆಸ್ ಧರಿಸಿ ಮುಜುಗರಕ್ಕೊಳಗಾಗುತ್ತಾರೆ. ಆಗ ನಮ್ಮ ಗಮನ ಪೂರ್ತಿ ಡ್ರೆಸ್ ಮೇಲಿರುತ್ತದೆ. ಆದ್ದರಿಂದ ಫ್ಯಾಷನ್ ಹೆಸರಿನಲ್ಲಿ ನಮಗೆ ಸರಿಹೊಂದದ ರೀತಿಯಲ್ಲಿ ತಯಾರಾಗಿ ಮುಜುಗರಕ್ಕೊಳಗಾಗುವುದ್ದಕ್ಕಿಂತ, ನಮಗೆ ಸರಿಹೊಂದುವ ಬಟ್ಟೆ, ಆಭರಣ ಧರಿಸುವುದು ಒಳಿತು.
-ಶ್ವೇತಾ ಮುಂಡ್ರುಪ್ಪಾಡಿ.