Advertisement

ತೆರಿಗೆ ಸಂಗ್ರಹಕ್ಕೆ ತೊಡಕಾದ ಸಾಫ್ಟ್ ವೇರ್‌

11:03 AM Apr 30, 2022 | Team Udayavani |

ಕುಂದಾಪುರ: ರಾಜ್ಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿರೀಕ್ಷಿತ ತೆರಿಗೆ ಸಂಗ್ರಹಕ್ಕೆ ಸಾಫ್ಟ್ವೇರ್‌ ಸಮಸ್ಯೆಯಿಂದಾಗಿ ತೊಡಕಾಗಿದೆ. ಎಪ್ರಿಲ್‌ ತಿಂಗಳಲ್ಲಿ ಸಾಧ್ಯವಾದಷ್ಟು ಗುರಿ ಸಾಧಿಸಬೇಕು ಎನ್ನುವ ಸರಕಾರ ಅದಕ್ಕೆ ಪೂರಕ ತಂತ್ರಾಂಶ ವ್ಯವಸ್ಥೆ ಕಲ್ಪಿಸದೆ, ಸಿದ್ಧತೆ ಮಾಡದೇ ಎಡವಟ್ಟು ಮಾಡಿಕೊಂಡ ಕಾರಣ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ನಂತಹ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಮಸ್ಯೆಯಾಗಿದೆ.

Advertisement

ಗುರಿ

ಸಾಮಾನ್ಯವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತೆರಿಗೆ ಸಂಗ್ರಹಕ್ಕೂ ಶೇ. 100ರ ಗುರಿಯನ್ನೇ ನೀಡಲಾಗುತ್ತದೆ. ಆದರೆ ಪೂರ್ಣಪ್ರಮಾಣ ತಲುಪುವ ಸಂಸ್ಥೆಗಳು ಕಡಿಮೆ. ಹಾಗಿದ್ದರೂ ಗುರಿ ಸಾಧಿಸಬೇಕು ಎನ್ನುವ ದೃಷ್ಟಿಯಲ್ಲಿ ಎಪ್ರಿಲ್‌ ತಿಂಗಳಿನಲ್ಲಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡಲಾಗುತ್ತದೆ. ಶೇ.5 ರಿಯಾಯಿತಿ ನೀಡುವುದರಿಂದ ಲಕ್ಷಗಟ್ಟಲೆ ತೆರಿಗೆ ಇರುವ ಕಟ್ಟಡಗಳ ಮಾಲಕರಿಗೆ, ಮಾಣಿಜ್ಯ ವ್ಯವಹಾರಸ್ಥರಿಗೆ ಅನುಕೂಲವಾಗುತ್ತದೆ.

ಸಮಸ್ಯೆ

ತಿಂಗಳಿನಲ್ಲಿ ಸರಿಸುಮಾರು ಅರ್ಧದಷ್ಟು ದಿನ ತಂತ್ರಾಂಶ ಸಮಸ್ಯೆ ಇತ್ತು. ಇದರಿಂದ ತೆರಿಗೆ ಪಾವತಿ ಸಾಧ್ಯವಾಗಲಿಲ್ಲ. ತಂತ್ರಾಂಶ ಮೇಲ್ದರ್ಜೆಗೇರಿಸಲು 3 ದಿನಗಳು ಹಿಡಿದಿದ್ದವು. ಶೇ.10 ತೆರಿಗೆ ಏರಿಕೆಗೆ ಮತ್ತಷ್ಟು ದಿನ ಆಯಿತು. ಮತ್ತೆ 3 ದಿನ ಸರಿ ಇರಲಿಲ್ಲ. ಮತ್ತೆ 3 ದಿನ ಪ್ರತೀ ಗಂಟೆಗೊಮ್ಮೆ ಹ್ಯಾಂಗ್‌ ಆಗುತ್ತಿತ್ತು. ಒಟ್ಟು 9 ಸರಕಾರಿ ರಜೆಗಳು ಸಾಲು ಸಾಲು ಇದ್ದವು. 1 ದಿನ ಬ್ಯಾಂಕ್‌ ವ್ಯವಹಾರ ಇರಲಿಲ್ಲ. ಈ ಎಲ್ಲ ಕಾರಣಗಳಿಂದ ಒಟ್ಟು 16 ದಿನಗಳ ಕಾಲ ತೆರಿಗೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ.

Advertisement

ವಿಸ್ತರಣೆ ಇಲ್ಲ

ಸಾಮಾನ್ಯವಾಗಿ ಎ.30ರ ವರೆಗೆ ಮಾತ್ರ ಶೇ.5ರ ರಿಯಾಯಿತಿ ಇರುತ್ತದೆ. ಆದರೆ ಕೋವಿಡ್‌ನಿಂದಾಗಿ ಲಾಕ್‌ಡೌನ್‌ ಇದ್ದ ಕಾರಣ ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಮತ್ತೂ 2 ತಿಂಗಳು ರಿಯಾಯಿತಿ ಅವಧಿ ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ಎಪ್ರಿಲ್‌ ತಿಂಗಳಿನಲ್ಲಿ ಲಾಕ್‌ಡೌನ್‌ ಇಲ್ಲದ ಕಾರಣ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ. ಈವರೆಗೂ ಅಂತಹ ಆದೇಶವೂ ಬಂದಿಲ್ಲ.

ಮೊದಲೇ ಯಾಕೆ

ಒಟ್ಟು ತೆರಿಗೆ ಶೇ.30ರಷ್ಟಾದರೂ ಆರ್ಥಿಕ ವರ್ಷದ ಮೊದಲ ತಿಂಗಳು ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗು ತ್ತದೆ. ಏಕೆಂದರೆ ಪುರಸಭೆಯ ಅನೇಕ ಖರ್ಚು ವೆಚ್ಚಗಳಿಗೆ ಈ ತೆರಿಗೆ ಹಣವೇ ಆಧಾರವಾಗುತ್ತದೆ. ವೇತನ, ನಿರ್ವಹಣೆ, ತುರ್ತು ಕಾಮಗಾರಿ ಸೇರಿದಂತೆ ಸ್ಥಳೀಯ ಅನುದಾನ ಬಳಕೆಗೆ ತೆರಿಗೆ ಹಣವೇ ಮೂಲ. ಮೊದಲೇ ಸಂಗ್ರಹ ಮಾಡಿಟ್ಟುಕೊಳ್ಳದಿದ್ದರೆ ವೇತನ ಕೊಡಲೂ ದುಡ್ಡಿಲ್ಲ ಎಂದಾಗುತ್ತದೆ.

ರಜಾದಿನವೂ ಕೆಲಸ

ತೆರಿಗೆ ಸಂಗ್ರಹದಲ್ಲಿ ಪ್ರಗತಿ ಇರಬೇಕೆಂಬ ಕಾರಣದಿಂದ ಇಲ್ಲಿನ ಪುರಸಭೆ ರಜಾ ಅವಧಿಯಲ್ಲೂ ಕೆಲಸ ಮಾಡಿದ್ದಾರೆ. ಕೆಲಸದ ದಿನಗಳಲ್ಲಿ ಫಾರಂ ಭರ್ತಿ ಮಾಡಿದ್ದಾರೆ. ದೊಡ್ಡ ವಾಣಿಜ್ಯ ಪತಿಗಳ ಬಳಿ ತೆರಳಿ ಚೆಕ್‌ ಸಂಗ್ರಹಿಸಲು ಸ್ವತಃ ಮುಖ್ಯಾಧಿಕಾರಿ, ಕಂದಾಯ ನಿರೀಕ್ಷಕರ ತಂಡ ತೆರಳಿದೆ. ಇದೆಲ್ಲ ಕಾರಣದಿಂದ 1 ಕೋ.ರೂ. ಗುರಿ ಹಾಕಿಕೊಂಡಿದ್ದರೂ 60 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ. ವರ್ಷಾಂತ್ಯದೊಳಗೆ 3 ಕೋ. ರೂ.ಗಳನ್ನು ಒಟ್ಟು 13,289 ಆಸ್ತಿಗಳ ಮೇಲೆ ಸಂಗ್ರಹಿಸಬೇಕಿದೆ.

ಸಂಗ್ರಹ ಕಾರ್ಯ ನಡೆದಿದೆ

ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಕಂದಾಯ ವಿಭಾಗ ಹಾಗೂ ನಾವು ಪ್ರತ್ಯೇಕ ತಂಡಗಳಾಗಿ ತೆರಳಿ ವಿನಂತಿ ಮಾಡಿ ಮುಂಗಡ ಪಾವತಿಗೆ ಶ್ರಮಿಸಿದ್ದೇವೆ. ತಂತ್ರಾಂಶದ ಸಮಸ್ಯೆ ಇದ್ದರೂ ರಜಾ ದಿನಗಳಲ್ಲೂ ಕೆಲಸ ನಿರ್ವಹಿಸಿ ತೆರಿಗೆ ಸರಕಾರಕ್ಕೆ ಸರಿಯಾಗಿ ಪಾವತಿಯಾಗುವಂತೆ ಸಿಬಂದಿ ಮಾಡಿದ್ದಾರೆ. ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next