ಬೆಂಗಳೂರು : ಕೋವಿಡ್ ನಡುವೆ ಈ ಬಾರಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೆ. 5 ರಂದು ಸಿಎಂ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದರು.
ತಜ್ಞರು ಜೊತೆ ಇಂದು ನಡೆದ ಸಭೆಯ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ ಸಚಿವರು, ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆಗೆ ನಿಷೇಧ ಹೇರದೇ ಅವಕಾಶ ನೀಡಬೇಕೆಂಬ ಅಭಿಪ್ರಾಯಕ್ಕೆ ಕೇಳಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೆ. 5 ರಂದು ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಘಟಕರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಚಿತ್ರದುರ್ಗಗಳಲ್ಲಿ ಜೋರಾಗಿ ಗಣಪತಿ ಹಬ್ಬ ಆಚರಿಸುತ್ತಾರೆ. ಗಣೇಶೋತ್ಸವ ಭಾವನಾತ್ಮಕ ವಿಚಾರ. ಎಲ್ಲ ಸಂಕಷ್ಟಗಳನ್ನು ಪರಿಹರಿಸುವ ಗಣಪತಿ ಹಬ್ಬ. ಎಲ್ಲ ಸಂಕಷ್ಟಗಳು ಪರಿಹಾರವಾಗಲಿ ಎಂದರು.
ಕೇರಳದಲ್ಲಿ ಪ್ರತಿದಿನ ಕೊವಿಡ್ ಹೆಚ್ಚಾಗುತ್ತಿದೆ. ಅಲ್ಲಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ ಒಂದು ವಾರ ಕ್ವಾರಂಟೈನ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.
ಕೊಡಗು, ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ವಿಕೇಂಡ್ ಕರ್ಫ್ಯೂ ಸಡಿಲಿಕೆ ಮಾಡಲಾಗುವುದು ಎಂದರು.