ಮಂಡ್ಯ: ಗ್ರಾಮದ ಕೆಲವರು ನಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದು, ದೇವಸ್ಥಾನದ ಪೂಜೆಗೆ ಅಡ್ಡಿಪಡಿಸುವುದಲ್ಲದೆ, ನಮ್ಮ ತೋಟದಲ್ಲಿರುವ ಕೊಳವೆ ಬಾವಿಯ ಪೈಪ್‌ಗ್ಳನ್ನು ನಾಶಪಡಿಸಿದ್ದಾರೆ ಎಂದು ಅರ್ಚಕ ಬಿ.ರವಿಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಬೇಗಮಂಗಲ ಗ್ರಾಮದಲ್ಲಿ ಶ್ರೀ ಭೈರವೇಶ್ವರ ಬಸವಣ್ಣ ದೇವಸ್ಥಾನದ ಪೂಜೆ 1987ರಿಂದ 3 ದಶಕಗಳಿಂದಲೂ ಲಿಂಗಾಯತ ಜನಾಂಗಕ್ಕೆ ಸೇರಿದ ಬಸವರಾಜು ಕುಟುಂಬದವರು ನೆರವೇರಿಸಿ ಕೊಂಡು ಬರುತ್ತಿದ್ದು, ಕಳೆದ ಎಂಟು ತಿಂಗಳಿನಿಂದ ಊರಿನಲ್ಲಿರುವ ಕೆಲವರು ವಿನಾಕಾರಣ ನಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದು, ಪೂಜೆಗೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮನ್ನು ಬೆದರಿಸಿ ನಾವು ಪೂಜೆ ಮಾಡುವ ಜಾಗಕ್ಕೆ ಮೈಲಾರ ಪಟ್ಟಣದ ನಂಜುಂಡ ಸ್ವಾಮಿ ಅವರಿಂದ ಪೂಜೆ ಮಾಡಿಸುತ್ತಿದ್ದಾರೆ ಎಂದು ದೂರಿದರು.
ಈ ವಿಷಯವಾಗಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ದೂರು ನೀಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಮ್ಮ ಪರವಾಗಿ ತೀರ್ಪು ಬಂದಿದ್ದರೂ ಪೂಜೆಗೆ ಗ್ರಾಮದ ಕೆಲವರು ಅವಕಾಶ ನೀಡುತ್ತಿಲ್ಲ. ತಾಲೂಕು ದಂಡಾಧಿಕಾರಿಗಳು ದೇವಸ್ಥಾನವನ್ನು ನಮ್ಮ ಸ್ವಾಧೀನಕ್ಕೆ ಬಿಡಿಸಿಕೊಡಲು ಬಂದಾಗಲೂ ತೊಂದರೆ ನೀಡಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ ಎಂದು ತಿಳಿಸಿದರು.
ಊರಿನಲ್ಲಿ ಲಿಂಗಾಯತ ವರ್ಗಕ್ಕೆ ಸೇರಿದ ಒಂದೇ ಒಂದು ಕುಟುಂಬವಿದೆ. ಕಿರುಕುಳ ನೀಡುತ್ತಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲದಲ್ಲಿ ವಾರ್ಷಿಕ 2-3 ಲಕ್ಷ ರೂ. ಸಂಗ್ರಹವಾಗುತ್ತಿದೆ. ಹುಂಡಿಯ ಹಣವನ್ನು ಗ್ರಾಮದ ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಹುಂಡಿಗೆ ಬೀಗ ಹಾಕುವಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಪ್ರಕಾರ ನಮಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟು ರಕ್ಷಣೆ ದೊರಕಿಸಿ ಕೊಡುವಂತೆ ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಬಸವರಾಜು, ನಾಗಮ್ಮ, ಕಾವ್ಯಶ್ರೀ ಇದ್ದರು.