Advertisement

Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ

10:23 AM Nov 01, 2024 | Team Udayavani |

ಭಾರತೀಯರ ಹಬ್ಬಗಳಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ದೀಪಾವಳಿ ಹಬ್ಬವು ಕೇವಲ ಒಂದು ಹಬ್ಬವಾಗಿರದೇ ಇದರ ಹಿಂದೆ ಅನೇಕ ರೀತಿಯಾದಂತಹ ವೈಶಿಷ್ಟ್ಯತೆಗಳಿವೆ. ಹಲವು ದಿನಗಳ ಕಾಲ ಆಚರಣೆಯಲ್ಲಿರುವುದರಿಂದ ದೀಪಾವಳಿ ಹಬ್ಬವನ್ನು ಹಬ್ಬಗಳ ರಾಜ ಎಂದು ಕರೆಯುತ್ತೇವೆ.

Advertisement

ದೀಪಾವಳಿ ಹಬ್ಬವೆಂದರೆ ಕೇವಲ ದೀಪಗಳನ್ನು ಉರಿಸುವುದು ಮಾತ್ರವಲ್ಲದೆ ಅನೇಕ ರೀತಿಯಾದ ಧಾರ್ಮಿಕ ಪ್ರಕ್ರಿಯೆಗಳು ಈ ಹಬ್ಬದಲ್ಲಿ ಅಡಗಿವೆ. ದೀಪಾವಳಿ ಹಬ್ಬದಂದು ಸಾಯಂಕಾಲ ಎಲ್ಲ ಮನೆಮನೆಗಳಲ್ಲಿ ದೀಪವನ್ನು ಹೊತ್ತಿಸಿ ಮರುದಿವಸ ಮಹಾಲಕ್ಷ್ಮೀ ಯನ್ನು ದೀಪದ ಮಧ್ಯದಲ್ಲಿ ಆರಾಧಿಸಿಕೊಂಡು ಒಂದು ತಿಂಗಳ ಪರ್ಯಂತ ಗೂಡು ದೀಪವನ್ನು ಸಿದ್ಧಪಡಿಸಿ ಭಗವಂತನಿಗೆ ಸಮರ್ಪಿಸುವ ಮಹಾಪುಣ್ಯ ಪದ ಕಾರ್ಯವೇ ದೀಪಾವಳಿಯ ವಿಶೇಷತೆಯಾಗಿದೆ.

ತುಲಾಯಾಮ್‌ ತಿಲ ತೈಲೆನ ಸಾಯಂಕಾಲೇ ಸಮಾಗತೆ

ಆಕಾಶ ದೀಪಂ ಯೋ ದಾದ್ಯಾತ್‌ ಮಾಸಮ್‌ ಏಕಮ್‌ ಹರಿ ಪ್ರತಿ

ಮಹತೀಮ್‌ ಶ್ರಿಯಮಾಪ್ನೋತಿ ರೂಪ ಸೌಭಾಗ್ಯ ಸಂಪದಾಂ

Advertisement

ಈ ಪ್ರಕಾರ ಒಂದು ತಿಂಗಳ ಪರ್ಯಂತ ಆಕಾಶ ದೀಪ ಅಂದರೆ ಗೂಡು ದೀಪವನ್ನು ನಾವು ಪೂರ್ವಕ್ಕೆ ಮುಖ ಮಾಡಿ ಹಚ್ಚಿಟ್ಟರೆ ಭಗವಂತ ಅತೀಯಾದ ಸೌಭಾಗ್ಯ ಸಂಪತ್ತುಗಳನ್ನು ಅನುಗ್ರಹಿಸುತ್ತಾನೆ ಎಂದು ಶಾಸ್ತ್ರಕಾರರು ತಿಳಿಸಿದ್ದಾರೆ.

ರಾತ್ರಿ ಶುದ್ಧ ಎಳ್ಳೆಣ್ಣೆಯಿಂದ ತುಡರು ಅಥವಾ ದೊಡ್ಡರು ಇದನ್ನು ಪ್ರಾರ್ಥಿಸಿ ಅಗ್ನಿ ಸಂಬಂಧಿತ ಸಮಸ್ಯೆಯಿಂದ ನಮ್ಮ ಹಿರಿಯರು ಯಾರಾದರೂ ಅಪಮೃತ್ಯು ಗೊಳಗಾದವರಿದ್ದರೆ ಈ ಜ್ಯೋತಿಯಿಂದ ಅವರಿಗೆ ಸದ್ಗತಿ ಸಿಗಲಿ ಎಂದು ಅಂದಿನ ದಿವಸ ಪ್ರಾರ್ಥನೆಯನ್ನು ಮಾಡಿ ಮರು ದಿವಸ ಕಾರ್ತಿಕ ಶುದ್ಧ ಪಾಡ್ಯದಿಂದ ಜಗತ್ತಿಗೆ ಆಧಾರ ಭೂತವಾದ ಗೋಪೂಜೆಯನ್ನು ಶಾಸ್ತ್ರೋಕ್ತ ರೀತಿಯಲ್ಲಿ ಮಾಡಿ ಅಂತರ್ಯ ಕೃಷ್ಣನನ್ನು ಅರ್ಚಿಸಿ ಸ್ತುತಿಸುವುದು ಈ ಹಬ್ಬದ ವೈಶಿಷ್ಟ್ಯವಾಗಿದೆ. ಪಾಡ್ಯದಿಂದ ಪೂಜೆಯನ್ನು ಆರಂಭಿಸಿ, ಕಾರ್ತಿಕ ಮಾಸದ ಕೊನೆಯ ತನಕ ನಿತ್ಯವೂ ಕೂಡ ಮನೆಯಲ್ಲಿ ದೀಪವನ್ನು ಹಚ್ಚಿ ಒಂದು ತಿಂಗಳ ಪರ್ಯಂತ ಆಚರಿಸುವ ದೀಪಾವಳಿಯು ಸನಾತನ ಧರ್ಮದ ಅತೀ ವೈಶಿಷ್ಟ್ಯ ಪೂರ್ಣವಾದ ಹಬ್ಬವಾಗಿದೆ.

ದೀಪಾವಳಿ: ಶ್ರೀ ಕೃಷ್ಣ ಭಗವಂತನು ನರಕಾದಿ ಹಲವು ಅಸುರರನ್ನು ಸಂಹರಿಸಿದ ಅನಂತರ ಜನರು ಸಂಭ್ರಮ ಆಚರಿಸುತ್ತಾರೆ. ಆ ಕಾಲದಲ್ಲಿ ಪ್ರತೀ ಮನೆಯಲ್ಲಿಯೂ ಕೂಡ ದೀಪವನ್ನು ಬೆಳಗಿಸಿ ಆನಂದ ಪಟ್ಟಿದ್ದರು ಎಂದು ಶಾಸ್ತ್ರದಲ್ಲಿ ಉಲ್ಲೇಖೀಸಲ್ಪಟ್ಟಿದೆ.

ಅದೇ ಪ್ರಕಾರದಲ್ಲಿ ಈಗಿನ ಕಾಲದಲ್ಲಿ ನರಕಾಸುರ ಎಂಬ ನಮ್ಮ ಕಷ್ಟ ಕಾರ್ಪಣ್ಯಗಳು ನಿವಾರಣೆ ಯಾಗಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಅಶ್ವಿ‌ನಿ ಕೃಷ್ಣ ಚತುರ್ದಶಿ ಎಂದು ಸೂರ್ಯಸ್ತದ ಸಮಯದಲ್ಲಿ ಮನೆಯ ಒಳಗೂ ಹೊರಗೂ ದೀಪಗಳ ಸಾಲ ನೀಡುವುದೇ ದೀಪಾವಳಿ ಎಂದಾಗಿದೆ. ಈ ಪರ್ವಕಾಲದಲ್ಲಿ ನಾಲ್ಕು ಬತ್ತಿಯನ್ನು ಇಟ್ಟು ದೀಪವನ್ನು ಬೆಳಗಿದರೆ ನಮ್ಮ ಎಲ್ಲ ಪಾಪ ಪರಿಹಾರವಾಗಿ ಇಷ್ಟಾರ್ಥವನ್ನು ಸಿದ್ಧಿಸುವ ಅತೀದೊಡ್ಡ ಯಜ್ಞವಾಗಿ ಈ ಹಬ್ಬವು ಮಾರ್ಪಾಡಾಗುತ್ತದೆ ಎನ್ನುವ ಉದ್ದೇಶದಿಂದ ಸಂಭ್ರಮ, ಸಡಗರದೊಂದಿಗೆ ಲಕ್ಷ್ಮೀ ರೂಪಿ ದೀಪವನ್ನು ನಾವು ಹಚ್ಚಬೇಕು.

ಹೇಗೆ ಬೆಳಗಿನ ಜಾವದಲ್ಲಿ ಸೂರ್ಯ ಇರುತ್ತಾನೋ ಅದೇ ಪ್ರಕಾರ ರಾತ್ರಿಯ ಜಾವದಲ್ಲಿ ದೀಪವನ್ನು ಹೊತ್ತಿಸಿಟ್ಟರೆ ಎಲ್ಲ ಪಿಶಾಚಾದಿ ರಾಕ್ಷಸಾಧಿ ಉಪದ್ರವಗಳು ದೂರ ಆಗುವುದು. ಆದ್ದರಿಂದ ಮನೆಯಲ್ಲಿ ದೀಪವನ್ನು ಹೊತ್ತಿಸಿಟ್ಟರೆ ನಮ್ಮ ಇಷ್ಟಾರ್ಥ ಗಳು ಕೈಗೂಡುವುದಲ್ಲದೆ ಎಲ್ಲ ಮನೆಯ ದುರಿತಗಳು, ಪಿಶಾಚ ಉಪದ್ರವಗಳು ಕೂಡ ದೂರವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಸಮಸ್ತ ಹಿಂದೂ ಬಾಂಧವರೆಲ್ಲರೂ ಈ ಹಬ್ಬವನ್ನು ಸಡಗರದಿಂದ ಸಂಭ್ರಮದಿಂದ ಆಚರಿಸುತ್ತಾರೆ.

ಲಕ್ಷ್ಮೀ ಪೂಜೆ: ಹಬ್ಬದ ಆಶ್ವೀಜ ಮಾಸದ ಅಮಾವಾಸ್ಯೆಯಂದು ಉಷಾ ಕಾಲದಲ್ಲಿ ದೀಪವನ್ನು ಹೊತ್ತಿಸಿಟ್ಟರೆ ನಮ್ಮ ದರಿದ್ರತನಗಳು ದಾರಿದ್ರೆಗಳು ನಿವಾರಣೆಯಾಗಿ ಸಂಪತ್ತು ಮನೆಯೊಳಗೆ ಸೇರುತ್ತದೆ ಎಂದು ಶಾಸ್ತ್ರಕಾರರು ಈ ದಿನದಂದು ಲಕ್ಷ್ಮೀ ಪೂಜೆಗೆ ಬಹಳ ಪ್ರಾಮುಖ್ಯವನ್ನು ಕೊಟ್ಟಿದ್ದಾರೆ.

ಈ ದಿನದಂದು ದೀಪದಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯವಿರುತ್ತದೆ ಎಂಬ ನಂಬಿಕೆ. ದೀಪಾವಳಿಯಂದು ಎಲ್ಲಿ ನಾವು ದೀಪವನ್ನು ತೋರಿಸುತ್ತೇವೋ ಅಥವಾ ಹಚ್ಚುತ್ತೇವೋ ಅಲ್ಲಿ ಲಕ್ಷ್ಮೀ ದೇವಿಯು ಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ.  ಅದಕ್ಕಾಗಿಯೇ ನಮ್ಮ ಪೂರ್ವಜರು ಲಕ್ಷ್ಮೀ ಪೂಜೆಯೆಂದು ಗೋವು, ತುಳಸಿ, ತಮ್ಮ ಕೃಷಿ ಭೂಮಿಗೆ ಮತ್ತು ಮನೆ ಯೊಳಗಡೆ ಭಕ್ತಿಯಿಂದ ದೀಪವನ್ನು ಹಚ್ಚಿ ಲಕೀÒ$¾ ದೇವಿಯಯನ್ನು ಬರಮಾಡಿಕೊಳ್ಳುತ್ತಿದ್ದರು, ಆಹ್ವಾನಿಸುತ್ತಿದ್ದರು. ದೀಪಾವಳಿಯಂದು ನಡೆಸುವ ಲಕ್ಷ್ಮೀ ಪೂಜೆಗೆ ವಿಶೇಷ ಮಹತ್ವವಿದೆ.

ವಿಶೇಷವಾಗಿ ಪೂರ್ಣಿಮ ಎಂದು ಲಕ್ಷ್ಮೀಯ ಆಗಮನ ಎಂದಿದ್ದರೂ ಕೂಡ ಈ ಅಶ್ವಿ‌ನಿ ಮಾಸದ ಅಮಾವಾಸ್ಯೆಯ ಪರ್ವದಿನದಂದು ಮಾತ್ರ ದೇವಿಯ ಆರಾಧನೆ ಮಾಡಿದ ಭಕ್ತರಿಗೆ ವಿಶೇಷ ಅನುಗ್ರಹ ಲಭಿಸುತ್ತದೆ ಎಂದು ಶಾಸ್ತ್ರಕಾರರು ನಿರ್ದೇಶಿಸಿದ್ದಾರೆ. ಅದೇ ಪ್ರಕಾರ ಲಕ್ಷ್ಮೀ ಪೂಜೆಯ ಈ ಪರ್ವ ಸಮಯದಂದು ಕುಬೇರನನ್ನು ಕೂಡ ಪ್ರಾರ್ಥಿಸಿದರೆ ಬಂದ ಸಂಪತ್ತು ಅಳಿಯದ ರೀತಿ ನಮ್ಮಲ್ಲೇ ಉಳಿಯುವುದು ಎಂಬ ನಂಬಿಕೆಯೂ ಇದೆ. ಇವೆಲ್ಲವ ಕೇವಲ ನಂಬಿಕೆಯಲ್ಲ. ಅನೂಚಾನವಾಗಿ ಪಾಲಿಕೊಂಡು ಬಂದ ಸಂಪ್ರದಾಯವೂ ಹೌದು.

 ಜೋತಿಷಿ , ವಿದ್ವಾನ್‌ ಕೆ.ಪಿ. ಶ್ರೀನಿವಾಸ ತಂತ್ರಿ, ಮಡುಂಬು

Advertisement

Udayavani is now on Telegram. Click here to join our channel and stay updated with the latest news.

Next