Advertisement

ಇಸ್ರೋ ವಿಶ್ವದಾಖಲೆ, ಏಕಕಾಲಕ್ಕೆ 104 ಉಪಗ್ರಹಗಳ ಉಡ್ಡಯನ

03:45 AM Feb 16, 2017 | Harsha Rao |

ಶ್ರೀಹರಿಕೋಟಾ: ಅತೀ ಕಡಿಮೆ ಖರ್ಚಿನಲ್ಲಿ ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಹಾರಿಬಿಡುವ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ) ನಭದಲ್ಲಿ ಇನ್ನೊಂದು ಅಳಿಸಲಾರದ ಋಜು ಬರೆದಿದೆ. ಬುಧವಾರ ಒಂದೇ ರಾಕೆಟಿನಲ್ಲಿ ಬರೋಬ್ಬರಿ 104 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸುವ ಮೂಲಕ ನಮ್ಮ ವಿಜ್ಞಾನಿಗಳು ಹೊಸದೊಂದು ಇತಿಹಾಸವನ್ನು ಬರೆದಿದ್ದಾರೆ.

Advertisement

ಇಸ್ರೋದ ಅತಿ ನೆಚ್ಚಿನ ಪಿಎಸ್‌ಎಲ್‌ವಿ ಸಿ-37 ಬಾಹ್ಯಾಕಾಶ ನೌಕೆಯು ಬುಧವಾರ ಬೆಳಗ್ಗೆ 9.28ಕ್ಕೆ ಸರಿಯಾಗಿ 1,378 ಕೆ.ಜಿ. ತೂಕದ 104 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶದತ್ತ ಪಯಣ ಬೆಳೆಸಿತು. ಇದಾದ ಕೆಲವೇ ಸಮಯದಲ್ಲಿ ಎಲ್ಲ ಉಪಗ್ರಹಗಳನ್ನೂ ಕಕ್ಷೆಗೆ ಸೇರಿಸುವಲ್ಲಿ ಅದು ಯಶಸ್ವಿಯಾಯಿತು. ಇದು ಪಿಎಸ್‌ಎಲ್‌ವಿಯ 38ನೇ ಯಶಸ್ವಿ ಉಡ್ಡಯನವಾಗಿದ್ದು, ಭಾರತದ ಹವಾಮಾನ ಪರಿವೀಕ್ಷಣ ಉಪಗ್ರಹ ಕಾಟೋìಸ್ಯಾಟ್‌-2 ಸರಣಿ ಹಾಗೂ 103 ಇತರ ನ್ಯಾನೋ ಉಪಗ್ರಹಗಳನ್ನು ಕೇವಲ 30 ನಿಮಿಷಗಳ ಅಂತರದಲ್ಲಿ ಕಕ್ಷೆಗೆ ಸೇರಿಸಿತು. ಈ ಮೂಲಕ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಸುತ್ತ ಜಗತ್ತಿನ ಕೆಮರಾಗಳು ತಿರುಗುವಂತೆ ಮಾಡಿತು. ಇದೇ ಮೊದಲ ಬಾರಿಗೆ ಭಾರತದ ನ್ಯಾನೋ ಉಪಗ್ರಹಗಳೂ ಕಕ್ಷೆ ಸೇರಿರುವುದು ಸ್ಮರಣೀಯ ಹೆಜ್ಜೆಯಾಗಿದೆ.

ದೊಡ್ಡ ಸಾಧನೆಯೆಂದೇ ಪರಿಗಣಿತವಾಗಿದ್ದ ಈ ಉಡ್ಡಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಇಸ್ರೋವು 2014ರಲ್ಲಿ ರಷ್ಯಾ ಬರೆದಿದ್ದ ದಾಖಲೆಯನ್ನು ಮುರಿದಿದೆ. ಆಗ ರಷ್ಯಾವು 37 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ ಉಡ್ಡಯನ ಮಾಡುವ ಮೂಲಕ ದಾಖಲೆ ಸೃಷ್ಟಿಸಿತ್ತು. 

ಮೋದಿ ಅಭಿನಂದನೆ 
ಇಸ್ರೋ ವಿಜ್ಞಾನಿಗಳ ಈ ಮಹತ್ವದ ಸಾಧನೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಸಹಿತ ಅನೇಕ ಗಣ್ಯರು ಸ್ವಾಗತಿಸಿದ್ದಾರೆ. ನಮ್ಮ ದೇಶಕ್ಕೆ ಇದೊಂದು ಹೆಮ್ಮೆಯ ಸಂಗತಿ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ಇನ್ನೊಂದು ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದಾರೆ. ಇಡೀ ದೇಶ ಅವರಿಗೆ ಸೆಲ್ಯೂಟ್‌ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಟ್ಟು  ಎಷ್ಟು ಉಪಗ್ರಹ?
ಭಾರತದ ಕಾಟೋìಸ್ಯಾಟ್‌- 2 ಮತ್ತು 2 ನ್ಯಾನೋ ಉಪಗ್ರಹ, ಅಮೆರಿಕದ 96 ಉಪಗ್ರಹಗಳು ಹಾಗೂ ಉಳಿದಂತೆ ಇಸ್ರೇಲ್‌, ಕಜಕಿಸ್ಥಾನ, ನೆದರ್ಲೆಂಡ್‌, ಸ್ವಿಟ್ಸರ್ಲಂಡ್‌, ಯುಎಇಯ ಉಪಗ್ರಹ ಗಳು ಪಿಎಸ್‌ಎಲ್‌ವಿ ಸಿ-37 ಮೂಲಕ ಕಕ್ಷೆ ಸೇರಿವೆ. 

Advertisement

ಉಡ್ಡಯನ ವಾಹಕ
ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ- ಸಿ37)

ವಾಹಕ ಎತ್ತರ :145 ಅಡಿ (44 ಮೀ.) 

ನಭ ಸೇರಿದ ಉಪಗ್ರಹಗಳು: ಒಟ್ಟು  104 

ಉಪಗ್ರಹಗಳ ಒಟ್ಟು ತೂಕ :1,378 ಕಿ.ಗ್ರಾಂ

ದಾಖಲೆ ಏಕೆ?
ಮೊದಲ ಬಾರಿಗೆ ಬೃಹತ್‌ ಸಂಖ್ಯೆಯಲ್ಲಿ ಉಪಗ್ರಹ ಉಡ್ಡಯನ 2014ರಲ್ಲಿ ರಷ್ಯಾ ಹಾರಿಬಿಟ್ಟಿದ್ದು ಕೇವಲ 39 ಉಪಗ್ರಹ
ಅದೇ ವರ್ಷ ಅಮೆರಿಕ ಹಾರಿಬಿಟ್ಟಿದ್ದು 32 ಉಪಗ್ರಹ 2016ರಲ್ಲಿ ಇಸ್ರೋ ಪಿಎಸ್‌ಎಲ್‌ ವಿ- ಸಿ34ನಿಂದ 20
ಉಪಗ್ರಹಗಳ ಉಡ್ಡಯನ ಇದೇ ಮೊದಲ ಬಾರಿಗೆ ಭಾರತದ 2 ನ್ಯಾನೋ ಉಪಗ್ರಹ ಉಡಾವಣೆ.

Advertisement

Udayavani is now on Telegram. Click here to join our channel and stay updated with the latest news.

Next