Advertisement

ಸಾರ್ಕ್‌ ಉಪಗ್ರಹ ಮೇ 5ರಂದು ನಭಕ್ಕೆ

11:01 AM May 01, 2017 | |

ಹೊಸದಿಲ್ಲಿ: ಸಾರ್ಕ್‌ ದೇಶಗಳಿಗೆ ಭಾರತ ಕೊಡುಗೆಯಾಗಿ ನೀಡುತ್ತಿರುವ ಉಪಗ್ರಹ ಮೇ 5ರಂದು ಉಡಾವಣೆಗೊಳ್ಳಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ “ಇಸ್ರೋ’ ಈ ಸಂವಹನ ಉಪಗ್ರಹವನ್ನು ತಯಾರಿಸಿದ್ದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆ ಮಾಡಲಿದೆ. 

Advertisement

ಮೂರು ವರ್ಷಗಳ ಅವಧಿಯಲ್ಲಿ ಇಸ್ರೋ 2230 ಕೇಜಿಯ ಉಪಗ್ರಹ ನಿರ್ಮಾಣ ಮಾಡಿದ್ದು, ಜಿಸ್ಯಾಟ್‌-9 ಎಂದು ಕರೆಯುತ್ತಿದೆ. ಈ ಉಪಗ್ರಹದಲ್ಲಿ 12 ಕೆಯು ಬ್ಯಾಂಡ್‌ನ‌ ಟ್ರಾನ್ಸ್‌ ಪೌಂಡರ್‌ ಇರಲಿದ್ದು, ನೆರೆಯ ದೇಶಗಳು ವಿವಿಧ ಟೀವಿ ಕಾರ್ಯಕ್ರಮಗಳ ಪ್ರಸಾರ, ಟೆಲಿ ಮೆಡಿಸಿನ್‌, ವಿಪತ್ತು ನಿರ್ವಹಣೆ, ನೈಸರ್ಗಿಕ ಸಂಪನ್ಮೂಲ ಶೋಧ, ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಪಡೆದುಕೊಳ್ಳಬಹು ದಾಗಿದೆ. ಒಟ್ಟು 450 ಕೋಟಿ ರೂ.ಗಳ ಉಪಗ್ರಹ ಯೋಜನೆ ಇದಾಗಿದ್ದು, ಉಪಗ್ರಹ ನಿರ್ಮಾಣಕ್ಕೆ ಭಾರತ 250 ಕೋಟಿ ರೂ. ವ್ಯಯಿಸಿದೆ. ಭಾರತದ ನೆರೆಹೊರೆಯ ದೇಶಗಳಲ್ಲಿ ಚೀನಾದ ಬಾಹುಳ್ಯ ಹೆಚ್ಚುತ್ತಿದ್ದು, ಇದಕ್ಕೆ ಪ್ರತಿಯಾಗಿ ಭಾರತ ನೆರೆಯ ದೇಶಗಳಿಗೆ ಉಪಗ್ರಹದ ಕೊಡುಗೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ  ಅಧಿಕಾರ ಬಂದ ಬಳಿಕ ನೆರೆಹೊರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಯ ಅಂಗವಾಗಿ ಸಾರ್ಕ್‌ ಉಪಗ್ರಹವನ್ನು ಉಡಾವಣೆ ಮಾಡುವುದಾಗಿ 2014ರಲ್ಲಿ ನೇಪಾಳದಲ್ಲಿ ನಡೆದಿದ್ದ ಸಾರ್ಕ್‌ ಸಮ್ಮೇಳನದಲ್ಲಿ ಘೋಷಿಸಿದ್ದರು. 8 ಸಾರ್ಕ್‌ ದೇಶಗಳಲ್ಲಿ 7 ದೇಶಗಳು (ಪಾಕಿಸ್ಥಾನ ಹೊರತುಪಡಿಸಿ) ನೇಪಾಳ, ಬಾಂಗ್ಲಾದೇಶ, ಭೂತಾನ್‌, ಶ್ರೀಲಂಕಾ, ಮಾಲ್ಡೀವ್ಸ್‌, ಆಪಾ^ನಿಸ್ತಾನಗಳು ಉಪಗ್ರಹ ಯೋಜನೆಯಲ್ಲಿ ಭಾಗಿಯಾಗಿವೆ. ಪಾಕಿಸ್ಥಾನ ಈ ಹಿಂದೆಯೇ ಭಾರತದ ಉಪಗ್ರಹ ಯೋಜನೆಯಲ್ಲಿ ಭಾಗಿಯಾಗಲು ಮತ್ತು “ಕೊಡುಗೆ’ಯನ್ನು ತಿರಸ್ಕರಿಸುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಭಾರತ “ಸಾರ್ಕ್‌ ಉಪಗ್ರಹ’ ಬದಲಿಗೆ ಬೇರೆಯ ಹೆಸರನ್ನು ಇಡಲು ಯೋಜಿಸಿದೆ ಎಂದು ಹೇಳಲಾಗಿದೆ.
 
ಪಾಕ್‌ ಯೋಜನೆ ತಿರಸ್ಕರಿಸಿದ್ದೇಕೆ?: ಸಾರ್ಕ್‌ ಉಪಗ್ರಹ ಯೋಜನೆಯಲ್ಲಿ ಭಾಗಿಯಾಗುವುದನ್ನು ಪಾಕ್‌ ಹಿಂದೆಯೇ ತಿರಸ್ಕರಿಸಿದೆ. ಕಾರಣ ಭಾರತದಡಿ ಕೆಲಸ ಮಾಡಬೇಕಾಗುತ್ತದೆ ಎನ್ನುವುದು. ಜೊತೆಗೆ ಚೀನಾದೊಂದಿಗೆ ಪಾಕ್‌ ಬಾಹ್ಯಾಕಾಶ, ಉಪಗ್ರಹ ಕೆಲಸಗಳನ್ನು ಮಾಡುತ್ತಿದ್ದು, ಅದನ್ನು ಭಾರತದೊಂದಿಗೆ ಮಾಡಲು ತಯಾರಿಲ್ಲ. ಇನ್ನೊಂದು ರಾಜಕೀಯ ಕಾರಣಕ್ಕಾಗಿ ಅಲ್ಲಿನ ಆಡಳಿತ ಭಾರತದ ಪ್ರಸ್ತಾವವನ್ನು ತಿರಸ್ಕರಿಸಿತ್ತು.

ಬೆಲೆ ಕಟ್ಟಲಾಗದ ಕೊಡುಗೆ
ಭಾರತ ನೆರೆಯ ರಾಷ್ಟ್ರಗಳೊಂದಿಗೆ “ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಧ್ಯೇಯ ದಡಿ ಸಂಬಂಧ ವೃದ್ಧಿಗೆ ಶ್ರಮಿಸುತ್ತಿದ್ದು, “ಬೆಲೆ ಕಟ್ಟಲಾಗದ ಕೊಡುಗೆ’ಯೊಂದನ್ನು ಸಮರ್ಪಿಸುತ್ತಿದೆ ಎಂದು ಉಪಗ್ರಹ ಉಡ್ಡಯನವನ್ನು  ಪ್ರಧಾನಿ ಬಣ್ಣಿಸಿದ್ದಾರೆ. ಎಲ್ಲರೊಂದಿಗೂ ಸಹಕಾರ, ಎಲ್ಲರೊಂ ದಿಗೂ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡೇ ನಾವು ಈ ಯೋಜನೆ ಆರಂಭಿಸಿದ್ದೇವೆ. ಎಲ್ಲರೊಂದಿಗೂ ಅಭಿವೃದ್ಧಿ ಎಂಬುದು ಭಾರತಕ್ಕೆ ಮಾತ್ರ ಸೀಮಿತ ವಾದ್ದಲ್ಲ. ಬದಲಿಗೆ ವಿಶ್ವವ್ಯಾಪಿಯಾದದ್ದು. ನೆರೆಯ ದೇಶಗಳೊಂದಿಗೆ ಸಹಕಾರದೊಂದಿಗೆ ಅಲ್ಲಿಯೂ ಅಭಿವೃದ್ಧಿಯ ಅಗತ್ಯವಿದೆ ಎಂದು ಪ್ರಧಾನಿ ತಮ್ಮ ರೇಡಿಯೋ ಕಾರ್ಯಕ್ರಮ “ಮನ್‌ಕೀ ಬಾತ್‌’ನಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next