ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಗೆ ಬಳಸಲಾಗುವ, ಇಸ್ರೋ ವತಿಯಿಂದಲೇ ಅಭಿವೃದ್ಧಿಪಡಿಸಲಾಗಿರುವ “ವಿಕಾಸ್’ ಹೆಸರಿನ “ಲಿಕ್ವಿಡ್ ಪ್ರೊಪೆಲ್ಲೆಂಟ್’ ಆಧಾರಿತ ವಿಕಾಸ್ ಎಂಜಿನ್‌ನ ಯಶಸ್ವಿ ಪರೀಕ್ಷೆ, ಶುಕ್ರವಾರ ಜರುಗಿದೆ.
ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ (ಐಪಿಆರ್‌ಸಿ) ಈ ಎಂಜಿನ್ ಅನ್ನು 25 ಸೆಕೆಂಡ್‌ಗಳ ಕಾಲ ಚಾಲನೆಗೊಳಿಸಲಾಗಿತ್ತು.
ಉಡಾವಣೆಗೊಂಡ ನಂತರ ವಾಯು ಒತ್ತಡ ಬದಲಾದಾಗ ಫ್ಯೂಯೆಲ್ ಆಕ್ಸಿಡೈಸರ್ ರೇಶಿಯೋ ಅಥವಾ ಇಂಧನ ಚೇಂಬರ್‌ನಲ್ಲಿ ಒತ್ತಡ ಹೆಚ್ಚಾದಾಗ ಇಂಜಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಎಂಜಿನ್ ನಿರೀಕ್ಷಿತ ಮಟ್ಟದ ಫಲಿತಾಂಶ ನೀಡಿದೆ ಎನ್ನಲಾಗಿದೆ.
ಇದಲ್ಲದೆ ಇನ್ನೂ ಮೂರು ಬಾರಿ ಎಂಜಿನ್‌ನ ಪರೀಕ್ಷೆ ನಡೆಸಲಾಗುತ್ತದೆ. ಆ ಮೂರು ಪರೀಕ್ಷೆಗಳಲ್ಲಿ ಒಟ್ಟಾರೆ 75 ಸೆಕೆಂಡ್‌ಗಳವರೆಗೆ ಎಂಜಿನ್‌ನನ್ನು ಚಾಲನೆಗೊಳಿಸಲಾಗುತ್ತದೆ. ಆ ಮೂರೂ ಪರೀಕ್ಷೆಗಳು ಮುಗಿದ ನಂತರ, ನಾಲ್ಕನೇ ಟೆಸ್ಟ್‌ನಲ್ಲಿ ಎಂಜಿನ್‌ನನ್ನು ದೀರ್ಘಾವಧಿ (ಸುಮಾರು 240 ಸೆಕೆಂಡ್‌ಗಳ ಕಾಲ) ಚಾಲನೆಯಲ್ಲಿಡಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ಎಂಜಿನ್ ಉತ್ತಮ ಕ್ಷಮತೆ ತೋರಿದರೆ ಅದನ್ನು ಗಗನಯಾತ್ರೆಗೆ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಮೂರನೆಯದ್ದು..
ಈಗಾಗಲೇ “ವಿಕಾಸ್’ ಮಾದರಿಯ ಮತ್ತೆರಡು ಇಂಜಿನ್‌ಗಳನ್ನು ಸಿದ್ಧಪಡಿಸಿರುವ ಇಸ್ರೋ, ಅವನ್ನು ತಲಾ 240 ಸೆಕೆಂಡಗಳ ಕಾಲ ಪರೀಕ್ಷೆಗೊಳಪಡಿಸಿದೆ. ಶುಕ್ರವಾರದಂದು ಪರೀಕ್ಷೆ ನಡೆಸಲಾಗಿರುವುದು ಮೂರನೇ ಎಂಜಿನ್ ವಿಕಾಸ್ ಆಗಿದೆ.